ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಗಮಕ ಸಪ್ತಾಹದ ಬಳಿಕ ಶ್ರೀ ಜನಾರ್ದನ ಸ್ವಾಮಿ ಯಕ್ಷಕಲಾ ವೇದಿಕೆಯ ನೇತೃತ್ವದಲ್ಲಿ ಜು.6 ರಿಂದ 12ರ ವರೆಗೆ ಪ್ರತಿ ಸಂಜೆ ವಿವಿಧ ಹವ್ಯಾಸಿ ತಂಡಗಳಿಂದ ಕುಬಣೂರು ಶ್ರೀಧರ ರಾವ್ ಸಂಸ್ಮರಣಾರ್ಥ ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಂಪನ್ನಗೊಂಡಿತು.
ಮೊದಲ ದಿನ ಸರಪಾಡಿಯ ಶ್ರೀ ಶರಭೇಶ್ವರ ಯಕ್ಷಗಾನ ಸಂಘದ ಕಲಾವಿದರು ಉದಯಕುಮಾರ್ ಜೈನ್ ಹಾಡುಗಾರಿಕೆಯಲ್ಲಿ “ಜಾಂಬವತಿ ಕಲ್ಯಾಣ’ ಪ್ರಸಂಗದ ತಾಳಮದ್ದಳೆಯನ್ನು ಪ್ರದರ್ಶಿಸಿದರು. ಉದಯಶಂಕರ ಭಟ್ (ಬಲರಾಮ), ರತ್ನಾಕರ ಇಂದ್ರ (ನಾರದ), ಹರಿಶ್ಚಂದ್ರ ಶೆಟ್ಟಿ (ಕೃಷ್ಣ) ಮತ್ತು ದಿನೇಶ ಶೆಟ್ಟಿ (ಜಾಂಬವಂತ) ಪಾತ್ರ ನಿರ್ವಹಿಸಿದ್ದರು.
ಎರಡನೇ ದಿನ ವೆಂಕಟ್ರಮಣ ರಾವ್ ಹಾಡುಗಾರಿಕೆಯಲ್ಲಿ ಶ್ರೇಯಸ್ ಪಾಳಂದೆ ಮತ್ತು ಆದಿತ್ಯ ಹೊಳ್ಳರ ಹಿಮ್ಮೇಳದೊಂದಿಗೆ “ಸೀತಾ ಕಲ್ಯಾಣ’ ಪ್ರಸಂಗದ ತಾಳಮದ್ದಳೆ ಮನೋಜ್ಞವಾಗಿ ಮೂಡಿಬಂತು. ಸುರೇಶ ಕುದ್ರೆಂತಾಯ (ದಶರಥ), ರಾಜಾರಾಮ ಶರ್ಮ (ವಿಶ್ವಾಮಿತ್ರ), ಶ್ರುತಕೀರ್ತಿರಾಜ್ (ಸುಬಾಹು), ಮಧೂರು ಮೋಹನ ಕಲ್ಲೂರಾಯ, ರಾಮಕೃಷ್ಣ ಭಟ್, ಲಕ್ಷ್ಮಣ ಗೌಡ (ರಾಮ), ವೆಂಕಪ್ಪ ಸುವರ್ಣ (ತಾಟಕಿ) ಮತ್ತು ಶರತ್ ತುಳುಪುಳೆ (ರಾವಣ) ಪಾತ್ರಗಳಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ.
ಮೂರನೇ ದಿನ “ಲಕ್ಷ್ಮೀ ಸ್ವಯಂವರ’ ಆಖ್ಯಾನವನ್ನು ಪುತ್ತೂರು ಬೊಳುವಾರಿನ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅರ್ಥಧಾರಿಗಳು ವಿದ್ವತೂ³ರ್ಣ ಅರ್ಥಗಾರಿಕೆಯಿಂದ ಕಾರ್ಯಕ್ರಮದ ಮೌಲ್ಯ ವರ್ಧಿಸಿದರು. ಶುಭಾ ಅಡಿಗ (ಬಲಿ ಚಕ್ರವರ್ತಿ), ಹರಿಣಾಕ್ಷಿ ಶೆಟ್ಟಿ (ದೇವೇಂದ್ರ), ಕಿಶೋರಿ ದುಗ್ಗಪ್ಪ (ವಾಲಿ), ಶುಭಾ ಗಣೇಶ್ (ವಿಷ್ಣು), ಪ್ರೇಮಲತಾ ರಾವ್ (ನಾರದ), ಶಾರದಾ ಅರಸ್ (ದೂರ್ವಾಸ, ಲಕ್ಷ್ಮೀ) ನಿರ್ವಹಿಸಿದ್ದು, ವೆಂಕಟ್ರಮಣ ರಾವ್ (ಭಾಗವತರು) ಹಾಗೂ ಸತ್ಯಜಿತ್ ರಾಯಿ ಮತ್ತು ಜನಾರ್ದನ ಹಿಮ್ಮೇಳದಲ್ಲಿ ಸಹಕರಿಸಿದ್ದರು.ನಾಲ್ಕನೇ ದಿನ ಬಳಂಜ ಶ್ರೀ ಪಂಚಲಿಂಗೇಶ್ವರ ಯಕ್ಷಕೂಟದ ಕಲಾವಿದರು “ಅಹಲ್ಯಾ ವಿವಾಹ’ ಪ್ರಸಂಗವನ್ನು ಸಾದರ ಪಡಿಸಿದರು. ಜಯರಾಮ ಕುದ್ರೆಂತಾಯ, ಶ್ರೀವಿದ್ಯಾ ಐತಾಳ್, ಶ್ರೇಯಸ್ ಮತ್ತು ಆದಿತ್ಯ ಹೊಳ್ಳ ಹಿಮ್ಮೇಳ ಸಹಕಾರದಲ್ಲಿ ನಾರಾಯಣ ಭಟ್ (ಬ್ರಹ್ಮ), ದಿನೇಶ್ ರಾವ್ (ನಾರದ), ಹರಿಶ್ಚಂದ್ರ ಆಚಾರ್ಯ (ದೇವೇಂದ್ರ), ರಾಮಕೃಷ್ಣ ಭಟ್ (ಗೌತಮ), ಕೃಷ್ಣ ದೇವಾಡಿಗ (ಅಹಲ್ಯ), ಶರತ್ ತುಳುಪುಳೆ (ರಾಮ), ಮತ್ತು ಆನಂದ ಆಚಾರ್ಯ (ವಿಶ್ವಾಮಿತ್ರ) ಪಾತ್ರಗಳನ್ನು ಸಮರ್ಥವಾಗಿ ಪ್ರತಿನಿಧಿಸಿದ್ದರು.
ಐದನೇಯ ದಿನ ಉಜಿರೆ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಶ್ರೀ ಯಕ್ಷನಿನಾದ ತಂಡ “ಪವನ ಪೌತ್ರ ಕಲ್ಯಾಣ’ ಕಥಾಭಾಗವನ್ನು ಕೆ.ಪಿ. ಪ್ರಸಾದ್ ಮತ್ತು ಬಲಿಪ ಪ್ರಸಾದರ ಹಾಡುಗಾರಿಕೆ, ಆದಿತ್ಯ, ಶ್ರೇಯಸ್ ಮತ್ತು ಸತ್ಯಜಿತ್ ರಾಯಿ ಹಿಮ್ಮೇಳ ಸಹಕಾರದೊಂದಿಗೆ ಪ್ರಸ್ತುತ ಪಡಿಸಿದರು. ಡಾ| ಜಿ.ಪಿ. ಹೆಗ್ಡೆ (ಭಗದತ್ತ), ಡಾ| ಸತ್ಯನಾರಾಯಣ (ಭೀಮ), ಸುಬ್ರಹ್ಮಣ್ಯ ಭಟ್ (ಘಟೋದ್ಗಜ), ಸುಖೇಶ್ (ಕಾಮಕಟಂಕಟೆ), ಕೃಷ್ಣ ಪ್ರಸಾದ್ (ಧರ್ಮರಾಯ), ಲಕ್ಷ್ಮೀಸಾಗರ್ (ಕೃಷ್ಣ) ಮತ್ತು ಜಯಕುಮಾರ್ (ಗರುಡ) ತಮ್ಮ ಪಾತ್ರಗಳನ್ನು ಯಥೋಚಿತವಾಗಿ ಪ್ರತಿನಿಧಿಸಿ ವಿನೂತನ ಪ್ರಯೋಗಕ್ಕೆ ನ್ಯಾಯ ದೊರಕಿಸಿದ್ದಾರೆ.ಆರನೇ ದಿನ ಗುರುವಾಯನಕೆರೆ ಪಣಿಜಾಲು ಶ್ರೀ ಬನಶಂಕರಿ ಯಕ್ಷಗಾನ ಸಂಘದ ಸದಸ್ಯರು “ಗಿರಿಜಾ ಕಲ್ಯಾಣ’ ಪೌರಾಣಿಕ ಪ್ರಸಂಗವನ್ನು ಗಣಪತಿ ಭಟ್ ಆನೆಕಲ್ಲು ಮತ್ತು ವಾಸುದೇವ ಭಟ್ ಎರ್ಮಾಳು ಅವರ ಸುಮಧುರ ಕಂಠ ಸಿರಿಯಲ್ಲಿ ಪ್ರಸ್ತುತಪಡಿಸಿದ್ದರು. ಜನಾರ್ದನ ತೋಳ್ಪಾಡಿತ್ತಾಯ, ಶ್ರೇಯಸ್, ಆದಿತ್ಯ ಹೊಳ್ಳ ಹಿಮ್ಮೇಳದಲ್ಲಿ ಸಹಕರಿಸಿದ್ದರು. ಶೈಲೇಶ್ ಠೊಸರ್ (ದೇವೇಂದ್ರ), ಅಮರೇಶ್ ಜೋಶಿ (ಬ್ರಹ್ಮ), ಉದಯ ಶಂಕರ ಭಟ್ (ತಾರಕಾಸುರ), ಶಿವಾನಂದ ಭಂಡಾರಿ (ಮನ್ಮಥ) ಸಂತೋಷ್ ಕೇಳ್ಕರ್ (ಶಿವ) ಮತ್ತು ರತ್ನಾಕರ ಇಂದ್ರ (ಪಾರ್ವತಿ) ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಏಳನೇ ದಿನ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬ ಯಕ್ಷಗಾನ ಸಂಘದ ಅರ್ಥಧಾರಿಗಳು “ದೇವಯಾನಿ ಕಲ್ಯಾಣ’ ಪ್ರಸಂಗದೊಂದಿಗೆ ಸಪ್ತಾಹಕ್ಕೆ ಶುಭ ಮಂಗಳ ಹಾಡಿದರು. ಹಾಡುಗಾರಿಕೆಯಲ್ಲಿ ಮಹೇಶ್ ಕನ್ಯಾಡಿ ಮತ್ತು ಪದ್ಮನಾಭ ಕುಲಾಲ್, ಹಿಮ್ಮೇಳದಲ್ಲಿ ಶ್ರೇಯಸ್, ಸತ್ಯಜಿತ್ ರಾಯಿ, ಆದಿತ್ಯ ಹೊಳ್ಳ ಮತ್ತು ಶ್ರೀಪತಿ ಭಟ್ ಇಳಂತಿಲ ಸಹಕರಿಸಿದ್ದರು. ಗುಡ್ಡಪ್ಪ ಗೌಡ (ಯಯಾತಿ), ನಾರಾಯಣ ಭಟ್ (ವೃಷಪರ್ವ/ಶರ್ಮಿಷ್ಠೆ), ದಿವಾಕರ ಆಚಾರ್ಯ (ದೇವಯಾನಿ) ಮತ್ತು ಹರೀಶ ಆಚಾರ್ಯ (ಶುಕ್ರಾಚಾರ್ಯ) ತಮ್ಮ ಪ್ರಬುದ್ದ ಅರ್ಥಗಾರಿಕೆಯಿಂದ ತಾಳಮದ್ದಳೆ ಸಪ್ತಾಹದ ಒಟ್ಟಂದಕ್ಕೆ ಕೀರ್ತಿ ಕಲಶ ವಿರಿಸಿದಂತಾಗಿದೆ.
ಹಿರಿಯ-ಕಿರಿಯ ಕಲಾವಿದರಿಗೆ ಯಕ್ಷಗಾನ ತಾಳಮದ್ದಳೆ ಸಪ್ತಾಹ ಕಲಿಕೆಯ ಜತೆಗೆ ಪೌರಾಣಿಕ ಜ್ಞಾನ ಸಂಪನ್ನತೆಗೂ ವೇದಿಕೆಯಾಗಿ ಕಲಾಭಿಮಾನಿಗಳಿಗೆ ಮನರಂಜನೆಯ ರಸದೌತಣ ನೀಡಿದೆ.ಎಂಟನೇ ದಿನ ಹಿರಿಯ ಭಾಗವತ ಕುಬಣೂರು ಶ್ರೀಧರ ರಾಯರ ಸಂಸ್ಮರಣೆಯಂಗವಾಗಿ ಜಯರಾಮ ಕುದ್ರೆಂತಾಯರಿಗೆ ಗೌರವ ಸಮ್ಮಾನ ಹಾಗೂ ಹಿರಿಯ ಕಿರಿಯ ಕಲಾವಿದರಿಂದ “ರತಿಕಲ್ಯಾಣ’ ಬಯಲಾಟ ತಾಳಮದ್ದಳೆ ಸಪ್ತಾಹಕ್ಕೆ ಶಿಖರ ಪ್ರಾಯವಾಗಿತ್ತು.
ಸಾಂತೂರು ಶ್ರೀನಿವಾಸ ತಂತ್ರಿ