Advertisement

ತಲಕಾಡು ಪಂಚಲಿಂಗದರ್ಶನ ಮಹೋತ್ಸವ: ಏಕಕಾಲದಲ್ಲಿ ಪಂಚಲಿಂಗಗಳಿಗೂ ಮಹಾನ್ಯಾಸಪೂರ್ವಕ ರುದ್ರಾಭಿಷೇಕ

07:55 AM Dec 14, 2020 | Mithun PG |

ಮೈಸೂರು: ತಿ. ನರಸೀಪುರ ತಾಲೂಕು ತಲಕಾಡಿನ ಪಂಚಲಿಂಗದರ್ಶನ ಮಹೋತ್ಸವದ ಪ್ರಮುಖ ಕಾರ್ಯಕ್ರಮ ಪಂಚಲಿಂಗ ದರ್ಶನ ಪೂಜಾ ಮಹೋತ್ಸವವು ಕಡೆ ಕಾರ್ತಿಕ ಸೋಮವಾರದಂದು ಮುಂಜಾನೆ 4 30ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ನೆರವೇರಿತು.

Advertisement

ಸೋಮವಾರ ಮುಂಜಾನೆ 4.30ಕ್ಕೆ ಸಲ್ಲುವ ಶುಭ ಲಗ್ನವಾದ ವೃಶ್ಚಿಕ ಲಗ್ನದಲ್ಲಿ ಏಕ ಕಾಲದಲ್ಲಿ ಪಂಚಲಿಂಗಗಳಿಗೂ ಮಹಾನ್ಯಾಸಪೂರ್ವಕ ರುದ್ರ ಅಭಿಷೇಕ ನೆರವೇರಿಸಲಾಯಿತು. ಪ್ರಧಾನ ದೇಗುಲವಾದ ವೈದ್ಯನಾಥೇಶ್ವರನಿಗೆ ಆನಂದ್ ದೀಕ್ಷಿತ್ ಅವರ ನೇತೃತ್ವದಲ್ಲಿ ರುದ್ರ ಪಾರಾಯಣದೊಂದಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ನೆರವೇರಿತು.

ಕಾರ್ತಿಕ ಮಾಸದಲ್ಲಿ ಐದು ಸೋಮವಾರಗಳು ಬಂದು, ಕಡೆಯ ಸೋಮವಾರ ಅಮವಾಸ್ಯೆ ಬಂದರೆ ಆ ದಿನ ಪಂಚಲಿಂಗ ದರ್ಶನ ಪೂಜಾ ಮಹೋತ್ಸವ ನಡೆಯುತ್ತದೆ. ಇದು ಮಾತ್ರವಲ್ಲದೇ ಅನುರಾಧ, ಜೇಷ್ಠಾ ಅಥವಾ ವಿಶಾಖ ನಕ್ಷತ್ರ ಗಳಲ್ಲಿ  ಯಾವುದಾದರೊಂದು ನಕ್ಷತ್ರ ಬಂದು ಸೂರ್ಯ ಚಂದ್ರರಿಬ್ಬರೂ ವೃಶ್ಚಿಕ ಲಗ್ನದಲ್ಲಿ ಸೇರಿದಾಗ ಆ ದಿನದ ಉಷಾ ಕಾಲದಲ್ಲಿ ಬರುವ ಕುಹೂ ಯೋಗ, ಅಥವಾ ಪದ್ಮಕ ಯೋಗವು ಅತ್ಯಂತ ಫಲಪ್ರದಾಯಕ ಕಾಲವಾಗಿರುತ್ತದೆ. ಈ ವೇಳೆ ಪಂಚಲಿಂಗ ದರ್ಶನದ ಪುಣ್ಯಕಾಲ ಎಂದು ಕರೆಯಲಾಗುತ್ತದೆ.

ಈ ಪುಣ್ಯ ಕಾಲ ಪ್ರತಿ ಸಂವತ್ಸರದಲ್ಲಿ ಬರುವುದಿಲ್ಲ. 3 ರಿಂದ 14 ವರ್ಷದೊಳಗೆ ಒಮ್ಮೆ ಒಂದು ಸಂವತ್ಸರದಲ್ಲಿ ಬರುತ್ತದೆ. ಆಸಂವತ್ಸರದಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಜರುಗಲಿದೆ.  ಪಂಚಲಿಂಗ ದರ್ಶನ ದಿನದಂದು ಭಕ್ತರು ನದಿಯಲ್ಲಿ ಮಿಂದು ಐದು ದೇವಾಲಯಗಳಿಗೂ ಭೇಟಿ ನೀಡಿ ಪಂಚಲಿಂಗ ದರ್ಶನ ಮಾಡಿ ಪುನೀತರಾಗುವುದು ವಾಡಿಕೆ. ತಲಕಾಡಿನಲ್ಲಿ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಪಂಚಮುಖಗಳ ಶಿವನನ್ನು  ಅರ್ಕೆಶ್ವರ, ಮುಡುಕುತೊರೆ ಮಲ್ಲಿಕಾರ್ಜುನ, ಮರಳೇಶ್ವರ, ಪಾತಾಳೇಶ್ವರ, ವೈದ್ಯನಾಥೇಶ್ವರ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತಿದ್ದು, ಈಶಾನ ಮುಖವೇ ಶಿವನ ಪ್ರಧಾನ ಮುಖವಾದಕಾರಣ ವೈದ್ಯಾನಾಥೇಶ್ವರನಿಗೆ ಅಗ್ರ ಪೂಜೆ ಸಲ್ಲಿಸಲಾಗುತ್ತದೆ.

Advertisement

ಕಳೆದ 2013 ರಲ್ಲಿ ನಡೆದ ಪಂಚಲಿಂಗ ದರ್ಶನದಲ್ಲಿ ನಡೆದ 10 ದಿನಗಳ ಉತ್ಸವದಲ್ಲಿ 6-7 ಲಕ್ಷ ಮಂದಿ ರಾಜ್ಯವಲ್ಲದೇ ನೆರೆ ರಾಜ್ಯಗಳಿಂದ ಭಕ್ತರು ಭಾಗವಹಿಸಿದ್ದರು. ಈ ಬಾರಿ ಕೋವಿಡ್  ಹಿನ್ನೆಲೆಯಲ್ಲಿ ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶ ಲಭ್ಯವಾಗಿದ್ದು, ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯ ಮಾಡಿಸಿಕೊಂಡು ದರ್ಶನ ಮಾಡಲು ಸೂಚಿಸಲಾಗಿದೆ.

ಪಂಚಲಿಂಗ ದರ್ಶನದ ವಿಷಯ ಪೂಜೋತ್ಸವ ಕಾರ್ಯಕ್ರಮ ವರ್ಚ್ಯುಯಲ್ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.

ಇದನ್ನೂ ಓದಿ: ವ್ಯಾಪಾರ, ವ್ಯವಹಾರದಲ್ಲಿ ಮುನ್ನಡೆ; ವಾಹನ ಚಲಾಯಿಸುವಾಗ ಜಾಗ್ರತೆ: ಹೇಗಿದೆ ಇಂದಿನ ಗ್ರಹಬಲ ?

Advertisement

Udayavani is now on Telegram. Click here to join our channel and stay updated with the latest news.

Next