Advertisement

ಸಿದ್ದರಾಮಯ್ಯ ಪಕ್ಷ ನಿಷ್ಠೆ ಇಲ್ಲದ ತಲಾಕ್‌ ರಾಜಕಾರಣಿ: ಈಶ್ವರಪ್ಪ ಟೀಕೆ

12:46 PM Apr 05, 2017 | Team Udayavani |

ಮೈಸೂರು: ಅಧಿಕಾರದ ಆಸೆಗಾಗಿ ಪಕ್ಷ ಬದಲಿಸುವ ಸಿದ್ದರಾಮಯ್ಯ ತಲಾಕ್‌ ರಾಜಕಾರಣಿ. ಪಕ್ಷನಿಷ್ಠೆಯ ಬಗ್ಗೆ ಅವರಿಂದ ನಾನು ಪಾಠ ಕಲಿಯಬೇಕಾದ ಅಗತ್ಯವಿಲ್ಲ ಎಂದು ವಿಪ ವಿರೋಧಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಕಿಡಿಕಾರಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ರಾಜಕೀಯ ಹುಟ್ಟು ಬಿಜೆಪಿಯಲ್ಲಿ ಆಗಿದ್ದು, ಸಾವು ಕೂಡ ಬಿಜೆಪಿಯಲ್ಲೇ ಆಗಲಿದೆ. ಬಿಜೆಪಿ ನನ್ನ ಪಾಲಿಗೆ ತಾಯಿ ಇದ್ದಂತೆ. ತಾಯಿ ಹಾಲು ಕುಡಿದಿರುವ ತಾವು ತಾಯಿಗೆ ವಿಷ ಉಣಿಸುವ ಕೆಲಸ ಮಾಡುವುದಿಲ್ಲ. ಹೀಗಾಗಿ ತಮ್ಮ ಪಕ್ಷ ನಿಷ್ಠೆಯ ಬಗ್ಗೆ ಸಿದ್ದರಾಮಯ್ಯ ಮಾತನಾಡಿರುವುದು ನನ್ನ ತಾಯಿಯ ಬಗ್ಗೆ ಮಾತನಾಡಿದಂತಾಗಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದರು. 

ಪಕ್ಷ ನಿಷ್ಠೆ ಗೊತ್ತಿಲ್ಲ: ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಹಾರುವ ಸಿದ್ದರಾಮಯ್ಯ ಅವರಿಗೆ ಪಕ್ಷ ನಿಷ್ಠೆ ಎಂದರೆ ಏನೆಂಬುದು ತಿಳಿಯದಿರುವುದರಿಂದ ಬೇರೆ ಪಕ್ಷದವರ ಬಗ್ಗೆ ಮಾತನಾಡುತ್ತಾರೆ. ವಿರೋಧ ಪಕ್ಷದ ನಾಯಕನ ಸ್ಥಾನದ ಆಸೆಗಾಗಿ ಈ ಹಿಂದೆ ಜೆಡಿಎಸ್‌ನಿಂದ ಕಾಂಗ್ರೆಸ್‌ ಸೇರಿದರು. ಒಂದೊಮ್ಮೆ ಮುಂದಿನ ಚುನಾ ವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿದ್ದಲ್ಲಿ ಕಾಂಗ್ರೆಸ್‌ ಪಕ್ಷವನ್ನು ತ್ಯಜಿಸುತ್ತಾರೆ.

ಹೀಗಾಗಿ ಅಧಿಕಾರಕ್ಕಾಗಿ ಪಕ್ಷವನ್ನು ಬದಲಿಸುವ ಸಿದ್ದರಾಮಯ್ಯ, ತಲಾಕ್‌ ರಾಜಕಾರಣಿಯಾಗಿದ್ದು, ಇವರಿಂದ ಪಕ್ಷನಿಷ್ಠೆಯ ಕುರಿತು ಪಾಠ ಕಲಿಯುವ ಅಗತ್ಯವೂ ಇಲ್ಲ. ಪಕ್ಷನಿಷ್ಠೆ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅರ್ಹರಲ್ಲ, ಆದ್ದರಿಂದ ತಮ್ಮ ಪಕ್ಷನಿಷ್ಠೆಯ ಬಗ್ಗೆ ನೀಡಿರುವ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳಲ್ಲಿ ವಿಶ್ವಾಸ ತುಂಬಿ: ರಾಜ್ಯದಲ್ಲಿ ಮರಳು ಮಾಫಿಯಾ ಮಿತಿ ಮೀರಿದ್ದು, ಮಾಫಿಯಾಗಳ ಕೈಯಲ್ಲಿ ಸರ್ಕಾರ ಸಿಲುಕಿದೆ. ಅಕ್ರಮ ಮರಳು ಮಾಫಿಯಾ ಮೇಲೆ ದಾಳಿ ನಡೆಸಿದ ಅಧಿಕಾರಿಗಳ ಮೇಲೆ ದುಷ್ಕರ್ಮಿಗಳು ಹಲ್ಲೆಗೆ ಮುಂದಾಗಿದ್ದಾರೆ. ಅಕ್ರಮ ಮರಳು ಮಾಫಿಯಾ ದಂಧೆಗೆ ಸರ್ಕಾರವೇ ಕುಮ್ಮಕ್ಕು ನೀಡುತ್ತಿದ್ದು, ಇವೆಲ್ಲದರಿಂದ ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಜೀವಬೆದರಿಕೆ ಇದೆ.

Advertisement

ಹೀಗಾಗಿ ಅನೇಕ ಅಧಿಕಾರಿಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ನೈತಿಕತೆಯಿದ್ದಲ್ಲಿ ಕೂಡಲೇ ಮರಳು ಮಾಫಿಯಾ ನಿಯಂತ್ರಿಸಿ, ತಪ್ಪಿತಸ್ಥರನ್ನು ಬಂಧಿಸಿ ಕ್ರಮಕೈಗೊಳ್ಳಬೇಕು. ಅಲ್ಲದೆ ಪ್ರಾಣಭಯದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಧೈರ್ಯ, ವಿಶ್ವಾಸ ತುಂಬಬೇಕೆಂದು ಎಂದರು.

ನಿಯಂತ್ರಣ ಸರಿಯಲ್ಲ: ರಾಜ್ಯದಲ್ಲಿ ಮಾಧ್ಯಮಗಳ ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರದ ಕ್ರಮವನ್ನು ತಾವು ವಿರೋಧಿಸಿದ್ದು, ಯಾವುದೋ ಒಂದು ವಾಹಿನಿ ಅಥವಾ ಪತ್ರಿಕೆ ರಾಜಕಾರಣಿಗಳ ಬಗ್ಗೆ ಸುದ್ದಿ ಪ್ರಕಟಿಸಿದರೆ ಎಲ್ಲಾ ವಾಹಿನಿ, ಪತ್ರಿಕೆಗಳ ವಿರುದ್ಧ ಕ್ರಮಕೈಗೊಳ್ಳುವುದು ಸರಿಯಲ್ಲ. ಇಂತಹ ಸಂದರ್ಭದಲಿ ವಾಹಿನಿ ಹಾಗೂ ಪತ್ರಿಕೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕಿದೆ ಎಂದು ಈಶ್ವರಪ್ಪ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next