ಹೊಸದಿಲ್ಲಿ : ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ಜಿಗುಟಿನ ಸವಾಲನ್ನು ನಿಭಾಯಿಸುವ ನಿಟ್ಟಿನಲ್ಲಿ ‘ಪಕ್ಷವು ಶಾಸಕರು ಮತ್ತು ಕಾರ್ಯಕರ್ತರ ಅಭಿಪ್ರಾಯಗಳನ್ನು ಕಲೆ ಹಾಕಿ ಸಮಾಲೋಚನೆ ನಡೆಸುತ್ತಿದೆ ‘ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಗುರುವಾರ ಹೇಳಿದ್ದಾರೆ.
ಈ ನಿಟ್ಟಿನಲ್ಲಿ ರಾಹುಲ್ ಗಾಂಧಿ ಪ್ರಕೃತ ತಮ್ಮ ನಿವಾಸದಲ್ಲಿ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಬಿರುಸಿನ ಸಮಾಲೋಚನೆ ನಡೆಸುತ್ತಿದ್ದಾರೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ನಾವು ಬೇಗನೆ ಆಯ್ಕೆ ಮಾಡಲಿದ್ದೇವೆ. ನಿಮಗದು ಶೀಘ್ರವೇ ಗೊತ್ತಾಗಲಿದೆ ಎಂದು ರಾಹುಲ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ರಾಜಸ್ಥಾನ ಮುಖ್ಯಮಂತ್ರಿ ಪದದ ಆಕಾಂಕ್ಷಿಗಳಾಗಿರುವ ಸಚಿನ್ ಪೈಲಟ್ ಮತ್ತು ಅಶೋಕ್ ಗೆಹಲೋಟ್ ಅವರು ಈಗಾಗಲೇ ದಿಲ್ಲಿಯಲ್ಲಿ ಇದ್ದಾರೆ. ಮಧ್ಯಪ್ರದೇಶಕ್ಕೆ ಕಮಲ್ ನಾಥ್ ಮತ್ತು ರಾಜಸ್ಥಾನಕ್ಕೆ ಗೆಹಲೋಟ್ ಅವರನ್ನು ಮುಖ್ಯಮಂತ್ರಿ ಮಾಡುವ ಸಂಭಾವ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಹಾಗಿದ್ದರೂ ಪಿಸಿಸಿ ಅಧ್ಯಕ್ಷರಾಗಿರುವ ಸಚಿನ್ ಪೈಲಟ್ ಅವರು ಮುಖ್ಯಮಂತ್ರಿ ತನಗೇ ಸಿಗಬೇಕೆಂದು ಬಯಸಿದ್ದಾರೆ ಎಂದು ಮೂಲಗಳು ಹೇಳಿವೆ.
ಹಾಗಾಗಿ ರಾಜಸ್ಥಾನ ಮುಖ್ಯಮಂತ್ರಿ ಪದಕ್ಕೆ ಗೆಹಲೋಟ್ ಮತ್ತು ಪೈಲಟ್, ಮಧ್ಯ ಪ್ರದೇಶ ಕ್ಕೆ ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ತೀವ್ರ ಪೈಪೋಟಿ ನಡೆಸಿದ್ದಾರೆ.
ಮುಖ್ಯಮಂತ್ರಿಗಳ ಆಯ್ಕೆ ಮೊದಲು ರಾಹುಲ್ ಗಾಂಧಿ ಅವರು ಪಕ್ಷದ ವೀಕ್ಷಕರಾದ ಎ ಕೆ ಆ್ಯಂಟನಿ (ಮಧ್ಯ ಪ್ರದೇಶ), ಕೆ ಸಿ ವೇಣುಗೋಪಾಲ್ (ರಾಜಸ್ಥಾನ) ಅವರನ್ನು ಭೇಟಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.