Advertisement

BJP: ಕಾರ್ಯಕರ್ತರಿಂದಲೂ ಸಲಹೆ ಸ್ವೀಕಾರ: ವಿಜಯೇಂದ್ರ

11:01 PM Nov 18, 2023 | Team Udayavani |

ಬೆಂಗಳೂರು: ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪಕ್ಷದ ಕಚೇರಿಯಲ್ಲಿ ಸಿಬಂದಿ ಜತೆಗೆ ಶುಕ್ರವಾರ ಮೊದಲ ಸಭೆ ನಡೆಸಿರುವ ಬಿ.ವೈ.ವಿಜಯೇಂದ್ರ ಮೊದಲ ದಿನವೇ ಸಕಾರಾತ್ಮಕ ಹೆಜ್ಜೆ ಇಟ್ಟಿದ್ದು, ರಾಜ್ಯ ಕಚೇರಿಗೆ ಬರುವ ಕಾರ್ಯಕರ್ತರನ್ನು ಗೌರವಯುತವಾಗಿ ನಡೆಸಿಕೊಳ್ಳುವಂತೆ ಸೂಚಿಸಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಸಾಮಾನ್ಯ ಕಾರ್ಯಕರ್ತರಿಂದಲೂ ಸಲಹೆ ಸ್ವೀಕರಿಸಲು ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಲಹಾ ಪೆಟ್ಟಿಗೆ ಅಳವಡಿಸಲು ನಿರ್ಧರಿಸಿದ್ದಾರೆ.

Advertisement

ಪಕ್ಷಕ್ಕೆ ಕಾರ್ಯಕರ್ತನೇ ಮೊದಲು. ಪ್ರತಿಯೊಬ್ಬ ಕಾರ್ಯಕರ್ತನೂ ಅಧ್ಯಕ್ಷರಿಗೆ ಸರಿಸಮಾನವಾಗಿ ದುಡಿಯುತ್ತಿರುತ್ತಾನೆ. ಹೀಗಾಗಿ ಕಚೇರಿಗೆ ಬರುವ ಕಾರ್ಯಕರ್ತರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಭೇಟಿಗಾಗಿ ಬರುವವರ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಭೇಟಿಯ ಉದ್ದೇಶ ಮಾಹಿತಿಯನ್ನು ದಾಖಲಿ ಸಿಕೊಳ್ಳಬೇಕು. ಅವರಿಗೆ ಸರಿಯಾಗಿ ಮಾರ್ಗದರ್ಶನ ಮಾಡಬೇಕು. ವಿಷಯದ ಗಂಭೀರತೆ ಆಧರಿಸಿ ರಾಜ್ಯಾಧ್ಯಕ್ಷರ ಭೇಟಿಗೆ ಅವಕಾಶ ಕಲ್ಪಿಸಬೇಕು. ನನ್ನ ಆಪ್ತ ಸಹಾಯಕರ ಮೊಬೈಲ್‌ ಸಂಖ್ಯೆ ನೀಡಿ ಸಂಪರ್ಕಿಸಲು ತಿಳಿಸುವಂತೆ ಸೂಚನೆ ನೀಡಿದ್ದಾರೆ.
ರಾಜ್ಯ ಕಚೇರಿಗೆ ಬರುವ ಕಾರ್ಯಕರ್ತರಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ, ಸಂಜೆ ಕಾಫಿ- ಟೀ ನೀಡುವ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ರೂಪಿಸಬೇಕು. ಯಾರನ್ನೂ ಅಗೌರವದಿಂದ ಕಾಣಬಾರದು, ಸರಿಯಾಗಿ ಮಾಹಿತಿ ನೀಡದೆ ಕಡೆಗಣಿಸಬಾರದು. ಕಾರ್ಯಕರ್ತರೇ ಪಕ್ಷದ ಶಕ್ತಿಯಾಗಿದ್ದು, ಅವರನ್ನು ಗೌರವದಿಂದ ಕಾಣಬೇಕು ಎಂಬುದಾಗಿಯೂ ವಿಜಯೇಂದ್ರ ಸೂಚನೆ ನೀಡಿದ್ದಾರೆ.

ಸಲಹೆಗೆ ಮುಕ್ತ ಸ್ವಾಗತ
ನನ್ನ ನಡೆ, ಕಾರ್ಯ ನಿರ್ವಹಣೆಯಲ್ಲಿ ಏನಾದರೂ ಬದಲಾವಣೆಯಾಗಬೇಕು, ಯಾವುದಾದರೂ ಅಚಾತುರ್ಯ ನಡೆದಿರುವುದು, ತಪ್ಪಾದ ನಿಲುವು ತಳೆದಿದ್ದೇನೆ ಎಂದೆನಿಸಿದರೆ ಆ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಬಹುದು. ನೇರವಾಗಿ ನನಗೆ ತಿಳಿಸಲು ಕಷ್ಟವೆನಿಸಿದರೆ ಒಂದು ಚೀಟಿಯಲ್ಲಿ ಬರೆದು ಕೊಠಡಿಯ ಮೇಜಿನ ಮೇಲಿಟ್ಟರೆ ಸಾಕು. ಅದರಲ್ಲಿ ಹೆಸರು ಕೂಡ ನಮೂದಿಸುವ ಅಗತ್ಯವಿಲ್ಲ. ಅಂಥ ಸಲಹೆಗಳನ್ನು ಪರಿಶೀಲಿಸಿ ಸೂಕ್ತವೆನಿಸಿದರೆ ಅಳವಡಿಸಿಕೊಳ್ಳುತ್ತೇನೆ ಎಂದು ಹೇಳಿದರು.

ಸಲಹಾ ಪೆಟ್ಟಿಗೆ
ಪಕ್ಷ ಸಂಘಟನೆ, ಬೆಳವಣಿಗೆ ದೃಷ್ಟಿಯಿಂದ ಕಾರ್ಯ ಕರ್ತರು ಮುಕ್ತವಾಗಿ ಸಲಹೆ ನೀಡಬ ಹುದು. ಅದಕ್ಕಾಗಿ ಪಕ್ಷದ ಕಚೇರಿಯಲ್ಲಿ ಒಂದು ಸಲಹಾ ಪೆಟ್ಟಿಗೆಯನ್ನು ಇಡಬೇಕು. ಕಾರ್ಯ ಕರ್ತರು ತಮ್ಮ ಅಭಿಪ್ರಾಯ, ಸಲಹೆಯನ್ನು ಬರೆದು ಆ ಪೆಟ್ಟಿಗೆಯಲ್ಲಿ ಹಾಕಬಹುದು. ಅದನ್ನು ನಿತ್ಯ ಪರಿಶೀಲಿಸಲಾಗುವುದು. ಕಾರ್ಯಕರ್ತರನ್ನು ಗೌರವಿಸುವ ಮೂಲಕ ಎಲ್ಲರೂ ಪಕ್ಷ ಸಂಘಟನೆಗೆ ಶ್ರಮಿಸೋಣ ಎಂದು ಕಿವಿಮಾತು ಹೇಳಿದ್ದಾರೆ.

ಇಂದು ಮೈಸೂರು ಪ್ರವಾಸ
ಶನಿವಾರ ಸಂಜೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ವಿಜಯೇಂದ್ರ ರವಿವಾರ ಮಂಡ್ಯ ಹಾಗೂ ಮೈಸೂರು ಭಾಗದಲ್ಲಿ ಪ್ರವಾಸ ನಡೆಸಲಿದ್ದಾರೆ. ಸಾಹಿತಿ ಡಾ| ಎಸ್‌.ಎಲ್‌.ಭೈರಪ್ಪ ಅವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಜತೆಗೆ ಸುತ್ತೂರು ಮಠ, ಗಣಪತಿ ಸಚ್ಚಿದಾನಂದ ಆಶ್ರಮ, ಸಂಸದ ಶ್ರೀನಿವಾಸ್‌ ಪ್ರಸಾದ್‌ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ನಡೆಸಲಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next