Advertisement

ಮತದಾರ ಪಟ್ಟಿ ಪರಿಷ್ಕರಣೆಗೆ ನಿಯಮಾನುಸಾರ ಕ್ರಮ ಕೈಗೊಳ್ಳಿ

06:13 PM Aug 25, 2020 | Suhan S |

ದಾವಣಗೆರೆ: ಚುನಾವಣಾ ಆಯೋಗ ಜಿಲ್ಲೆಯ ಮತದಾರರ ಪಟ್ಟಿ ಸಮಗ್ರ ಸ್ವರೂಪದ ಪರಿಷ್ಕರಣೆ ಕಾರ್ಯದ ವೇಳಾಪಟ್ಟಿ ಪ್ರಕಟಿಸಿದ್ದು ಈ ಕಾರ್ಯ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಅಧಿಕಾರಿಗಳ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, 10-08-2020 ರಿಂದ 31-08-2020 ವರೆಗೆ ಪೂರ್ವ ಪರಿಷ್ಕರಣೆ ಚಟುವಟಿಕೆ ಕೈಗೊಳ್ಳಬೇಕು. ದಿ: 16-11-2020 ಕ್ಕೆ ಸಮಗ್ರ ಮತದಾರ ಪಟ್ಟಿಯನ್ನು ಪ್ರಕಟಿಸಬೇಕು. 16-11-2020 ರಿಂದ 15-12-2020 ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸುವ ಅವಧಿಯಾಗಿದೆ ಎಂದು ತಿಳಿಸಿದರು..

ಹಕ್ಕು ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಎರಡು ಶನಿವಾರ ಮತ್ತು ಭಾನುವಾರಗಳಂದು ವಿಶೇಷ ಪ್ರಚಾರ ಕೈಗೊಳ್ಳಬೇಕು. 15-01-2021 ಕ್ಕೆ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕಾಗಿದ್ದು ಈ ನಿಟ್ಟಿನಲ್ಲಿ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು ನಿಯಮಾನುಸಾರ ಕ್ರಮಗಳನ್ನು ಕೈಗೊಂಡು ಭಾವಚಿತ್ರವಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಸಮಗ್ರ ಸ್ವರೂಪದ ಪರಿಷ್ಕರಣೆ ಕಾರ್ಯವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿದ್ದು ಪ್ರತಿಯೊಬ್ಬ ಮತದಾರನು ಕರಡು ಮತದಾರರ ಪಟ್ಟಿಯಲ್ಲಿ ತನ್ನ ಹೆಸರಿನ ನೋಂದಣಿ ಕುರಿತು ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ. ಎಪಿಕ್‌ ಹೊಂದಿರದ ಮತದಾರರು ಹಾಗೂ ಹಿಂದಿನ ಸಾಲಿನ ಮತದಾರರ ಪಟ್ಟಿಯಲ್ಲಿ ಹೆಸರಿದ್ದ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಮತ್ತೂಮ್ಮೆ ಪರಿಶೀಲನೆ ನಡೆಸಿ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಬಗ್ಗೆ ದೃಢಪಡಿಸಿಕೊಳ್ಳಬೇಕಾಗುತ್ತದೆ ಎಂದರು.

ಒಂದು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಮಾತ್ರ ಹೆಸರು ನೋಂದಾಯಿಸಿಕೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು. ಮತದಾರರ ಪಟ್ಟಿಯಲ್ಲಿ ಈವರೆಗೆ ನೋಂದಣಿಯಾಗದ ಹಾಗೂ 01-01-2020 ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವ ಮತದಾರರು ತಮ್ಮ ಹೆಸರನ್ನು ನೋಂದಾಯಿಸಲು ನಿರ್ದಿಷ್ಟಪಡಿಸಿದ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದು ಎಂದರು.

ಸಭೆಯಲ್ಲಿ ಎಡಿಸಿ ಪೂಜಾರ ವೀರಮಲ್ಲಪ್ಪ, ಎಲ್ಲ ವಿಧಾನ ಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next