Advertisement

ಹಾಲಿನಖರೀದಿ ದರ ಹೆಚ್ಚಳಕ್ಕೆ ಶೀಘ್ರಕ್ರಮ ವಹಿಸಿ: ಡೀಸಿ

04:08 PM Jan 11, 2018 | Team Udayavani |

ಮಂಡ್ಯ: ಹಾಲಿನ ಖರೀದಿ ದರದ ಕಡಿತದಿಂದ ತೊಂದರೆಗೊಳಗಾಗಿರುವ ಜಿಲ್ಲೆಯ ರೈತರ ನೆರವಿಗೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಶೀಘ್ರ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು, ಹಾಲಿನ ಉತ್ಪನ್ನಗಳ ಬೇಡಿಕೆ ಕುಸಿದಿರುವ ಕಾರಣವನ್ನು ಮುಂದಿಟ್ಟುಕೊಂಡು ಮನ್‌ಮುಲ್‌ ಜನವರಿ 1ರಿಂದ ಪ್ರತಿ ಲೀಟರ್‌ ಹಾಲಿನ ಖರೀದಿ ದರವನ್ನು 23.80 ರೂ.ನಿಂದ 21.80 ರೂ.ಗಳಿಗೆ ಇಳಿಸಿದೆ. ದರ ಕಡಿತದಿಂದ ತೊಂದರೆಗೊಳಗಾದ ರೈತರು ಹಾಲಿನ ದರ ಹೆಚ್ಚಳ ಮಾಡಲು ಕೋರುತ್ತಿದ್ದು, ಮನ್‌ಮುಲ್‌ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ತುರ್ತು ಕ್ರಮ ವಹಿಸುವಂತೆ ತಿಳಿಸಿದರು.

ಮನ್‌ಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಸುರೇಶ್‌ಬಾಬು ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಲಿನ ದರದಲ್ಲಿ ಕುಸಿತವಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಜಿಲ್ಲೆಯನ್ನು ಒಳಗೊಂಡಂತೆ ರಾಜ್ಯದೆಲ್ಲಡೆ ಉತ್ತಮ ಮಳೆಯಾದ್ದರಿಂದ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಹಾಲು ಉತ್ಪನ್ನಗಳು ಮಾರಾಟವಾಗದೆ ಡೇರಿಯಲ್ಲೇ ಉಳಿಯುವಂತಾಗಿದೆ. ಆರ್ಥಿಕನಷ್ಟ ಸರಿದೂಗಿಸಲು ಹಾಲಿನ ದರ ಕಡಿತ ಅನಿವಾರ್ಯವಾಗಿದೆ ಎಂದರು.

ಲಾಭದ ಹಣ ರೈತರಿಗೆ ಮೀಸಲು: ಬಿಹಾರ ಹಾಗೂ ಇತರೆ ರಾಜ್ಯಗಳ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಡೇರಿಗೆ ಬರುವ ಆದಾಯದಲ್ಲಿ ಲಾಭದ ಹಣವನ್ನು ಹಾಲಿನ ದರ ಕಡಿತದಿಂದ ತೊಂದರೆಗೊಳಗಾದ ರೈತರಿಗೆ ನೀಡುವ ಮೂಲಕ ಅವರ ಆರ್ಥಿಕ ನಷ್ಟವನ್ನು ಸರಿಪಡಿಸುವುದರ ಜೊತೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ನೋಟಿಸ್‌ ನೀಡುವುದನ್ನು ನಿಲ್ಲಿಸಿ: ಶಾಸಕ ಪುಟ್ಟಣ್ಣಯ್ಯ ಮಾತನಾಡಿ, ಬೆಳೆ ಪರಿಹಾರ ಹಾಗೂ ಬೆಳೆಗಳಿಗೆ ನೀರು ಹರಿಸುವ ಮೂಲಕ ರೈತರ ನೆರವಿಗೆ ಜಿಲ್ಲಾಡಳಿತ ಮುಂದಾಗಬೇಕು. ಈ ವರ್ಷ ಮಳೆ ಉತ್ತಮವಾಗಿ ಬಂದಿದ್ದು, ಕೃಷಿ ಇಲಾಖೆಯವರು ವಿಳಂಬ ಮಾಡದೆ, ರೈತರಿಗೆ ಬಿತ್ತನೆ ಬೀಜವನ್ನು ಸರಿಯಾದ ಸಮಯಕ್ಕೆ ಒದಗಿಸಬೇಕು. ಈ ಬಗ್ಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ನೀಡಬೇಕು. ಬ್ಯಾಂಕ್‌ ಅಧಿಕಾರಿಗಳಿಂದ ರೈತರಿಗೆ ಸಾಲ ಮರುಪಾವತಿಗೆ ನೋಟಿಸ್‌ ನೀಡುವುದನ್ನು ಅಧಿಕಾರಿಗಳು ನಿಲ್ಲಿಸಬೇಕು ಎಂದರು.

Advertisement

ಗಣಿಗಾರಿಕೆ ನಿಲ್ಲಿಸಿ: ರೈತ ಮುಖಂಡರು ಮಾತನಾಡಿ, ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗ್ರಾಮದಲ್ಲಿ ಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಸುತ್ತಿರುವುದರಿಂದ ಬೆಳೆ ಬೆಳೆಯಲಾಗುತ್ತಿಲ್ಲ. ರೈತರು ಕೃಷಿ ಚಟುವಟಿಕೆಗಳಲ್ಲಿ ಸೂಕ್ತ ವಾತಾವರಣ ನಿರ್ಮಿಸಲು ಕ್ರಮ ವಹಿಸಲು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಲು ಸೂಚಿಸಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಎಸ್ಪಿ ಜಿ.ರಾಧಿಕಾ, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌, ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ,
ತೋಟಗಾರಿಕೆ ಉಪ ನಿರ್ದೇಶಕ ರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ರೈತ ಮುಖಂಡರು ಭಾಗವಹಿಸಿದ್ದರು.

ಬ್ಯಾಂಕ್‌ ಅಧಿಕಾರಿಗಳು ರೈತರಿಗೆ ಸಾಲ ಮರು ಪಾವತಿ ಮಾಡಲು ನೋಟಿಸ್‌ ನೀಡುವುದನ್ನು ನಿಲ್ಲಿಸಬೇಕು. ನೋಟಿಸ್‌ ನೀಡುವುದು ಕಂಡುಬಂದಲ್ಲಿ ಅಂತಹ ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಲು ಲೀಡ್‌ ಬ್ಯಾಂಕ್‌ನ ವ್ಯವಸ್ಥಾಪಕರು ಮುಂದಾಗಬೇಕು.
 ಮಂಜುಶ್ರೀ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next