ಬೆಂಗಳೂರು: ಕೋವಿಡ್ ಪಾಸಿಟಿವ್ ಪ್ರಕರಣಗಳು ದಿನ ದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ. ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾ. ಎ.ಎಸ್. ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರ ಸಲ್ಲಿಸಿದ ವಿವರಗಳನ್ನು ಗಮನಿಸಿದ ನ್ಯಾಯಪೀಠ, ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳು ಕೇವಲ ಹೇಳಿಕೆ ಗಳಿಗಷ್ಟೇ ಸೀಮಿತವಾಗಿವೆ. ನಿಜ ಅರ್ಥದಲ್ಲಿ ಅವುಗಳನ್ನು ಪಾಲಿಸಲಾಗುತ್ತಿಲ್ಲ. ಕೋವಿಡ್ ಆರಂಭ ವಾಗಿ 6 ತಿಂಗಳು ಆಗುತ್ತಿದೆ.
ರಾಜ್ಯದಲ್ಲಿ ಕೆಲ ದಿನಗಳಿಂದ ಪ್ರತಿ ದಿನ 9 ಸಾವಿರ ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿವೆ. ನಗರದಲ್ಲಿ3ಸಾವಿರ ಪ್ರಕರಣ ದೃಢಪಡುತ್ತಿವೆ. ದೆಹಲಿಯ ನಂತರದ ಸ್ಥಾನದಲ್ಲಿ ಬೆಂಗಳೂರು ನಗರ ಇದೆ. ಹೀಗಿರುವಾಗ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಈ ಸಂಬಂಧ ಸ್ಥಳೀಯ ಸಂಸ್ಥೆ ಸೇರಿ ಸಂಬಂಧಪಟ್ಟ ಎಲ್ಲಾ ಇಲಾಖೆ, ಸಂಸ್ಥೆ ,ಪ್ರಾಧಿಕಾರಿಗಳಿಗೆ ಕಠಿಣಸೂಚನೆಜಾರಿಗೊಳಿಸಬೇಕು ಎಂದು ಸರ್ಕಾರಕ್ಕೆ ತಾಕೀತು ಮಾಡಿತು.
ಗಣ್ಯರ ಕೇಸ್: ಹೊಸ ಪ್ರಮಾಣ ಪತ್ರ ಸಲ್ಲಿಸಿ: ರಾಜಕೀಯ ಗಣ್ಯರು,ಸಿನಿಮಾ ನಟರು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕ್ರಮಗಳು, ಪೊಲೀಸರ ತನಿಖೆಯ ವಿವರಗಳನ್ನು ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಪೀಠ ಸರ್ಕಾರ ಕೈಗೊಂಡ ಕ್ರಮ ಹಾಗೂ ಪೊಲೀಸರ ತನಿಖೆ ಸಮಧಾನ ಕಾರವಾಗಿಲ್ಲ. ಈ ಬಗ್ಗೆ ಹೊಸದಾಗಿ ಪ್ರಮಾಣಪತ್ರ ಸಲ್ಲಿಸು ವಂತೆ ಸೂಚಿಸಿದ ಪೀಠ ವಿಚಾರಣೆಯನ್ನು ಅ.6ಕ್ಕೆ ಮುಂದೂಡಿತು.
ಧಾರ್ಮಿಕ ಕೇಂದ್ರಗಳ ಮೇಲೆ ನಿಗಾ: ಧಾರ್ಮಿಕ ಕೇಂದ್ರಗಳಲ್ಲಿ ಹೆಚ್ಚು ಜನ ಸೇರುತ್ತಿದ್ದಾರೆ. ಅಲ್ಲಿಯೂ ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ಅದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಆಗಾಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಪರಿಶೀಲಿಸಬೇಕು. ನಿಯಮಗಳು ಪಾಲನೆಯಾಗುತ್ತಿಲ್ಲ ಎಂದಾದರೆ ಅದರ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು. ಇದಕ್ಕಾಗಿ ಅಧಿಕಾರಿಗಳನ್ನು ನಿಯೋಜಿಸಿ ಆಗಾಗ್ಗೆ ಭೇಟಿ ನೀಡುವಂತೆ ಸೂಚಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಕೋವಿಡ್ ನಿಯಮಗಳ ಪಾಲನೆ ವಿಚಾರದಲ್ಲಿ ರಾಜಕೀಯ ಗಣ್ಯರು, ಸಿನಿಮಾ ನಟರು ಜನರಿಗೆ ಮಾದರಿಯಾಗಿ ನಡೆದುಕೊಳ್ಳಬೇಕು. ಆದರೆ, ಅವರಿಂದಲೇ ನಿಯಮಗಳ ಉಲ್ಲಂಘನೆಯಾಗುತ್ತಿರುವುದು ಬೇಸರದ ಸಂಗತಿ.ಯಾರೇ ನಿಯಮ ಉಲ್ಲಂಘಿಸಿದರೂ ಅಂತಹವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಜರುಗಿಸಬೇಕು. ಈ ವಿಚಾರದಲ್ಲಿ ಸರ್ಕಾರ ಗಂಭೀರವಾಗಿ ನಡೆದುಕೊಳ್ಳಬೇಕು. ವ್ಯಕ್ತಿಯ ಸ್ಥಾನಮಾನ ಪರಿಗಣಿಸಿ ಕ್ರಮಕೈಗೊಳ್ಳುವ ರೀತಿ ತರವಲ್ಲ.
–ಎ.ಎಸ್. ಓಕ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ