Advertisement

ಮಕ್ಕಳ ಮೊಬೈಲ್‌ ಗೀಳು ತಪ್ಪಿಸಲು ಕ್ರಮ ತೆಗೆದುಕೊಳ್ಳಿ

12:33 AM Feb 21, 2023 | Team Udayavani |

ಕೊರೊನಾ ಬಳಿಕ ಮಕ್ಕಳ ವರ್ತನೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲನೇಯದಾಗಿ ಅವರ ಶಾಲಾ ಶಿಕ್ಷಣ ಕ್ರಮವೇ ಬದಲಾದಂತಿದ್ದು, ಇನ್ನೂ ಹಳೆಯ ಪದ್ಧತಿಗೆ ಹೊಂದಿಕೊಳ್ಳಲು  ಒದ್ದಾಡುತ್ತಿದ್ದಾರೆ. ಎರಡನೇಯದಾಗಿ ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಅಂಟಿಸಿಕೊಂಡ ಮೊಬೈಲ್‌ ಗೀಳಿನಿಂದ ಹೊರಬರಲಾರದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸಂಸ್ಥೆಯೊಂದು ನಡೆಸಿರುವ ಸಮೀಕ್ಷೆ ಪ್ರಕಾರ, ಶೇ.36ರಷ್ಟು ಮಕ್ಕಳು ಮೊಬೈಲ್‌ ಗೀಳಿಗೆ ಸಿಲುಕಿದ್ದಾರೆ. ಅಲ್ಲದೆ ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆಯಿಂದಾಗಿ ಶೇ.18ರಷ್ಟು ಮಕ್ಕಳಲ್ಲಿ ಖಿನ್ನತೆ, ನಿದ್ರಾಹೀನತೆ, ಕಿರಿಕಿರಿ, ಏಕಾಗ್ರತೆ ಕೊರತೆ, ದೈಹಿಕ ಸಮಸ್ಯೆ, ಬೊಜ್ಜು, ದೃಷ್ಟಿ ಸಮಸ್ಯೆ, ನೆನಪಿನ ಶಕ್ತಿ ಕ್ಷೀಣಿಸುವುದು, ನರ ದೌರ್ಬಲ್ಯದಂತಹ ಕಾಯಿಲೆಗಳು ಕಾಣಿಸಿಕೊಂಡಿವೆ.

Advertisement

ಇದಕ್ಕಿಂತ ಆತಂಕಕಾರಿ ಸಂಗತಿ ಎಂದರೆ, ಮೊಬೈಲ್‌ನಲ್ಲಿ ವಿವಿಧ ವೆಬ್‌ಸೈಟ್‌ಗಳಿಗೆ ಭೇಟಿ ಕೊಟ್ಟು ಅಶ್ಲೀಲ ವೀಡಿಯೋ ವೀಕ್ಷಿಸುವ ಮಕ್ಕಳ ಪ್ರಮಾಣ

ಭಾರೀ ಏರಿಕೆಯಾಗಿದೆ. 13ರಿಂದ 19 ವರ್ಷದ ಶೇ.35ರಷ್ಟು ಮಕ್ಕಳು ಅಶ್ಲೀಲ ಚಿತ್ರ/ವೀಡಿಯೋ ವೀಕ್ಷಿಸುವ ವ್ಯಸನಕ್ಕೊಳಗಾಗಿದ್ದಾರೆ. ಉಳಿದಂತೆ ಶೇ.15ರಷ್ಟು ಮಕ್ಕಳು ಆಗಾಗ ಪೋರ್ನ್ ಸೈಟ್‌ಗಳಿಗೆ ಭೇಟಿ ನೀಡಿ ಹೆಚ್ಚು ಸಮಯ ವೀಕ್ಷಿಸುತ್ತಿದ್ದಾರೆ ಎಂಬುದು ಸಮೀಕ್ಷೆಯ ಮಾಹಿತಿ.

ರಾಷ್ಟ್ರೀಯ ಸಾಧನಾ ಸಮೀಕ್ಷೆ(ಎನ್‌ಎಎಸ್‌) 2021ರ ಪ್ರಕಾರ, ಕರ್ನಾಟಕದಲ್ಲಿ ಶೇ.66ರಿಂದ 76ರಷ್ಟು ಮಕ್ಕಳು ಮೊಬೈಲ್‌ ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಈ ಅಭ್ಯಾಸ ಬೆಂಗಳೂರಿನಲ್ಲಿಯೇ ಹೆಚ್ಚಾಗಿದೆ. ಇಲ್ಲಿ ಮೂರನೇ ತರಗತಿಗಿಂತ ಕೆಳಗಿನ ಶೇ.73 ಮಕ್ಕಳಿಗೆ  ಮೊಬೈಲ್‌ ಸಿಗುತ್ತಿದೆ. 5ನೇ ತರಗತಿ ವರೆಗಿನ ಶೇ.79, 8ನೇ ತರಗತಿವರೆಗಿನ ಶೇ.70 ಮತ್ತು 10ನೇ ತರಗತಿವರೆಗಿನ ಶೇ.88ರಷ್ಟು ಮಕ್ಕಳಿಗೆ ಸುಲಭವಾಗಿ ಮೊಬೈಲ್‌ ಸಿಗುತ್ತಿದೆ.

ಲಾಕ್‌ಡೌನ್‌ ವೇಳೆಯಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಮೊಬೈಲ್‌ ಕೊಟ್ಟದ್ದು ಈಗ ಅವರಿಗೇ ಮಾರಕವಾಗಿದೆ. ಇದರಿಂದ ಹೊರಬರುವುದು ಹೇಗೆ ಎಂಬುದು ಪೋಷಕರ ಚಿಂತೆಗೆ ಕಾರಣವಾಗಿದೆ. ಕೆಲವು ಪೋಷಕರು ಈಗಾಗಲೇ ಮಾನಸಿಕ ವೈದ್ಯರನ್ನೂ ಕಂಡು ಬಂದಿದ್ದಾರೆ. ಆದರೂ ಸಮಸ್ಯೆ ಬಗೆಹರಿಯದೇ ಇರುವುದು ಸಮಸ್ಯೆಯ ಗಂಭೀರತೆಯನ್ನು ತೋರುತ್ತಿದೆ.

Advertisement

ಈ ಮೊದಲೇ ಮೊಬೈಲ್‌ ಗೀಳಿನಿಂದ ಆಗುವ ಸಮಸ್ಯೆಗಳನ್ನು ಉಲ್ಲೇಖಿಸಲಾಗಿದೆ. ಇಂಥ ಸಂದರ್ಭದಲ್ಲಿ ಪೋಷಕರ ಪಾತ್ರವೂ ಬಹಳ ಮುಖ್ಯದ್ದಾಗಿದೆ ಎಂದು ಮಾನಸಿಕ ವೈದ್ಯರು ಹೇಳುತ್ತಾರೆ. ಅಂದರೆ ಹೆಚ್ಚು ಮೊಬೈಲ್‌ ನೋಡುತ್ತಾರೆ ಎಂಬ ಸಿಟ್ಟಿನ ಭರದಲ್ಲಿ ಮೊಬೈಲ್‌ ಕಿತ್ತುಕೊಳ್ಳುವುದು, ಬೈಯ್ಯುವುದು, ಹೊಡೆಯುವುದನ್ನು ಮಾಡಿದರೆ ಅವರ ಸ್ಥಿತಿ ಇನ್ನಷ್ಟು ವಿಷಮ ಸ್ಥಿತಿಗೆ ಹೋಗಬಹುದು.

ಹೀಗಾಗಿ ಮೊದಲಿಗೆ ಪೋಷಕರೇ ಮೊಬೈಲ್‌ ಅನ್ನು ಪಕ್ಕಕ್ಕಿಟ್ಟು ಮಕ್ಕಳ ಜತೆ ಹೆಚ್ಚಾಗಿ ಬೆರೆಯಬೇಕು. ಯಾವಾಗ ಸ್ಮಾರ್ಟ್‌ಫೋನ್‌ ಬಳಕೆ ಮಾಡಬೇಕು, ಯಾವಾಗ ಬಳಕೆ ಮಾಡಬಾರದು ಎಂಬ ವಿಷಯದಲ್ಲಿ ಒಂದು ದಿನಚರಿ ಮಾಡಿಕೊಡುವುದು, ಟೈಮ್‌ ಸೆಟ್‌ ಮಾಡಿ ಮೊಬೈಲ್‌ ಕೊಡುವುದು, ಮಲಗುವ ವೇಳೆಯಲ್ಲಿ ಮೊಬೈಲ್‌ ಸಿಗದಿರುವ ರೀತಿಯಲ್ಲಿ ಮಾಡುವುದು, ಮಕ್ಕಳಿಗೆ ಆಮಿಷಕ್ಕಾಗಿ ಮೊಬೈಲ್‌ ಕೊಡುವುದು ಸಲ್ಲದು. ಅವರ ಆಸಕ್ತಿಗಳನ್ನು ಗುರುತಿಸಿ ಅದರ ಬಗ್ಗೆ ಒತ್ತು ನೀಡುವುದನ್ನು ಮಾಡಬೇಕು. ಮೊಬೈಲ್‌ ಬಳಕೆ ಕುರಿತಂತೆ ಮಕ್ಕಳ ಮುಂದೆ ಸುದೀರ್ಘ‌ ಭಾಷಣ ಮಾಡುವುದರಿಂದ ಅವುಗಳ ಮನಸ್ಸಿನಲ್ಲಿ ಯಾವುದೇ ಪರಿಣಾಮ ಬೀರದು ಎಂಬ ಅಂಶವನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು.

ಮಕ್ಕಳ ಆರೋಗ್ಯ ಬಹುಮುಖ್ಯವಾದದ್ದು. ಅವರ‌ ಮನಸ್ಸು ಕೂಡ ಅಷ್ಟೇ ಸೂಕ್ಷ್ಮವಾದದ್ದು. ಇದನ್ನು ಅರಿತುಕೊಂಡು ಪೋಷಕರು ಮುನ್ನಡೆಯಬೇಕು. ಮಕ್ಕಳ ಜತೆ ಚಟುವಟಿಕೆಗಳಲ್ಲಿ ತೊಡಗಬೇಕು. ಮಕ್ಕಳ ಜತೆಗೆ ಪೋಷಕರು ಸೇರಿ ಈ ಸವಾಲಿನಿಂದ ಆಚೆ ಬರುವ ಕೆಲಸ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next