Advertisement

ರಾಸಾಯನಿಕ ವಿಪತ್ತು ತಡೆಗೆ ವಿಶೇಷ ಕಾಳಜಿ ವಹಿಸಿ

03:40 PM Dec 08, 2018 | |

ಹಾವೇರಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಖಾನೆಗಳ ಸಂಭವನೀಯ ರಾಸಾಯನಿಕ ವಿಪತ್ತುಗಳ ತಡೆಗೆ ವಿಶೇಷ ಕಾಳಜಿ, ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮ ನಡೆಸುವಂತೆ ಕಾರ್ಖಾನೆಗಳ ಅಧಿಕಾರಿಗಳಿಗೆ ಜಿಲ್ಲಾ ಧಿಕಾರಿ ಡಾ| ಎಂ.ವಿ.ವೆಂಕಟೇಶ್‌ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪಾಯಕಾರಿ ಕಾರ್ಯಾಚರಣೆ ಹೊಂದಿರುವ ಕಾರ್ಖಾನೆಗಳ ಜಿಲ್ಲಾ ಬಿಕ್ಕಟ್ಟು ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಜಿಲ್ಲೆಯಲ್ಲಿ ಯಾವುದೇ ರೀತಿಯ ವಿಪತ್ತುಗಳು ಸಂಭವಿಸಬಾರದು. ಅಪಾಯಕಾರಿಯಾದ ರಾಸಾಯನಿಕ ಪದಾರ್ಥಗಳ ಬಳಕೆಯಿಂದ ಯಾವುದೇ ತರದ ಅವಘಡಗಳು ಜರುಗದಂತೆ ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಬೇಕು. ವೈಜ್ಞಾನಿಕವಾಗಿ ಸಂಭವನೀಯ ಅವಘಡಗಳನ್ನು ತಡೆಯುವಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತಂತೆ ಸೂಕ್ತ ತರಬೇತಿ, ಉಪಕರಣಗಳು ಸೇರಿದಂತೆ ವಿಪತ್ತು ಯೋಜನೆ ರೂಪಿಸಿಕೊಂಡು ಸದಾ ಸನ್ನದ್ಧರಾಗುವಂತೆ ಕಾರ್ಖಾನೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಪತ್ತು ಜರುಗದಂತೆ ತಡೆಯುವುದು, ವಿಪತ್ತಿನ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮಗಳು, ವಿಪತ್ತಿನ ನಂತರ ಪರಿಹಾರ ಕಾರ್ಯಗಳ ಕುರಿತಂತೆ ಕಾಲಕಾಲಕ್ಕೆ ಸಭೆ ನಡೆಸಿ ರಾಷ್ಟ್ರೀಯ ವಿಪತ್ತು ನಿರ್ವಹಣೆಯ ಅಡಿಯಲ್ಲಿ ಮಾರ್ಗಸೂಚಿಯಂತೆ ಯೋಜಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಅತೀ ಹೆಚ್ಚು ಪರಿಣಾಮ ಬೀರುವ ರಾಸಾಯನಿಕ ಬಳಕೆಯ ಕಾರ್ಖಾನೆಗಳನ್ನು ಗುರುತಿಸಿಕೊಳ್ಳಬೇಕು. ಕಾಲಕಾಲಕ್ಕೆ ಅವುಗಳ ತಪಾಸಣೆ ನಡೆಸಬೇಕು. ಅಪಘಾತ ತಡೆಯುವ ನಿಟ್ಟಿನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತಂತೆ ಪರಿಶೀಲನೆ, ವಿಪತ್ತು ತಡೆ ಪಡೆಯ ಮಾನವ ಸಂಪನ್ಮೂಲ, ಉಪಕರಣಗಳ ಸಿದ್ಧತೆ ಹಾಗೂ ಅಪಾಯಕಾರಿ ಸ್ಥಳದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಕುರಿತಂತೆ ಕಾರ್ಖಾನೆಗಳು, ಬಾಯ್ಲರ್‌ಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ ಸಹಾಯಕ ನಿರ್ದೇಶಕಿ ಚಿನ್ಮಯಿ ತೋರ್ಗಲ್‌ ಹಾಗೂ ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಸೀಂ ಕಂಪನಿಯಲ್ಲಿ ಬಳಕೆ ಮಾಡುತ್ತಿರುವ ಅಪಾಯಕಾರಿ ಕೆಮಿಕಲ್‌ಗ‌ಳ ಸುರಕ್ಷತಾ ನಿರ್ವಹಣೆ ಕುರಿತಂತೆ ಗರಿಷ್ಠ ಎಚ್ಚರ ವಹಿಸಲು ಸೂಚನೆ ನೀಡಿದರು. ಕ್ಲೋರಿನ್‌ ದಾಸ್ತಾನು, ಕಾರ್ಬನ್‌ ಸಲ್ಪೇಟ್‌ಗಳ ದಾಸ್ತಾನು ಪ್ರಮಾಣ ಹಾಗೂ ನಿರ್ವಹಣೆ ಮಾರ್ಗಸೂಚಿ ಅನುಸಾರ ಕೈಗೊಳ್ಳಬೇಕು. ಸುರಕ್ಷತಾ ನಿರ್ವಹಣೆ ಅಧಿಕಾರಿಗಳ ಆರೋಗ್ಯ ಹಾಗೂ ದಾಸ್ತಾನು ಸ್ಥಳದ ಸುರಕ್ಷತೆ ಕುರಿತಂತೆ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

Advertisement

ಆಕಸ್ಮಿಕ ಅವಘಡ ಸಂಭವಿಸಿದರೆ ಬಾಧಿತವಾಗುವ ಹಳ್ಳಿಗಳ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣೆ ಕುರಿತಂತೆ ಜಾಗೃತಿ ಮೂಡಿಸಬೇಕು. ಸ್ಥಳೀಯ ಸಂಘ-ಸಂಸ್ಥೆಗಳು ನಾಗರಿಕರು, ಸ್ಥಳೀಯ ಗ್ರಾಮ ಪಂಚಾಯಿತಿಗಳ ಸಹ ಯೋಗದಲ್ಲಿ ಅರಿವು ಮತ್ತು ಜಾಗೃತಿ ಕಾರ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು ಹಾಗೂ ಕಾರ್ಖಾನೆಯಲ್ಲಿ ವಿಪತ್ತು ನಿರ್ವಹಣೆಯ ಅಣುಕು ಕಾರ್ಯಾಗಾರ ಕನಿಷ್ಠ ವರ್ಷಕ್ಕೆ 2 ಬಾರಿ ಕೈಗೊಳ್ಳುವಂತೆ ಸೂಚನೆ ನೀಡಿದರು. ಸಭೆಯಲ್ಲಿ ನಗರಸಭೆ ಪರಿಸರ ಅಧಿಕಾರಿಗಳು, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಗ್ರಾಸೀಂ ಕಾರ್ಖಾನೆ ಅಧಿಕಾರಿಗಳು ಒಳಗೊಂಡಂತೆ ವಿವಿಧ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next