ಆಳಂದ: ಸತತವಾಗಿ ಮಳೆ ಸುರಿಯುತ್ತಿದ್ದರಿಂದ ತಾಲೂಕಿನ ಶಾಲಾ ಕೋಣೆಗಳು ಸೋರಿ ಅಪಾಯದ ಅಂಚಿನಲ್ಲಿದ್ದರೆ ಸ್ಥಳೀಯವಾಗಿ ಶಾಲೆ ಮುಖ್ಯಸ್ಥರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾ ಧಿಕಾರಿ ಚಿತ್ರಶೇಖರ ದೇಗುಲಮಡಿ ಹೇಳಿದರು.
ಶಿಥಿಲಗೊಂಡ ಕಟ್ಟಡದಲ್ಲಿ ತರಗತಿ ನಡೆಸದೇ, ವ್ಯವಸ್ಥಿತ ಸ್ಥಳದಲ್ಲಿ ಇನ್ನುಳಿದ ಉತ್ತಮ ಕೋಣೆಗಳಿದ್ದರೇ ಅಲ್ಲಿ ತರಗತಿಗಳನ್ನು ನಡೆಸಬೇಕು. ಶಾಲೆ ಮುಖ್ಯಸ್ಥರು ಸ್ಥಳೀಯ ಪರಿಸ್ಥಿತಿ ಗಮನಿಸಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಎಂದರು.
ಮಂಗಳವಾರ ಸುಂಟನೂರ, ಧರ್ಮವಾಡಿ ಶಾಲೆಗಳಿಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಥಿಲಾವಸ್ಥೆ ಕಟ್ಟಡಗಳಿಗೆ ತರಗತಿ ನಡೆಸದಂತೆ ಅವರು ಸೂಚನೆ ನೀಡಿದರು.
ಮಾಡಿಯಾಳ, ತಡೋಳಾ, ಧಂಗಾಪುರ ಹಾಗೂ ಅನೇಕ ಶಾಲೆಗಳಿಂದ ಈ ಕುರಿತು ಕರೆ ಬಂದಿವೆ. ಶಾಲೆ ಕೋಣೆಗಳು ಮಳೆಯಿಂದಾಗಿ ಸೋರುತ್ತಿವೆ ಎಂದು ಮಾಹಿತಿ ಬರುತ್ತಿದೆ. ಈ ಕುರಿತು ತಾಲೂಕಿನ ಶಿಥಲಾವಸ್ಥೆ ಕಟ್ಟಡಗಳು ಮತ್ತು ಮಳೆ ನೀರು ಸೋರುವ ಕಟ್ಟಡಗಳ ಕುರಿತು ಸಮಗ್ರ ಮಾಹಿತಿ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಶಾಲೆಗಳ ಒಂದೆರಡು ಕೋಣೆಗಳು ಸೋರುತ್ತಿವೆ. ಬಹುತೇಕ ಶಾಲೆಗಳು ಸೋರುತ್ತಿವೆ ಎಂದ ಅವರು, ಸತತವಾಗಿ ಮಳೆಯಿಂದಾಗಿ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವಂತಾಗಬೇಕು. ಆರೋಗ್ಯ ತಪಾಸಣೆ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಶಿಕ್ಷಕ ಗಣಪತಿ ಪ್ರಚಂಡೆ, ಸುಂಟನೂರ ಶಾಲೆಯ ಶಂಕರ ಮೋಟಗಿ, ಸಿಆರ್‌ಪಿ ಅಧಿಕಾರಿಗಳು, ಮುಖ್ಯಶಿಕ್ಷಕರು, ಗ್ರಾಮಸ್ಥರು ಹಾಗೂ ಇನ್ನಿತರರು ಇದ್ದರು.