ಕೊಪ್ಪಳ: ಜಿಲ್ಲೆಯ ಹುಲಿಗಿ ಗ್ರಾಮದಲ್ಲಿ ಮೇ 23ರಿಂದ 27 ರವರೆಗೆ ನಡೆಯಲಿರುವ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್-19 ಕಾರಣದಿಂದ ಎರಡು ವರ್ಷಗಳಿಂದ ಜಾತ್ರೆಯನ್ನು ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಳಿಸಲಾಗಿತ್ತು. ಆದರೆ ಪ್ರಸ್ತುತ ಕೋವಿಡ್ -19 ಸೋಂಕಿನ ಹರಡುವಿಕೆ ಪ್ರಮಾಣ ಕಡಿಮೆ ಇರುವುದರಿಂದ ಸುಮಾರು ಐದು ಲಕ್ಷ ಜನರು ಜಾತ್ರೆಗೆ ಆಗಮಿಸುವ ನಿರೀಕ್ಷೆ ಇದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಹಕಾರದೊಂದಿಗೆ ಜಾತ್ರೆಗೆ ಆಗಮಿಸುವ ಎಲ್ಲ ಭಕ್ತರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಜಾತ್ರೆಯಲ್ಲಿ ಪ್ರಾಣಿ ಬಲಿ, ಪ್ರಾಣಿ ಹತ್ಯೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಹುಲಗಿ ಗ್ರಾಮದ ಯಾವುದೇ ಪ್ರದೇಶದಲ್ಲಿ ಹರಕೆ ಹೆಸರಲ್ಲಿ ಪ್ರಾಣಿ ಹತ್ಯೆ ಮಾಡಬಾರದು. ಇಂತಹ ಪ್ರಕರಣಗಳು ಕಂಡುಬಂದರೆ ಸಂಬಂಧಿಸಿದವರ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಈ ಕುರಿತು ಜಾತ್ರೆಗೆ ಆಗಮಿಸುವ ಎಲ್ಲ ಸಾರ್ವಜನಿಕ ಭಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಅಲ್ಲಲ್ಲಿ ಪೋಸ್ಟರ್, ಧ್ವನಿವರ್ಧಕಗಳ ಮೂಲಕ ಪ್ರಾಣಿ ಬಲಿ ನಿಷೇಧದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಜಾತ್ರೆಯಲ್ಲಿ ಅತಿಹೆಚ್ಚಿನ ಜನರು ಭಾಗವಹಿಸುವುದರಿಂದ ಅವರಿಗೆ ಅಲ್ಲಲ್ಲಿ ಅರವಟಿಗೆ, ಆರ್‌ಒ ಪ್ಲಾಂಟ್ ಮೂಲಕ ಶುದ್ಧ ಕುಡಿಯುವ ನೀರು, ಯಾತ್ರಿ ನಿವಾಸದಲ್ಲಿ ವಸತಿ, ತಾತ್ಕಾಲಿಕ ಶೌಚ ಗೃಹಗಳು, ವಾಹನಗಳ ನಿಲುಗಡೆ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಲಭ್ಯವಿರುವ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಕಾರ್ಯಕ್ರಮದ ವೇಳೆ ಸೇರಬಹುದಾದ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಕ್ರಮಗಳನ್ನು ಪಟ್ಟಿ ಮಾಡಿ. ಲಕ್ಷಗಟ್ಟಲೆ ಜನ ಒಂದೆಡೆ ಸೇರುವುದರಿಂದ ಸಾಂಕ್ರಾಮಿಕ ರೋಗ, ಕೋವಿಡ್-19 ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಅಲ್ಲಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ, ಕಾರ್ಯಕರ್ತರು, ವೈದ್ಯರು ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಸೌಲಭ್ಯ ಒದಗಿಸಲು ಯೋಜನೆ ರೂಪಿಸಬೇಕು. ಕಡ್ಡಾಯವಾಗಿ ಆಂಬ್ಯುಲೆನ್ಸ್‌ಗಳನ್ನು ಒದಗಿಸಬೇಕು ಎಂದರು.
ಮಹಿಳೆಯರು ತಮ್ಮ ಚಿನ್ನಾಭರಣಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ, ಮುಖ್ಯವಾಗಿ ನದಿಯ ಸ್ನಾನಘಟ್ಟದಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವಂತೆ ಧ್ವನಿವರ್ಧಕಗಳ ಮೂಲಕ ಜಾಗೃತಿ ಮೂಡಿಸಿ. ವಾಹನಗಳ ನಿಲುಗಡೆಗೆ ದೇವಸ್ಥಾನದ ಹತ್ತಿರ ಹಾಗೂ ಗ್ರಾಮದ ಹೊರವಲಯಗಳಲ್ಲಿ ನಿರ್ದಿಷ್ಟ ಪ್ರದೇಶ ಗುರುತಿಸಿ, ವ್ಯವಸ್ಥಿತ ವಾಹನ ನಿಲುಗಡೆಗೆ ಕ್ರಮ ಕೈಗೊಳ್ಳಿ. ಜಾತ್ರೆ ವೇಳೆ ಜಿಲ್ಲೆಯಲ್ಲಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ಗೃಹರಕ್ಷಕ ದಳದಿಂದ ಹೆಚ್ಚಿನ ಪ್ರಮಾಣದ ಸಿಬ್ಬಂದಿಯನ್ನು ಒದಗಿಸಲಾಗುತ್ತದೆ. ಆದ್ದರಿಂದ ಯಾವುದೇ ಅಹಿತಕರ ಘಟನೆ ಅಥವಾ ಅವಘಡಗಳು ಸಂಭವಿಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಜಾತ್ರೆ ನಡೆಯುವ ಐದು ದಿನಗಳೂ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಸೂಕ್ತ ನಿಗಾ ವಹಿಸಬೇಕು. ಸಾರಿಗೆ ಇಲಾಖೆಯಿಂದ ಜಾತ್ರೆಯ ಅಂಗವಾಗಿ ಹುಲಿಗೆ ಗ್ರಾಮಕ್ಕೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಗಳನ್ನು ಒದಗಿಸಬೇಕು. ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಸೂಕ್ತ ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ದೇವಸ್ಥಾನ ಹಾಗೂ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಸ್ವತ್ಛತೆ ಕಾಪಾಡುವಂತೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಎಡಿಸಿ ಎಂ.ಪಿ. ಮಾರುತಿ, ಎಸ್ಪಿ ಅರುಣಾಂಗ್ಸು ಗಿರಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತ್ ಕುಮಾರ್, ಹುಲಿಗೆಮ್ಮ ದೇವಿ ದೇವಸ್ಥಾನದ ಸಿಇಒ ಅರವಿಂದ ಸುತಗುಂಡಿ, ಡಿಎಚ್‌ಒ ಡಾ| ಅಲಕನಂದಾ ಮಳಗಿ, ತಹಶೀಲ್ದಾರ್ ಅಮರೇಶ ಬಿರಾದಾರ, ಸಿಪಿಐ ವಿಶ್ವನಾಥ ಹಿರೇಗೌಡರ್, ಡಿಎಸ್ ಬಿಯ ಪಿಐ ವಿ. ನಾರಾಯಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.