Advertisement

ತುಪ್ಪ ಬೇಕೆ ತುಪ್ಪ?

06:00 AM Oct 31, 2018 | |

ಹಾಲಿನ ಕೆನೆ ಯಾರಿಗೆ ಇಷ್ಟವಾಗದು? ಕೆಲವರು ಕೆನೆಯನ್ನು ಚಪ್ಪರಿಸಿ ತಿಂದರೆ, ಮತ್ತೆ ಕೆಲವರು ಕಾಫಿ, ಟೀ ಜೊತೆಗೆ ಸೇರಿಸಿಕೊಳ್ಳುವುದುಂಟು. ಇವರೆಲ್ಲರ ಮಧ್ಯೆ, ಕೆನೆ ಎಂದರೆ ಮುಖ ತಿರುಗಿಸಿಕೊಳ್ಳುವವರೂ, ಅದನ್ನು ಹೆಪ್ಪಿಗೂ ಹಾಕದೆ ಬಚ್ಚಲಿಗೆ ಬಿಸಾಡುವವರೂ ಇದ್ದಾರೆ. ಆದರೆ ಅದೇ ಕೆನೆಯನ್ನು ಚೆಲ್ಲುವ ಬದಲು, ಸ್ವಲ್ಪ ಸಹನೆಯಿಂದ ವರ್ತಿಸಿದರೆ ನೂರಾರು ರೂಪಾಯಿ ಕೊಟ್ಟು ಖರೀದಿಸುವ ತುಪ್ಪವನ್ನು ಮನೆಯಲ್ಲೇ ಮಾಡಬಹುದು. ಅದು ಹೇಗೆ ಅಂತೀರಾ?  

Advertisement

1. ಒಂದು ಚಿಕ್ಕ ಡಬ್ಬಿಯಲ್ಲಿ ಕೆನೆಯನ್ನು ದಿನನಿತ್ಯ ಶೇಖರಿಸಿ, ಕೆಡದಂತೆ ಫ್ರಿಜ್‌ನಲ್ಲಿ ಇಡಿ (ಹಾಲು ಕಾಯಿಸಿ, ತಣಿಸಿದ  ಹಾಲನ್ನು ಫ್ರಿಜ್‌ನಲ್ಲಿ ಇಟ್ಟರೆ ಕೆನೆ ದಟ್ಟವಾಗಿ ಕಟ್ಟುತ್ತದೆ)

2. ವಾರ, ಹತ್ತುದಿನದ ನಂತರ ಸಂಗ್ರಹವಾದ ಕೆನೆಯನ್ನು ಮಿಕ್ಸಿಗೆ ಹಾಕಿ ಅರೆಯಿರಿ. ಮೊದಲ ಸುತ್ತಿಗೆ ಕೆನೆ ಬ್ಲೆಂಡ್‌ ಆಗಿ ನುಣುಪಾಗುತ್ತದೆ. 

3. ನಂತರ ತುಸು ನೀರು ಹಾಕಿ ಅರೆಯಿರಿ, ನೀರಿನಿಂದ ಬೇರ್ಪಟ್ಟ ಬೆಣ್ಣೆ ಮುದ್ದೆ ಸಿಗುತ್ತದೆ. 

4. ಬೆಣ್ಣೆ ಮುದ್ದೆಯನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ, ಸಣ್ಣ ಉರಿಯಲ್ಲಿ ಕಾಯಿಸಿ. 

Advertisement

5. ಅದು ಜಿಡ್ಡು ಬಿಟ್ಟುಕೊಳ್ಳುತ್ತಿದ್ದಂತೆಯೇ ನಾಲ್ಕೈದು ಲವಂಗ ಹಾಕಿ, ಒಂದೆರಡು ನಿಮಿಷ ಕೈಯಾಡಿಸಿ ಉರಿ ನಂದಿಸಿ. ಸ್ವಲ್ಪ ತಣಿಯಲು ಬಿಡಿ. ಅನಂತರ ಬೇರೆ ಪಾತ್ರೆಗೆ ಸೋಸಿಬಿಟ್ಟರೆ, ಘಮ್ಮೆನ್ನುವ ತಾಜಾ ತುಪ್ಪ ರೆಡಿ.  

6. ತುಪ್ಪ ಕಾಯಿಸಿದ ಪಾತ್ರೆಯಲ್ಲಿ ತುಸು ಗೋಧಿ ಹಿಟ್ಟು ಹುರಿದು, ಅದಕ್ಕೆ ಬೆಲ್ಲ ಏಲಕ್ಕಿಪುಡಿ ಸೇರಿಸಿ ಚೆನ್ನಾಗಿ ಕಲಸಿದರೆ, ಸವಿಯಲು  ರುಚಿರುಚಿಯಾದ ಗುಲ್ಪಾವಟೆ ಎಂಬ ತಿನಿಸೂ ಸವಿಯಲು ಸಿಗುತ್ತದೆ. 

 ಕೆ.ವಿ.ರಾಜಲಕ್ಷ್ಮಿ

Advertisement

Udayavani is now on Telegram. Click here to join our channel and stay updated with the latest news.

Next