Advertisement

ಟೇಕ್‌ ಇಟ್‌ ಈಜಿ ಪಾಲಿಸಿ

12:30 AM Feb 11, 2019 | |

ಸಾಮಾನ್ಯವಾಗಿ ಜನರು ವಿಮಾ ಹೂಡಿಕೆ ಸಂಬಂಧ ಏಜಂಟರ ಮಾತಿಗೇ ಹೆಚ್ಚು ಬೆಲೆ ಕೊಡುವುದನ್ನು ನಾವು ನೋಡುತ್ತೇವೆ. ಆದರೆ ಏಜೆಂಟರು ತಮಗೆ ಲಾಭದಾಯಕ ಕಮಿಷನ್‌ ಇರುವ ಸ್ಕೀಮುಗಳನ್ನೇ ತಮ್ಮಲ್ಲಿಗೆ ಬರುವ ವಿಮಾ ಆಕಾಂಕ್ಷಿಗಳಿಗೆ ಸೂಚಿಸುತ್ತಾರೆ. ಯುಲಿಪ್‌ ಕೇಳಿದರೆ ಎಂಡೋಮೆಂಟ್‌ ಪಾಲಿಸಿಯೇ  ನಿಮಗೆ ಹೆಚ್ಚು ಒಳ್ಳೆಯದು ಲಾಭದಾಯಕ ಎಂದೆಲ್ಲ ಹೇಳಿ ತಮಗೆ ಲಾಭದಾಯಕವಾಗಿರುವ ಸ್ಕೀಮುಗಳಿಗೇ ನೋಂದಾಯಿಸಿ ಬಿಡುತ್ತಾರೆ. 

Advertisement

ದೀರ್ಘಾವಧಿಯ ಎಲ್ಲ ಹೂಡಿಕೆ ಯೋಜನೆಗಳು ಲಾಭದಾಯಕ ಎನ್ನುವ ಅಭಿಪ್ರಾಯ ಜನಸಾಮಾನ್ಯರಲ್ಲಿರುವುದು ಸಹಜ. ಆದರೂ ವಾಸ್ತವ ಮಾತ್ರ ಬೇರೆಯೇ ಇರುತ್ತದೆ ಎನ್ನುವುದಕ್ಕೆ ಇನುರೆನ್ಸನ್ಸ್‌ ಪ್ಲಾನ್‌ಗಳೇ ಒಳ್ಳೆಯ ಉದಾಹರಣೆ. ಏಕೆಂದರೆ,  ದೀರ್ಘಾವಧಿ ಹೂಡಿಕೆಯಲ್ಲಿ ಹಣ ಹಲವು ಪಟ್ಟು ವೃದ್ದಿಸುವುದಕ್ಕೆ ಸಾಕಷ್ಟು  ಅವಕಾಶಗಳು, ಕಾಲಾವಧಿ ಇರುತ್ತವೆ ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಆದರೆ ವಾಸ್ತವದಲ್ಲಿ ಹಾಗೇನು ಆಗಬೇಕೆಂದೇನು ಇಲ್ಲ.  ದೀರ್ಘಾವಧಿಯ ಲೆಕ್ಕಾಚಾರಗಳು ಎಷ್ಟೋ ವೇಳೆ ತಲೆಕೆಳಗಾಗುವುದಿದೆ.

ಹಾಗಾಗಿ, ನಾವು ದೀರ್ಘಾವಧಿಯಲ್ಲಿ ಹಣ ಕಳೆದುಕೊಂಡೆವೋ, ಲಾಭ ಮಾಡಿದೆವೋ, ಹಣದುಬ್ಬರದಿಂದ ಕೊರೆದು ಹೋಗುವಷ್ಟು ಹಣದ ಮೌಲ್ಯವನ್ನು ನಾವು ಲಾಭದಾಯಕತೆಯಲ್ಲಿ ಸರಿಗಟ್ಟಿದೆವೋ ಎಂಬಿತ್ಯಾದಿ ಸಂಗತಿಗಳು ನಮ್ಮ ಲೆಕ್ಕಕ್ಕೆ ಸಿಗುವುದಿಲ್ಲ..

ಎಷ್ಟೋ ಮಂದಿ ಹೆತ್ತವರು, ಮಕ್ಕಳ ಉಜ್ವಲ ಭವಿಷ್ಯಕ್ಕೆಂದು ವಿಮಾ ಪಾಲಿಸಿಗಳನ್ನು ಖರೀದಿಸಿಡುತ್ತಾರೆ. ದೀರ್ಘಾವಧಿಯಲ್ಲಿ ಈ ಪಾಲಿಸಿಗಳು ಮಗು ಪ್ರಬುದ್ಧವಾಗುವ ಹೊತ್ತಿಗೆ ದೊಡ್ಡ ಹಣದ ಗಂಟನ್ನು ಕೊಡುತ್ತದೆ ಎಂದು ನಂಬಿರುತ್ತಾರೆ.  ಹೀಗಾಗಿ, ಸಹಜವಾಗಿಯೇ ಚೈಲ್ಡ್‌ ಯುಲಿಪ್‌ ಅಥವಾ ಎಂಡೋಮೆಂಟ್‌ ಪಾಲಿಸಿಗಳನ್ನು ಖರೀದಿಸುವ ಆಯ್ಕೆಯನ್ನು ಪರಿಗಣಿಸುತ್ತಾರೆ. ವಿಮಾ ಪಾಲಿಸಿಗಳ ಬಗ್ಗೆ ಜನ ಸಾಮಾನ್ಯರಲ್ಲಿ ಹಿಂದಿನಿಂದಲೂ ಒಂದು ಗೌರವದ ಮತ್ತು ಪ್ರಶ್ನಾತೀತವಾದ ಅಭಿಪ್ರಾಯವಿದೆ. ಅದೆಂದರೆ, ಈ ಪಾಲಿಸಿಗಳು ನಮ್ಮ ಪಾಲಿನ ಆಪದ್ಭಾಂಧವ ಎಂಬುದು ! 

ಹೂಡಿಕೆ ತಜ್ಞರು ಮತ್ತು ಪರಿಣತರ ಪ್ರಕಾರ, ವಿಮಾ ಪಾಲಿಸಿಗಳು ಹೂಡಿಕೆಯ ದೃಷ್ಟಿಯಿಂದ ಏನೇನೂ ಲಾಭದಾಯಕವಲ್ಲ. ವಿಮೆಯ ಉದ್ದೇಶದಲ್ಲಿ ಲಾಭದಾಯಕ ಹೂಡಿಕೆಯ ಅಂಶ ಅಡಕವಾಗಿರುವುದೇ ಇಲ್ಲ ಎಂಬುದನ್ನು ಜನರು ಅರಿಯದಾಗಿರುತ್ತಾರೆ. 

Advertisement

ಆರ್ಥಿಕ ಪರಿಣಿತರು ಹೇಳುವ ಪ್ರಕಾರ, ವಿಮಾ ಹೂಡಿಕೆ ಅತ್ಯಂತ ನಿಕೃಷ್ಟ ಇಳುವರಿಯನ್ನು ತರುತ್ತದೆ. ಇವುಗಳಿಂದ ಸಿಗುವ ವಾರ್ಷಿಕ ಇಳುವರಿ ಅಥವಾ ರಿಟರ್ನ್ ಶೇ.4 ರಿಂದ 6 ಅಥವಾ ಅದಕ್ಕಿಂತ ಕಡಿಮೆ ಎಂದರೆ ಇವು ಹಣದುಬ್ಬರದಿಂದ ಕೊರೆದು ಹೋಗುವ ಹೂಡಿಕೆ ಮೌಲ್ಯವನ್ನು ಕೂಡ ಖಾತರಿಪಡಿಸುವುದಿಲ್ಲ. 

ಮಕ್ಕಳ ಶ್ರೆಯೋಭಿವೃದ್ಧಿಗೆಂದೇ ರೂಪಿಸಲ್ಪಟ್ಟಿರುವುದಾಗಿ ಹೇಳಲ್ಪಡುವ ವಿಮಾ ಯೋಜನೆಗಳು ಮಕ್ಕಳಿಗಾಗಲೀ, ದೊಡ್ಡವರಿಗಾಗಲೀ ಲಾಭದಾಯಕವಾಗಲಾರವು.  ಏಕೆಂದರೆ, ಇವುಗಳನ್ನು ಕೊಂಡ ಬಳಿಕದಲ್ಲಿ  ತಿಂಗಳು ತಿಂಗಳೂ ಪಾವತಿಸುವ ಪ್ರೀಮಿಯಂಗಳು ಪಾವತಿದಾರರ ಮಟ್ಟಿಗೆ ತುಟ್ಟಿಯಾಗೇ ಪರಿಣಮಿಸುತ್ತದೆ.

ನಿಜಕ್ಕೂ ವಿಮೆ ಬೇಕಿರುವುದು ಮಕ್ಕಳಿಗಲ್ಲ; ದೊಡ್ಡವರಿಗೆ ಎಂಬುದನ್ನು ಕೂಡ ಎಷ್ಟೋ ಹೆತ್ತವರು ಹೂಡಿಕೆ ದೃಷ್ಟಿಯಿಂದ ಅರ್ಥ ಮಾಡಿಕೊಳ್ಳುವುದಿಲ್ಲ. ಹಾಗಿದ್ದರೂ, ವಿಮಾ ಪಾಲಿಸಿಗಳ ಮೊತ್ತ ತುಂಬ ಕಡಿಮೆ ಇದ್ದು ಅವು ಕಾಲಕ್ರಮದಲ್ಲಿ ಅಥವಾ ಮೆಚ್ಯುರಿಟಿ ಸಮಯದಲ್ಲಿ ಆಗಿನ ಹಣದ ಮೌಲ್ಯದೆದುರು ನಗಣ್ಯವಾಗಿರುತ್ತವೆ.

ಒಂದೊಮ್ಮೆ ಹೆತ್ತವರು ವಿಮಾ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡ ಸಂದರ್ಭದಲ್ಲಿ ಅವರು ಟರ್ಮ್ ಕವರ್‌ ಮತ್ತು ಮ್ಯೂಚುವಲ್‌ ಫ‌ಂಡ್‌ ಹೂಡಿಕೆಯ ಅವಕಾಶಗಳು ಪರಸ್ಪರ ಅಂತರ್ಗತವಾಗಿರುವ ಸ್ಕೀಮುಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಲೇಸು. ಈ ರೀತಿಯ ಅವಳಿ ಲಾಭದ ಮ್ಯೂಚುವಲ್‌ ಫ‌ಂಡ್‌ ಸ್ಕೀಮುಗಳು ಅತ್ಯಧಿಕ ಇಳುವರಿ (ರಿಟರ್ನ್) ಕೊಡುತ್ತವೆ; ಹೂಡಿಕೆಯ ಮಟ್ಟಿಗೆ ಹೆಚ್ಚು ಪಾರದರ್ಶಕವಾಗಿರುತ್ತವೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಶಿಕ್ಷಣ ವೆಚ್ಚ ಮತ್ತು ಶೇ.10ರ ವರೆಗೂ ಹೋಗಬಹುದಾದ ಹಣದುಬ್ಬರ ಪ್ರಮಾಣ, ಇವನ್ನು ಸಂಭಾಳಿಸುವಷ್ಟು ಮಟ್ಟಿಗಿನ ಲಾಭ ಮ್ಯೂಚುವಲ್‌ ಫ‌ಂಡ್‌  ಹೂಡಿಕೆಯಲ್ಲಿ ಇರುತ್ತದೆ ಎನ್ನುವುದು ಗಮನಾರ್ಹ. 

ಸಾಮಾನ್ಯವಾಗಿ ಜನರು ವಿಮಾ ಹೂಡಿಕೆ ಸಂಬಂಧ ಏಜಂಟರ ಮಾತಿಗೇ ಹೆಚ್ಚು ಬೆಲೆ ಕೊಡುವುದನ್ನು ನಾವು ನೋಡುತ್ತೇವೆ. ಆದರೆ ಏಜೆಂಟರು ತಮಗೆ ಲಾಭದಾಯಕ ಕಮಿಷನ್‌ ಇರುವ ಸ್ಕೀಮುಗಳನ್ನೇ ತಮ್ಮಲ್ಲಿಗೆ ಬರುವ ವಿಮಾ ಆಕಾಂಕ್ಷಿಗಳಿಗೆ ಸೂಚಿಸುತ್ತಾರೆ. ಯುಲಿಪ್‌ ಕೇಳಿದರೆ ಎಂಡೋಮೆಂಟ್‌ ಪಾಲಿಸಿಯೇ  ನಿಮಗೆ ಹೆಚ್ಚು ಒಳ್ಳೆಯದು ಲಾಭದಾಯಕ ಎಂದೆಲ್ಲ ಹೇಳಿ ತಮಗೆ ಲಾಭದಾಯಕವಾಗಿರುವ ಸ್ಕೀಮುಗಳಿಗೇ ನೋಂದಾಯಿಸಿ ಬಿಡುತ್ತಾರೆ. 

ಇದರ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿ, ತಿಳಿವಳಿಕೆ, ಎಚ್ಚರಿಕೆ ಇಲ್ಲದಿರುವುದರಿಂದ ಅವರು ಸುಲಭದಲ್ಲಿ ಎಂಡೋಮೆಂಟ್‌ ಸ್ಕೀಮುಗಳಲ್ಲಿ ಏಜಂಟರ ಕುಟಿಲತೆಯಿಂದಾಗಿ ಸಿಲುಕಿಕೊಳ್ಳುತ್ತಾರೆ. ಮನಿ ಬ್ಯಾಕ್‌ ಪಾಲಿಸಿಗಳು ಆಕರ್ಷಕವೆಂಬ ಭಾವನೆ, ನಂಬಿಕೆ ಜನರಲ್ಲಿರುವುದು ಸಹಜವೇ. ಆದರೆ ಮನಿ ಬ್ಯಾಕ್‌ ಪಾಲಿಸಿಗಳಡಿ ಜನರ ಕೈಗೆ ಕಾಲಕಾಲಕ್ಕೆ ಬರುವ ಹಣ ಹಾಗೆಯೇ ಕರಗಿ ಹೋಗಿ ಪಾಲಿಸಿ ಮೆಚೂರ್‌ ಆದಾಗ ದೊಡ್ಡ ಮೊತ್ತ ಕೈಗೆ ಬರುವುದರಿಂದ ವಂಚಿತರಾಗುತ್ತಾರೆ. 

ಎಂಡೋಮೆಂಟ್‌ ಪಾನ್‌ಗಿಂತ ಯುಲಿಪ್‌ ಎಷ್ಟೋ ಮೇಲು ಎಂಬುದನ್ನು ನಾವು ಈ ಕೆಳಗಿನ ಸಂಕ್ಷಿಪ್ತ ವಿಶ್ಲೇಷಣೆಯಲ್ಲಿ ಅರಿಯಬಹುದಾಗಿದೆ.
ಮೊದಲಾಗಿ ಯುಲಿಪ್‌ ಸ್ಕೀಮನ್ನು ನೋಡೋಣ : 
1. ರಿಟರ್ನ್: ಮ್ಯೂಚುವಲ್‌ ಫ‌ಂಡ್‌ ಜತೆ ತುಲನೆ ಮಾಡುವಷ್ಟು ಅತ್ಯಧಿಕ ರಿಟರ್ನ್ ಇರುತ್ತದೆ.
2. ತೆರಿಗೆ ಲಾಭ : ಸೆ.80ಸಿ ಅಡಿ 1.5 ಲಕ್ಷ ರೂ. ತನಕದ ಹೂಡಿಕೆಗೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ; ಮೆಚ್ಯುರಿಟಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ.
3. ನಗದೀಕರಣ : ಐದು ವರ್ಷಗಳ ಲಾಕ್‌ ಇನ್‌ ಪಿರಿಯಡ್‌ ಇರುತ್ತದೆ. ಐದು ವರ್ಷಗಳ ಅನಂತರ ಸರೆಂಡರ್‌ ಚಾರ್ಜ್‌ ಇರುವುದಿಲ್ಲ.
4. ಹಣ ಹಿಂಪಡೆಯುವಿಕೆ : ಐದು ವರ್ಷಗಳ ಬಳಿಕ ಶೇ.20 ಮೀರದಿರುವ ಮೊತ್ತದ ಹಣ ಹಿಂಪಡೆಯುವಿಕೆಗೆ ಅವಕಾಶ ಇರುತ್ತದೆ. 
5. ಹೂಡಿಕೆ ಬದಲಾಯಿಸುವ ಅವಕಾಶ : ರಿಸ್ಕ್ ಪೊ›ಫೈಲ್‌ಗೆ ಅನುಗುಣವಾಗಿ ಈಕ್ವಿಟಿ – ಡೆಟ್‌ ಹಣ ಹೂಡಿಕೆ ಪ್ರಮಾಣವನ್ನು ಬದಲಾಯಿಸುವುದಕ್ಕೆ ಅವಕಾಶ ಇರುತ್ತದೆ. 

ಎಂಡೋಮೆಂಟ್‌ ಪ್ಲಾನ್‌ : 
1. ರಿಟರ್ನ್ ಶೇ.4ರಿಂದ 6
2. ತೆರಿಗೆ ಲಾಭ : ಯೂಲಿಪ್‌ ಹಾಗೇ ಇರುತ್ತದೆ.
3. ನಗದೀಕರಣ ಸೌಕರ್ಯ : ಕೆಲವು ವಿಮಾ ಕಂಪೆನಿಗಳು ಪಾಲಿಸಿ ಮೇಲೆ ಶೇ.8-9ರ ಬಡ್ಡಿಗೆ ಸಾಲ ನೀಡುತ್ತವೆ.
4. ಹಣ ಹಿಂಪಡೆಯುವಿಕೆ : 10 ವರ್ಷಗಳ ವಿಮಾ ಸ್ಕೀಮಿನಡಿ ಎರಡು ಅಥವಾ ಮೂರು ವರ್ಷ ಪ್ರೀಮಿಯಂ ಕಟ್ಟಿದ್ದಲ್ಲಿ  ಮಾತ್ರವೇ ನಿಮಗೆ ಸರೆಂಡರ್‌ ವ್ಯಾಲ್ಯೂ ಸಿಗುತ್ತದೆ.
 5. ಹೂಡಿಕೆ ಸ್ವರೂಪದಲ್ಲಿನ ಬದಲಾವಣೆ : ಯಾವುದೇ ಆಯ್ಕೆ ಇರುವುದಿಲ್ಲ.
ಮಕ್ಕಳ ಉಜ್ವಲ ಭವಿಷ್ಯದ ಹೂಡಿಕೆ ಆಯ್ಕೆಗಳನ್ನು ಪರಿಶೀಲಿಸುವ ಪ್ರಶ್ನೆ ಬಂದಾಗ ವಿಮಾ ಹೂಡಿಕೆ ಅಷ್ಟೇನೂ ಆಕರ್ಷಕವೂ ಲಾಭದಾಯಕವೂ ಅಲ್ಲ ಎಂಬುದನ್ನು ಅರಿಯದ ಜನಸಾಮಾನ್ಯರಿಂದಾಗಿ ವಿಮಾ ಏಜೆಂಟರು ಲಾಭ ಮಾಡಿಕೊಳ್ಳುತ್ತಾರೆ ಎನ್ನುವುದು ಇಂದಿನ ವಾಸ್ತವ.

– ಸತೀಶ್‌ ಮಲ್ಯ

Advertisement

Udayavani is now on Telegram. Click here to join our channel and stay updated with the latest news.

Next