Advertisement

ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಿ

05:19 PM Jul 16, 2018 | |

ಹಾವೇರಿ: ಮಳೆಗಾಲದಲ್ಲಿ ಹರಡಬಹುದಾದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ವೆಂಕಟೇಶ್‌ ಎಂ.ವಿ. ಸೂಚಿಸಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ನಡೆದ ಆರೋಗ್ಯಾಧಿಕಾರಿಗಳ ಸಭೆಯಲ್ಲಿ ಸೂಚನೆ ನೀಡಿದ ಅವರು, ಮಳೆಗಾಲ ಇರುವುದರಿಂದ ಸ್ವಚ್ಛತೆ ಹಾಗೂ ಇತರ ಕಾರಣಗಳಿಂದಾಗಿ ಚಿಕೂನ್‌ಗುನ್ಯಾ, ಡೆಂಘೀ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ಪ್ರಕರಣಗಳು ಅಲ್ಲಲ್ಲಿ ಕಂಡುಬರುತ್ತವೆ. ಸೊಳ್ಳೆಗಳ ನಿಯಂತ್ರಣ, ಸ್ವತ್ಛತೆ ಹಾಗೂ ಶುದ್ಧ ನೀರು ಸೇವನೆ ಕುರಿತಂತೆ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ ನಿರಂತರ ಫಾಗಿಂಗ್‌ ಮಾಡಬೇಕು. ಆಶಾ ಆರೋಗ್ಯ ಕಾರ್ಯಕರ್ತರಿಂದ ಸರ್ವೇ ಕಾರ್ಯದ ಜೊತೆಗೆ ಸಾಂಕ್ರಾಮಿಕ ರೋಗಗಳ ಕುರಿತಂತೆ ಜನರಿಗೆ ಮುನ್ನೆಚ್ಚರಿಕೆ ನೀಡಬೇಕು ಎಂದರು.

Advertisement

ಡೆಂಘೀ, ಚಿಕೂನ್‌ಗುನ್ಯಾ ಒಳಗೊಂಡಂತೆ ಯಾವುದೇ ಪ್ರಕರಣಗಳು ವರದಿಯಾದಲ್ಲಿ ಅಥವಾ ದೂರುಗಳು ಬಂದಲ್ಲಿ ತಕ್ಷಣವೇ ಜನರಿಗೆ ಸ್ಪಂದಿಸಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಬೇಕು. ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ನೈರ್ಮಲ್ಯ ಮತ್ತು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು. ವಾರಕ್ಕೊಮ್ಮೆ ಸಭೆ ನಡೆಸಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ತಾಯಿ ಹಾಗೂ ಮಗುವಿನ ಮರಣ ತಡೆಗೆ ಗರಿಷ್ಠ ಪ್ರಮಾಣದ ಮುನ್ನೆಚ್ಚರಿಕೆ ವಹಿಸಬೇಕು. ಸಾಂಸ್ಥಿಕವಾಗಿ ಹೆರಿಗೆಗೆ ನಿರಂತರ ಜಾಗೃತಿ ಮೂಡಿಸಬೇಕು. ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯನ್ನು ಪುರುಷರಿಗೆ ವ್ಯಾಸಕ್ಟಮಿ ಕೈಗೊಳ್ಳಬೇಕು. ಪುರುಷರಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಮನವೊಲಿಸುವ ಆರೋಗ್ಯ ಕಾರ್ಯಕರ್ತರಿಗೆ ಪ್ರೋತ್ಸಾಹವಾಗಿ ಪ್ರಶಸ್ತಿ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದರು. ಏಡ್ಸ್‌ ಪ್ರಕರಣಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ಜೊತೆಗೆ ಸುಲಭವಾಗಿ ಕಾಂಡೋಮ್‌ಗಳು ದೊರಕುವಂತೆ ವ್ಯವಸ್ಥೆ ಮಾಡಬೇಕು. ಲಿಕ್ಕರ್‌ಶಾಪ್‌, ಬಸ್‌ ನಿಲ್ದಾಣ, ಚಲನಚಿತ್ರಮಂದಿರಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದರು. ಕ್ಷಯರೋಗ ಪತ್ತೆಗಾಗಿ ಕೈಗೊಂಡಿರುವ ಅಭಿಯಾನದಲ್ಲಿ ಪತ್ತೆಯಾದ ರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಕ್ಷಯಮುಕ್ತ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ನಿಟ್ಟಿನಲ್ಲಿ ಎಲ್ಲ ವೈದ್ಯರು ಕಾರ್ಯೋನ್ಮುಖರಾಗುವಂತೆ ಸೂಚಿಸಿದರು.

ಉತ್ತಮ ಆರೋಗ್ಯ ಸೇವೆ, ವೈದ್ಯಕೀಯ ನಿರುಪಯುಕ್ತ ವಸ್ತುಗಳ ನಿರ್ವಹಣೆ, ಆಸ್ಪತ್ರೆಗಳ ಒಳ ಹಾಗೂ ಹೊರ ಆವರಣಗಳ ಸ್ವಚ್ಛತೆ ನಿರ್ವಹಣೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಯಕಲ್ಪ ಯೋಜನೆಯಡಿ ಆಯ್ಕೆಮಾಡಿ ಪ್ರಶಸ್ತಿ ಜತೆ ಅನುದಾನ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಕಾಯಕಲ್ಪ ಯೋಜನೆಗೆ ಅರ್ಹತೆ ಪಡೆಯಲು ಮಾನದಂಡಗಳಿಗೆ ಅನುಸಾರವಾಗಿ ಆಸ್ಪತ್ರೆಗಳ ನೈರ್ಮಲ್ಯ ಹಾಗೂ ಆರೋಗ್ಯ ಸೇವೆಗಳ ಸುಧಾರಣೆಗೆ ಸಜ್ಜುಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಜಯಾನಂದ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ನಾಗರಾಜ ನಾಯಕ, ತಾಲೂಕು ಆರೋಗ್ಯಾಧಿಕಾರಿ ಡಾ| ಪ್ರಭಾಕರ ಕುಂದೂರ ಹಾಗೂ ವಿವಿಧ ತಾಲೂಕು ಆರೋಗ್ಯಾಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next