Advertisement

ಇಲಾಖೆಗಳ ಉಸ್ತುವಾರಿ ಗ್ರಾಪಂಗಳಿಗೆ ವಹಿಸಿ​​​​​​​

06:10 AM Jul 29, 2018 | Team Udayavani |

ಬೆಂಗಳೂರು: ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಉಸ್ತುವಾರಿಯನ್ನು ಗ್ರಾಮ ಸರ್ಕಾರವಾದ ಈ ಪಂಚಾಯ್ತಿಗಳಿಗೇ ವಹಿಸಬೇಕು ಎಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಸದಸ್ಯರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಶನಿವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣಬೈರೇಗೌಡ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸದಸ್ಯರು, ಆ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿಗಳಿಗೆ ಅಗತ್ಯವಿರುವ ಸಿಬ್ಬಂದಿ ಮತ್ತು ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಬಾಪೂಜಿ ಸೇವಾ ಕೇಂದ್ರಗಳಲ್ಲಿ 100 ಸೇವೆಗಳನ್ನು ಒದಗಿಸಲಾಗುವುದು ಎಂದು ಹೇಳಲಾಗಿತ್ತಾದರೂ ಒಂದೆರಡು ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳು ಅನಾಥವಾಗಿದೆ. ಆದ್ದರಿಂದ ಗ್ರಾಮ ಪಂಚಾಯ್ತಿಗಳಲ್ಲಿ ಈ ಸೇವಾ ಕೇಂದ್ರಗಳ ನಿರ್ವಹಣೆಗೆ ಸಿಬ್ಬಂದಿ ಮತ್ತು ಕಂಪ್ಯೂಟರ್‌ ವ್ಯವಸ್ಥೆ ಮಾಡಬೇಕು. ಪಡಿತರ ಚೀಟಿ ಸೇವಾ ಶುಲ್ಕವನ್ನು ಪಂಚಾಯ್ತಿಗಳಿಗೇ ನೀಡಬೇಕು. ಖಾಲಿ ಇರುವ ಲೆಕ್ಕ ಸಹಾಯಕರು, ಗ್ರೇಡ್‌-2 ಕಾರ್ಯದರ್ಶಿಗಳನ್ನು ಕೂಡಲೇ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಅಲ್ಲದೆ, ಗ್ರಾಮ ಪಂಚಾಯ್ತಿಗಳಲ್ಲಿ ಬಾಕಿ ಇರುವ 5000 ಕೋಟಿ ರೂಪಾಯಿಗೆ ಹೆಚ್ಚು ತೆರಿಗೆ ವಸೂಲಿಗೆ ಕ್ರಮ ಕೈಗೊಳ್ಳಬೇಕು. ಪಂಚಾಯತ್‌ರಾಜ್‌ ಸ್ಥಳೀಯ ಸಂಸ್ಥೆಗಳ ಸದಸ್ಯ ಗೌರವಧನ ಹೆಚ್ಚಿಸಬೇಕು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಬಿ ದರ್ಜೆಗೆ ಏರಿಸಬೇಕು ಎಂದೂ ಆಗ್ರಹಿಸಿದರು.

ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪಂಚಾಯತ್‌ರಾಜ್‌ ಸ್ಥಳೀಯ ಸಂಸ್ಥೆಗಳಲ್ಲಿ ಇ-ಕಚೇರಿ (ಲೆಸ್‌ ಪೇಪರ್‌) ತಂತ್ರಾಂಶಗಳನ್ನು ಜಾರಿಗೆ ತಂದು ಕೆಲಸದ ವಿಳಂಬ ತಪ್ಪಿಸಬೇಕು ಎಂದು ಸಚಿವರನ್ನು ಕೋರಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಬೈರೇಗೌಡ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಹುದ್ದೆಯನ್ನು ಬಿ ದರ್ಜೆಗೆ ಏರಿಸುವ ಪ್ರಸ್ತಾಪ ಸರ್ಕಾರದ ಮುಂದಿದ್ದು, ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಅದೇರೀತಿ ಗ್ರೇಡ್‌-2 ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ನೇಮಕ ಪ್ರಕ್ರಿಯೆಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುವುದು ಎಂದು ಭರವಸೆ ನೀಡಿದರು. ಜತೆಗೆ ಜನಸಂಖ್ಯೆ ಮತ್ತು ಭೌಗೋಳಿಕ ಸನ್ನಿವೇಶ ಪರಿಗಣಿಸಿ ಪಂಚಾಯ್ತಿಗಳಿಗೆ ಅನುದಾನ ನಿಗದಿಪಡಿಸುವ ಪ್ರಸ್ತಾವನೆ ಸರ್ಕಾರದ ಮುಂದಿದ್ದು, ಇದೇ ವರ್ಷ ಅನುಷ್ಠಾನಕ್ಕೆ ತರಲಾಗುವುದು ಎಂದೂ ತಿಳಿಸಿದರು.

ಸದಸ್ಯರಾದ ಕೆ.ಸಿ.ಕೊಂಡಯ್ಯ, ಮಹಾಂತೇಶ ಕವಟಗಿಮಠ, ಎಂ.ಕೆ.ಪ್ರಾಣೇಶ್‌, ವಿವೇಕ್‌ರಾವ್‌ ಪಾಟೀಲ್‌, ಎಸ್‌.ರವಿ, ಅಪ್ಪಾಜಿಗೌಡ, ಗೋಪಾಲಸ್ವಾಮಿಸ ಅಜಯ್‌ಸಿಂಗ್‌ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಲೋಕಾಯುಕ್ತರ ಅನಗತ್ಯ ಮಧ್ಯಪ್ರವೇಶಕ್ಕೆ ಅವಕಾಶ ಬೇಡ
ಲೋಕಾಯುಕ್ತ ತನಿಖೆ ಹೆಸರಿನಲ್ಲಿ ಗ್ರಾಮ ಪಂಚಾಯ್ತಿಗಳ ಆಡಳಿತಾತ್ಮಕ ಕೆಲಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ಸದಸ್ಯರು ಸರ್ಕಾರವನ್ನು ಕೋರಿದ್ದಾರೆ.ಗ್ರಾಮ ಪಂಚಾಯ್ತಿಗಳ ಭ್ರಷ್ಟಾಚಾರದ ವಿಚಾರದಲ್ಲಿ ಲೋಕಾಯುಕ್ತರು ತನಿಖೆ ನಡೆಸಲು ಅಭ್ಯಂತರ ಇಲ್ಲ. ಆದರೆ, ಆಡಳಿತಾತ್ಮಕ ವಿಚಾರದಲ್ಲಿ ಅವರ ಮಧ್ಯಪ್ರವೇಶದಿಂದ ಬಹಳಷ್ಟು ಕೆಲಸಗಳು ನೆನೆಗುದಿಗೆ ಬಿದ್ದಿವೆ. ಅಲ್ಲದೆ, ಲೋಕಾಯುಕ್ತರು ತನಿಖೆ ನಡೆಸುತ್ತಾರೆ ಎಂಬ ಕಾರಣಕ್ಕೆ ಓಂಬುಡ್ಸ್‌ಮನ್‌ ಕೂಡ ಸುಮ್ಮನಾಗಿದ್ದಾರೆ. ಇದು ಒಟ್ಟಾರೆ ಕೆಲಸದ ಮೇಲೆ ಪರಿಣಾಮ ಬೀರಿದೆ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗುತ್ತಿದೆ. ಈ ವೇಳೆ ಲೋಕಾಯುಕ್ತರು ಮಧ್ಯಪ್ರವೇಶಿಸುವುದರಿಂದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಂತಹ ಕೆಳ ಹಂತದ ಅಧಿಕಾರಿಗಳು ಹೆದರಿ ಯೋಜನೆಗಳ ಅನುಷ್ಠಾನಕ್ಕೆ ಅನುಮೋದನೆ ನೀಡುವುದನ್ನೇ ಸ್ಥಗಿತಗೊಳಿಸುತ್ತಾರೆ. ಆದ್ದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವರು ಈ ಬಗ್ಗೆ ಗಮನಹರಿಸಿ ಲೋಕಾಯುಕ್ತರೊಂದಿಗೆ ಚರ್ಚಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next