Advertisement
ಉಳಿತಾಯ ವಿಷಯದಲ್ಲಿ ನಾವು ಮಕ್ಕಳಾಗಬೇಕು. ಅಂದರೆ ಮಕ್ಕಳ ಮನಸ್ಥಿತಿಯನ್ನು ಅಳವಡಿಸಿಕೊಳ್ಳಬೇಕು. ಪುಡಿಗಾಸನ್ನು ತೆಗೆದಿಡುತ್ತಾ ಬರಬೇಕಿದೆ. ಪ್ರತೀ ದಿನವೂ ಇಂತಹ ಅಭ್ಯಾಸ ಬೆಳೆಸಿಕೊಳ್ಳಬೇಕು. ತಿಂಗಳ ಆರಂಭದಲ್ಲಿಯೇ ಉಳಿತಾಯಕ್ಕೆ ಹಣ ತೆಗೆದಿಟ್ಟು ಉಳಿದ ಹಣದಲ್ಲಿ ಇಡೀ ತಿಂಗಳು ಬದುಕುವ ಕಲೆಯನ್ನು ರೂಢಿಸಿಕೊಳ್ಳಬೇಕಿದೆ. ಇದರಿಂದ ಹಣಕಾಸಿನ ಶಿಸ್ತು ಬೆಳೆಸಿಕೊಳ್ಳಬೇಕು. ಇದು ಭವಿಷ್ಯಕ್ಕೆ ಒಂದಷ್ಟು ಆಸರೆಯಾದಂತಾಗುತ್ತದೆ.
Related Articles
Advertisement
ಜೀವವಿಮೆ ಯೋಜನೆಯಲ್ಲಿ ಹಣ ತೊಡಗಿಸಿಕೊಂಡರೆ ಉತ್ತಮ. ಸಂಬಳದಿಂದ ಪ್ರತೀ ತಿಂಗಳು ಕಡಿತವಾಗುವಂತೆ ಎಲ್‌ಐಸಿಯ ವಿವಿಧ ಸ್ಕೀಮ್‌ನಲ್ಲಿ ತೊಡಗಿಸಿಕೊಂಡರೆ ಕೆಲವು ವರ್ಷದ ಅನಂತರ ಉಳಿತಾಯದ ಮೊತ್ತ ಹೆಚ್ಚಾಗಲಿದೆ.
ಸುರಕ್ಷಿತ ಸಣ್ಣ ಉಳಿತಾಯ ಯೋಜನೆಗಳು ಮಾಸಿಕ ವರಮಾನ ಹೊಂದಿದವರಿಗೆ ಭವಿಷ್ಯನಿಧಿ ಹೂಡಿಕೆ ಉತ್ತಮ ಸಣ್ಣ ಉಳಿತಾಯ ಸಾಧನ. ಪ್ರತೀ ತಿಂಗಳು ಉದ್ಯೋಗದಾತರು ನೌಕರರ ವೇತನದಲ್ಲಿ ಮುರಿದುಕೊಳ್ಳುವ ಭವಿಷ್ಯನಿಧಿ ಹಣ ನಿಯಮಿತವಾಗಿ ಪಾವತಿಯಾಗುತ್ತಿರುತ್ತದೆ. ಉದ್ಯೋಗದಾತರು ತಮ್ಮ ಪಾಲಿನ ಹಣವನ್ನು ಈ ನಿಧಿಗೆ ಹಾಕುತ್ತಾರೆ. ಅಂಚೆ ಕಚೇರಿಯಲ್ಲಿಯೂ ಸಣ್ಣ ಉಳಿತಾಯದ ಹಲವು ಯೋಜನೆಗಳಿವೆ. ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಪಾಲಿಗೆ ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳು ಸುರಕ್ಷಿತ ಹಾಗೂ ನಿಶ್ಚಿತ ಆದಾಯ ತಂದುಕೊಡುತ್ತವೆ. ಆವರ್ತಕ ಠೇವಣಿ (ಆರ್‌ಡಿ), ಉಳಿತಾಯ ಖಾತೆ, ನಿಗದಿತ ಠೇವಣಿ (ಟೈಮ್ ಡಿಪಾಸಿಟ್), ಅಂಚೆ ಮಾಸಿಕ ವರಮಾನ ಖಾತೆ, ಹಿರಿಯ ನಾಗರಿಕರ ಖಾತೆ, ಸಾರ್ವಜನಿಕ ಪ್ರಾವಿಂಡೆಂಟ್ ಫಂಡ್, ರಾಷ್ಟ್ರೀಯ ಉಳಿತಾಯ ಪತ್ರದಂತಹ ಒಟ್ಟು 8 ಉಳಿತಾಯ ಯೋಜನೆಗಳು ಭಾರತೀಯ ಅಂಚೆ ಕಚೇರಿಯಲ್ಲಿ ಲಭ್ಯವಿವೆ. ಕೇವಲ 10 ರೂ. ಗಳಿಂದ ಗರಿಷ್ಠ ಎಷ್ಟು ಬೇಕಾದರೂ ಉಳಿತಾಯ ಮಾಡಲು ಇಲ್ಲಿ ಅವಕಾಶವಿದೆ.
ಸಣ್ಣ ಉಳಿತಾಯ ಯೋಜನೆಗಳು ಸಾರ್ವಜನಿಕರಲ್ಲಿ ಉಳಿತಾಯ ಪ್ರವೃತ್ತಿ ರೂಢಿಸುವ ಜತೆಗೆ ಇಳಿಗಾಲದ ಬದುಕಿಗೆ ಆಸರೆಯಾಗುತ್ತಿದೆ. ಹಣಕಾಸಿನ ಶಿಸ್ತು ಕೂಡ ಕಲಿಸುತ್ತದೆ. ಉಳಿತಾಯ ಖಾತೆಯನ್ನು ಆರಂಭಿಸುವುದೇ ಉಳಿತಾಯದ ಮೊದಲ ಪಾಠ. ಬ್ಯಾಂಕಿನಲ್ಲಿ ಉಳಿತಾಯಕ್ಕೆ ಸಂಬಂಧಿಸಿ ಬೇರೆ ಬೇರೆ ಖಾತೆಗಳು ಇರುವ ಹಿನ್ನೆಲೆಯಲ್ಲಿ ಅಲ್ಲಿ ಬೇರೆ ಬೇರೆ ದಾರಿಗಳಿವೆ. ಬೇರೆ ಬೇರೆ ಬ್ಯಾಂಕ್‌ಗಳು ಸದ್ಯ ಇರುವ ಹಿನ್ನೆಲೆಯಲ್ಲಿ ಅಲ್ಲಿನ ಉಳಿತಾಯ ಸೂತ್ರವನ್ನು ಸರಿಯಾಗಿ ತಿಳಿದುಕೊಂಡು ಮುಂದಡಿ ಇಟ್ಟರೆ ಉತ್ತಮ. ರಿಯಾಯಿತಿಯ ಪ್ರಪಂಚದಲ್ಲಿ, ಉಚಿತಗಳ ಅಬ್ಬರದಲ್ಲಿ, ಬಗೆ ಬಗೆಯ ವಸ್ತುಗಳ ಲೋಕದಲ್ಲಿ ಖರೀದಿ ಮಾಡುವ ಎಂಬ ಮನಸ್ಸಿನಲ್ಲಿ ಹಲವರಿರುವಾಗ ಉಳಿತಾಯ ಕಲ್ಪನೆ ಅವರಿಗೆ ಸರಿಹೊಂದುವುದಿಲ್ಲ. ಹೀಗಾಗಿ ಆವಶ್ಯಕತೆ, ಅಗತ್ಯ, ಅನಿವಾರ್ಯಗಳ ಲಕ್ಷ್ಮಣ ರೇಖೆಯನ್ನು ಸ್ಥೂಲವಾಗಿ ಪರಿಶೀಲಿಸಿ, ಉಳಿತಾಯ ಮನೋಭೂಮಿಕೆ ಬೆಳೆಸಬೇಕಿದೆ. ಗೃಹಸಾಲ ಹಾಗೂ ಶಿಕ್ಷಣ ಸಾಲ ಹೊರತುಪಡಿಸಿ ಇತರ ಕಾರಣಗಳಿಗೆ ಸಾಲ ಮಾಡುವುದನ್ನು ಸ್ವಲ್ಪ ಕಡಿಮೆ ಮಾಡಿದರೆ ಉತ್ತಮ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಆಧಾರದ ಮೇಲೆ ಉಳಿತಾಯ ಮಾಡಿ ತೆರಿಗೆ ವಿನಾಯಿತಿ ಪಡೆಯಬಹುದು. ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಗರಿಷ್ಠ 10,000 ರೂ. ಮಾತ್ರ ಇಟ್ಟು ಉಳಿದ ಹಣವನ್ನು ಅವಧಿ ಠೇವಣಿಗೆ ವರ್ಗಾಯಿಸಿದರೆ ಉತ್ತಮ. - ದಿನೇಶ್ ಇರಾ