Advertisement

Belagavi; ಆಕ್ಷೇಪಾರ್ಹ ಪೋಸ್ಟ್ ಗಳು ಕಂಡರೆ ಸೂಕ್ತ ಕ್ರಮ ಕೈಗೊಳ್ಳಿ: ಡಾ.ಜಿ.ಪರಮೇಶ್ವರ್

11:55 AM Nov 20, 2023 | Team Udayavani |

ಬೆಳಗಾವಿ: ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಸುಳ್ಳುಸುದ್ದಿಗಳು, ಪ್ರಚೋದನಾಕಾರಿ ಹೇಳಿಕೆ ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗಿರುವುದು ಕಂಡುಬಂದರೆ ತಕ್ಷಣವೇ ಕಾರ್ಯಪ್ರವೃತ್ತರಾಗಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹಸಚಿವ ಜಿ.ಪರಮೇಶ್ವರ್ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ನಗರದ ಪೊಲೀಸ್ ಆಯುಕ್ತಾಲಯಕ್ಕೆ ಸೋಮವಾರ ಭೇಟಿ ನೀಡಿದ ಅವರು, ಸಾಮಾಜಿಕ ಜಾಲತಾಣ ನಿಗಾ ಘಟಕ, ನಿಯಂತ್ರಣ ಕೊಠಡಿಗಳನ್ನು ಖುದ್ದಾಗಿ ವೀಕ್ಷಿಸಿದ ಅವರು, ಆಕ್ಷೇಪಾರ್ಹ ಮಾಹಿತಿ, ಸುಳ್ಳು ಸುದ್ದಿಗಳು ಬಂದಾಗ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಇದೇ ಸಂದರ್ಭದಲ್ಲಿ ಸೂಕ್ತ ತಾಂತ್ರಿಕ ತರಬೇತಿ ಹೊಂದಿದ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ನಿಯೋಜಿಸಲು ಸೂಚನೆ ನೀಡಿದರು. ಬಳಿಕ ನಗರ ನಿಯಂತ್ರಣ ಕೊಠಡಿ ಹಾಗೂ ವೈರ್ ಲೆಸ್ ವಿಭಾಗದ ಕಾರ್ಯಚಟುವಟಿಕೆಗಳು ಹಾಗೂ ದಾಖಲೆ ಕೊಠಡಿಯನ್ನು ಖುದ್ದಾಗಿ ವೀಕ್ಷಿಸಿದರಲ್ಲದೆ, ನಿಯಂತ್ರಣ ಕೊಠಡಿಗೆ ಬರುವ ಕರೆಗಳು ಹಾಗೂ ಮಾಹಿತಿಯ ಲಾಗ್ ಪುಸ್ತಕವನ್ನು ಪರಿಶೀಲಿಸಿದರು.

ಸಂಚಾರ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಕಟ್ಟಲು ಏಳು ದಿನಗಳ ಕಾಲಾವಕಾಶ ನೀಡಬೇಕು. ಇದಾದ ಬಳಿಕ ನ್ಯಾಯಾಲಯದಿಂದ ಸಮನ್ಸ್ ಹೋಗಬೇಕು. ದಂಡ ಕಟ್ಟದಿದ್ದರೆ ಅಥವಾ ನ್ಯಾಯಾಲಯಕ್ಕೆ ಹಾಜರಾಗದಿದ್ದರೆ ವಾಹನ ಸೀಜ್ ಮಾಡಬೇಕು ಎಂದು ಗೃಹ ಸಚಿವ ಪರಮೇಶ್ವರ್ ನಿರ್ದೇಶನ ನೀಡಿದರು.

ಬೆಳಗಾವಿ ನಗರದ ವಿವಿಧ ವೃತ್ತಗಳು ಹಾಗೂ ರಸ್ತೆಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ವೀಕ್ಷಿಸಿದ ಸಚಿವರು ಸಿಸಿಟಿವಿ ಮೇಲೆ ನಿಗಾ ವಹಿಸಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪ್ರತಿಯೊಂದು ಕ್ಯಾಮೆರಾ ಅಳವಡಿಸಿರುವ ವೃತ್ತ ಮತ್ತು ರಸ್ತೆ ಕುರಿತು ಸಂಪೂರ್ಣ ಮಾಹಿತಿ ಇರಬೇಕು.

Advertisement

ಇದಲ್ಲದೇ ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳ ಮೇಲೆ ಕೂಡ ನಿಗಾವಹಿಸಬೇಕು ಎಂದು ಸೂಚನೆ ನೀಡಿದರು. ಪೊಲೀಸ್ ಆಯುಕ್ತರಾದ ಎಸ್.ಎನ್.ಸಿದ್ದರಾಮಪ್ಪ ಅವರು, ವಿವಿಧ ಘಟಕಗಳ ಕಾರ್ಯನಿರ್ವಹಣೆ ಕುರಿತು ವಿವರಿಸಿದರು.

ಸಾಮಾಜಿಕ ಜಾಲತಾಣ ನಿಗಾ ಘಟಕವು ಕ್ರಿಯಾಶೀಲವಾಗಿದ್ದು, ಪ್ರತಿಯೊಂದು ಚಟುವಟಿಕೆಗಳ ಮೇಲೆ ನಿಗಾವಹಿಸಲಾಗಿದೆ. ಇತ್ತೀಚೆಗೆ ಪ್ರಕರಣಗಳನ್ನು ಕೂಡ ದಾಖಲಿಸಲಾಗಿದೆ ಎಂದರು.

ಇದಲ್ಲದೆ ಅಧಿವೇಶನ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ತೀವ್ರ ನಿಗಾ ವಹಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಸಿದ್ದರಾಮಪ್ಪ ತಿಳಿಸಿದರು.

ನಗರದಲ್ಲಿ ಯಾವುದೇ ರೀತಿಯ ಆಕ್ಷೇಪಾರ್ಹ ಪೋಸ್ಟ್ ಗಳು, ಕೋಮುಭಾವನೆ ಕೆರಳಿಸುವ ಪೋಸ್ಟ್, ಪ್ರಚೋದಾತ್ಮಕ ಹೇಳಿಕೆ, ಘಟನೆಗಳು ಕಂಡುಬಂದರೆ ಕೂಡಲೇ ಐಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಡಿಸಿಪಿ ರೋಹನ್ ಜಗದೀಶ್ ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಅಧೀಕ್ಷಕ ಡಾ.ರವೀಂದ್ರ ಗಡಾದಿ, ಬೆಳಗಾವಿ ನಗರ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಸ್ನೇಹಾ ಸೇರಿದಂತೆ ಪೊಲೀಸ್ ಆಯುಕ್ತಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next