ಹಾವೇರಿ: ಮಹಿಳೆಯರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಬ್ಯಾಡಗಿ ತಾಪಂ ಸಭಾಭವನದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕುರಿತು ಹಾಗೂ ಗ್ರಾಮೀಣ ಜೀವನೋಪಾಯ ಕಾರ್ಯಕ್ರಮಗಳ ಕುರಿತು ತಾಲೂಕು ಮಟ್ಟದ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಸಮಾನ ಕೂಲಿ ವೇತನವಿದೆ. ದುಡಿಯುವ ಕೈಗಳಿಗೆ ಕೆಲಸ ನೀಡಿ ಗ್ರಾಮೀಣ ಭಾಗದಲ್ಲಿ ದೀರ್ಘ ಕಾಲ ಬಾಳಿಕೆ ಬರುವ ಆಸ್ತಿಗಳ ಸೃಜನೆ ಮಾಡುವ ಉದ್ದೇಶವಿದೆ. ಸ್ವಸಹಾಯ ಸಂಘದವರು ಕೇವಲ ಉಳಿತಾಯಕ್ಕಾಗಿ ಸಂಘವನ್ನು ರಚನೆ ಮಾಡದೇ ಸ್ವಸಹಾಯ ಸಂಘದಲ್ಲಿ ಆದಾಯ ಉತ್ಪನ್ನವಾಗುವ ಸ್ವ-ಉದ್ಯೋಗದಿಂದ ಮಾತ್ರ ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ತಾಪಂ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ ಮಾತನಾಡಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ವರ್ಷಕ್ಕೆ ಪ್ರತಿ ಕುಟುಂಬಕ್ಕೆ 100 ದಿವಸ ಕೂಲಿ ಕೆಲಸ ನೀಡುವ ಉದ್ದೇಶದಿಂದ ಉದ್ಯೋಗ ಭರವಸೆಗಾಗಿ ಯೋಜನೆ ಜಾರಿಯಲ್ಲಿದ್ದು ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳನ್ನು ಮಾಡಿಕೊಳ್ಳಬೇಕು ಎಂದರು. ಜಿಪಂ ಐಇಸಿ ಸಂಯೋಜಕರಾದ ಚನ್ನವೀರಸ್ವಾಮಿ ಹಿರೇಮಠ, ಈ ವರ್ಷ ಮಣ್ಣು ಮತ್ತು ನೀರಿನ ಸಂರಕ್ಷಣಾ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಮಹಿಳೆಯರಿಗೆ ತಿಳಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಶಾಂತ ಬಳೆಗಾರ, ರಮೇಶ, ಡಿ.ವಿ. ಅಂಗೂರ, ಗಿರೀಶ ಬೆನ್ನೂರ ಹಾಗೂ ಪ್ರದೀಪ ಗಣೇಶ್ಕರ, ನಾಗರಾಜ ಹಡಗಲಿ, ಮಂಜುನಾಥ ದೊಡ್ಡಗೌಡ್ರ ಇದ್ದರು. ಶಾನವಾಜ ಚಿಣಗಿ ಸ್ವಾಗತಿಸಿದರು. ವಾಣಿಶ್ರೀ ಗಡ್ಡದ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.