ಅಫಜಲಪುರ: ಹಲ್ಲುಗಳ ಆರೋಗ್ಯ ಸಮಸ್ಯೆಯಾದರೆ ಖಾಸಗಿ ಆಸ್ಪತ್ರೆಗಳಲ್ಲಿ ಸಾವಿರಾರು ರೂ. ಖರ್ಚು ಮಾಡ ಬೇಕಾಗುತ್ತದೆ. ಹೀಗಾಗಿ ಸರ್ಕಾರದಿಂದ ನಡೆಯುವ ಉಚಿತ ಆರೋಗ್ಯ ಶಿಬಿರಗಳಲ್ಲಿ ಹಲ್ಲುಗಳ ಆರೋಗ್ಯ ತಪಾಸಣೆ ಮಾಡಿಕೊಂಡು ಶಿಬಿರದ ಲಾಭ ಪಡೆದುಕೊಳ್ಳಿ ಎಂದು ಎಂದು ಜಿಲ್ಲಾ ಎನ್‌ಒಎಚ್‌ಪಿ ಕಾರ್ಯಕ್ರಮ ಅಧಿಕಾರಿ ಡಾ| ಸಂಧ್ಯಾ ಕಾನೇಕರ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ದಂತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.
ಆರೋಗ್ಯವಂತರಾಗಿ ಜೀವನ ನಡೆಸಬೇಕಾದರೆ ಸದೃಢ ಹಲ್ಲುಗಳಿರಬೇಕು. ಹಲ್ಲುಗಳು ನಮ್ಮ ಅಂದ, ಆರೋಗ್ಯ ಎರಡಕ್ಕೂ ಬೇಕು. ಹೀಗಾಗಿ ಹಲ್ಲುಗಳ ಆರೋಗ್ಯದ ಕಡೆ ಎಲ್ಲರೂ ಗಮನ ಹರಿಸಬೇಕು. ಹೀಗಾಗಿ ನಿಯಮಿತ ತಪಾಸಣೆ, ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಅಭಯಕುಮಾರ, ಮಕ್ಕಳ ತಜ್ಞ ಡಾ| ವಿನೋದ ಮಾತನಾಡಿ ಹಲ್ಲುಗಳು ಮತ್ತು ಬಾಯಿ ಆರೋಗ್ಯದ ಬಗ್ಗೆ ಇನ್ನೂ ಸಾಕಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. ಪಾಲಕರು ಮಕ್ಕಳನ್ನು ಈಗಿನಿಂದಲೇ ಹಲ್ಲು, ಬಾಯಿ ಆರೋಗ್ಯದ ಕಡೆ ಗಮನ ಹರಿಸಿ, ಸಿಹಿ ಪದಾರ್ಥ ತಿಂದ ಬಳಿಕ ನೀರು ಕುಡಿಸಿ. ಇಲ್ಲದಿದ್ದರೆ ಹುಳುಕು ಬಿದ್ದು ಹಲ್ಲುಗಳು ಬೀಳುವ ಸಾಧ್ಯತೆ ಇದೆ. ದೊಡ್ಡವರು ದುಶ್ಚಟಗಳಿಂದ ದೂರವಿದ್ದು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಿ ಎಂದು ಹೇಳಿದರು.
ದಂತ ವೈದ್ಯೆ ಡಾ| ಶೃತಿ ಎಂ. ಶಿಬಿರಕ್ಕೆ ರೋಗಿಗಳ ದಂತ, ಬಾಯಿ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು. ಡಾ| ನಾಗೇಶ, ಡಾ| ಸಂಗಮೇಶ ಟಕ್ಕಳಕಿ, ಡಾ| ರಾಜೇಶ್ವರಿ, ಡಾ| ಭುವನೇಶ್ವರಿ, ಡಾ| ಜ್ಯೋತಿ ದೇಸಾಯಿ, ಸಿಬ್ಬಂದಿಗಳಾದ ರವಿಕುಮಾರ ಬುರ್ಲೆ ಇದ್ದರು.