ಕಲಬುರಗಿ: ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಬೇಕಾದ ಆತ್ಯಾಧುನಿಕ ಸೌಲಭ್ಯಗಳನ್ನು ನಗರದ ವಿಟಿಎಸ್‌ಎಂ ಪೆರಿಫೆರಲ್ ಕ್ಯಾನ್ಸರ್ ಕೇಂದ್ರಒಳಗೊಂಡಿದ್ದು, ಸರ್ಕಾರ ಮತ್ತು ಸಂಘ-ಸಂಸ್ಥೆಗಳು ಒದಗಿಸುವ ಸೌಕರ್ಯಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರಿನ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆ ನಿರ್ದೇಶಕ ಡಾ| ಸಿ. ರಾಮಚಂದ್ರ ಹೇಳಿದರು. ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಕಟ್ಟಡದ ಹಿಂಭಾಗದಲ್ಲಿರುವ ವಿಠ್ಠಲರಾವ ತುಕಾರಾಂ ಮೆಮೋರಿಯಲ್ ಪೆರಿಫೆರಲ್ ಕ್ಯಾನ್ಸರ್ ಕೇಂದ್ರದ ಆವರಣದಲ್ಲಿ ಗುರುವಾರ ಇನ್ಫೋಸಿಸ್ ಫೌಂಡೇಶನ್‌ನಿಂದ ಕ್ಯಾನ್ಸರ್ ರೋಗಿಗಳು ಮತ್ತವರ ಸಂಬಂಧಿಕರು ತಂಗಲು ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ “ಧರ್ಮಶಾಲೆ’ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಯಾನ್ಸರ್ ಕಾಯಿಲೆ ಗುಣಪಡಿಸುವ ಎಲ್ಲ ತರಹದ ಆತ್ಯಾಧುನಿಕ ಯಂತ್ರಗಳು, ಲ್ಯಾಬ್‌ಗಳನ್ನೊಗೊಂಡ ಸುಸಜ್ಜಿತ ಕ್ಯಾನ್ಸರ್ ಕೇಂದ್ರ ಇದಾಗಿದೆ. ಹೈ-ಕದಲ್ಲಿ ಬಡವರೇ ಹೆಚ್ಚಾಗಿದ್ದು, ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಉಪಯೋಗವಾಗಲಿ
ಎಂಬ ಮುತುವರ್ಜಿಯಿಂದಲೇ ಕೇಂದ್ರ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಒಳ ರೋಗಿಗಳ 80 ಹಾಸಿಗೆ ಹೊಂದಿರುವ ಪೆರಿಫೆರಲ್ ಕ್ಯಾನ್ಸರ್ ಕೇಂದ್ರಕ್ಕೆ ಲೀನಿಯರ್ ಅಕ್ಷಲೇಟರ್ ಚಿಕಿತ್ಸೆ, ಸರ್ಜಿಕಲ್ ಅಂಕಾಲಾಜಿಸ್ಟ್ ವಿಭಾಗ, ಶಸ್ತ್ರಚಿಕಿತ್ಸೆ ವಿಭಾಗ, ವಿಕಿರಣ ವಿಭಾಗ ಮತ್ತು ತಜ್ಞ ವೈದ್ಯರು ಮತ್ತು ಸಿಬ್ಬಂದಿ ಒದಗಿಸಲಾಗಿದೆ. ಆದರೆ, ನಿರೀಕ್ಷಿಸಿದ ಮಟ್ಟದಲ್ಲಿ ಜನರು ಕೇಂದ್ರ ಉಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಮತ್ತಷ್ಟು ಸೌಲಭ್ಯಗಳನ್ನು ಕೇಂದ್ರಕ್ಕೆ ಕೊಡಿಸುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ಕೇಂದ್ರದ ಸಿಬ್ಬಂದಿ ಜವಾಬಾರಿ ಯಿಂದ ಬಡವರಿಗೆ ಉಪಯೋಗವಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದು ಡಾ| ಸಿ.ರಾಮಚಂದ್ರ ತಾಕೀತು ಮಾಡಿದರು.
ಇನ್ಫೋಸಿಸ್ ಫೌಂಡೇಶನ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಬಿನೋದ ಹಂಪಪುರ ಮಾತನಾಡಿ, ಪೆರಿಫೆರಲ್ ಕ್ಯಾನ್ಸರ್ ಕೇಂದ್ರಕ್ಕೆ ಬರುವ ರೋಗಿಗಳು ಮತ್ತು ಸಂಬಂಧಿಕರು ಉಳಿದುಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ 14 ತಿಂಗಳಲ್ಲಿ “ಧರ್ಮಶಾಲೆ’ ನಿರ್ಮಾಣ ಮಾಡಲಾಗಿದೆ. ಕ್ಯಾನ್ಸರ್ ರೋಗಿಗಳು ಹೆಚ್ಚಾಗಲಿ ಎಂಬ ಉದ್ದೇಶದಿಂದ ಕಟ್ಟಲಾಗಿಲ್ಲ. ಚಿಕಿತ್ಸೆ ಗೆ ಬರುವ ರೋಗಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಎಲ್ಲರೂ ಈ “ಧರ್ಮಶಾಲೆ’ಯನ್ನು ಉಪಯೋಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ವಿಟಿಎಸ್ ಎಂ ಪೆರಿಫೆರಲ್ ಕ್ಯಾನ್ಸರ್ ಕೇಂದ್ರದ ಉಸ್ತುವಾರಿ ಡಾ| ಗುರುರಾಜ ದೇಶಪಾಂಡೆ, ಜಿಮ್ಸ್ ನಿರ್ದೇಶಕ ಡಾ| ಉಮೇಶ ಎಸ್.ಆರ್., ಇನ್ಫೋಸಿಸ್ ಫೌಂಡೇಶನ್ ಖರೀದಿ ವಿಭಾಗದ ಮುಖ್ಯಸ್ಥ ಸಂಜಯ ಭಟ್, ಬೆಂಗಳೂರಿನ ಎಂಇ ನಿರ್ಮಾಣ ಸಂಸ್ಥೆಯ ರಮೇಶ, ಡಾ| ವಸಂತ ಹರಸೂರ, ಡಾ| ನವೀನ್ ಇದ್ದರು.
ವಿಟಿಎಸ್‌ಎಂ ಪೆರಿಫೆರಲ್ ಕ್ಯಾನ್ಸರ್ ಕೇಂದ್ರದ ಅಧಿಕಾರಿಗಳಲ್ಲಿ ಪರಸ್ಪರ ಸಮನ್ವಯತೆ ಇರಲಿ. ಅನ್ನ ನೀಡುವ ಸಂಸ್ಥೆ ಹೆತ್ತ ತಾಯಿಗೆ ಸಮಾನ. ಸೇವೆಯಲ್ಲಿ ಬದ್ಧತೆ ಕಳೆದುಕೊಂಡು ತಾಯಿಗೆ ಮೋಸ ಮಾಡಬೇಡಿ. ನಿಮಗೆ ಎಲ್ಲವೂ ಸರಿಯಾಗಿ ಸಿಗುತ್ತಿರುವಾಗ ಕಡಿಮೆಯಾಗಿದ್ದೇನು? ಬಡವರು ನಿಮ್ಮ ಮೇಲೆ ನಂಬಿಕೆ ಇಟ್ಟುಕೊಂಡು ಬರುತ್ತಾರೆ. ಅವರ ನಂಬಿಕೆ ಕಳೆದುಕೊಳ್ಳಬೇಡಿ.
ಡಾ| ಸಿ. ರಾಮಚಂದ್ರ, ನಿರ್ದೇಶಕ, ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತೆ