Advertisement

ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಬಹುಮಾನ ಗಳಿಸಿ: ಜಿಲ್ಲಾಧಿಕಾರಿ

11:26 PM Nov 28, 2019 | Sriram |

ಶಿರ್ವ:ವಿಶೇಷ ಮಕ್ಕಳ ಶಿಸ್ತುಬದ್ಧ ಪಥಸಂಚಲನ ಮನಸ್ಸಿಗೆ ತುಂಬಾ ಖುಷಿಕೊಟ್ಟಿದ್ದು ನೆನಪಿನಲ್ಲಿ ಉಳಿಯುವಂತಾಗಿದೆ. ವಿಶೇಷ ಮಕ್ಕಳ ಗೌರವ ರಕ್ಷೆಯನ್ನು ಗೌರವಪೂರ್ವಕವಾಗಿ ಸ್ವೀಕರಿಸಿದ್ದು, ಶಿಸ್ತುಬದ್ದವಾಗಿ ತರಬೇತಿ ನೀಡಿದ ಶಿಕ್ಷಕರಿಗೆ ಅಭಿನಂದನೆಗಳು. ವಿಶೇಷ ಮಕ್ಕಳ ಕಾರ್ಯಕ್ರಮಗಳಿಗೆ ಯಾವತ್ತೂ ಕರೆದರೂ ಪ್ರಥಮ ಆದ್ಯತೆ ನೀಡಿ ಭಾಗವಹಿಸುತ್ತೇನೆ. ಎಲ್ಲವಿಶೇಷ ಮಕ್ಕಳು ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸಿ ಸಿಕ್ಕಿದ ಅವಕಾಶ ಗಳನ್ನು ಸದ್ಬಳಕೆ ಮಾಡಿಕೊಂಡು ಬಹುಮಾನ ಗಳಿಸಿ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದರು.

Advertisement

ಅವರು ಗುರುವಾರ ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ಆಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ಅಂಗವಾಗಿ ಜರಗಿದ ಜಿಲ್ಲಾ ಮಟ್ಟದ ಕ್ರೀಡಾ ಕೂಟದ ಪಥಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ, ಆಕಾಶಕ್ಕೆ ತ್ರಿವರ್ಣಬಲೂನು ಹಾರಿ ಬಿಡುವುದರ ಮೂಲಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕೇವಲ ಸ್ಪರ್ಧಾ ವಿಜೇತರಿಗೆ ಮಾತ್ರ ಬಹುಮಾನಗಳನ್ನು ನೀಡುವುದಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನಗಳನ್ನು ನೀಡಿ ಪ್ರೋತಾಹಿಸುವಂತೆ ಸಂಘಟಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಮುಖ್ಯ ಅತಿಥಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿàಸ್‌ ಉಡುಪಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಪ್ರಥಮ ಬಾರಿಗೆ ಜಿಲ್ಲಾ ಮಟ್ಟದ ಕ್ರೀಡೋತ್ಸವ ಆಯೋಜಿಸಲಾಗಿದ್ದು, ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿದ ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಚಂದ್ರ ನಾಯ್ಕ ಮತ್ತು ಪ್ರಾಯೋಜಕತ್ವ ವಹಿಸಿದ ಮಾನಸ ಪಾಂಬೂರು ಸಂಸ್ಥೆಯ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.

ವಿಕಲ ಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಅಧಿಕಾರಿ ಚಂದ್ರ ನಾಯ್ಕ ಪ್ರಾಸಾವಿಕವಾಗಿ ಮಾತನಾಡಿ ಕ್ರೀಡಾಕೂಟದ ವಿಶೇಷತೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಜಿಲ್ಲಾಡಳಿತದ ಸಹಕಾರದೊಂದಿಗೆ ಎಲ್ಲಾ ಸ್ತರದ ಅಧಿಕಾರಿಗಳಿಗೆ ವಿಶೇಷ ಚೇತನರ ಬಗ್ಗೆ ಕಾನೂನು ಅರಿವು ಸಪ್ತಾಹ ಹಮ್ಮಿಕೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ವಿಶೇಷ ಚೇತನರ ಜಿಲ್ಲಾ ಸಮ್ಮೇಳನ ನಡೆಸಲು ಎಲ್ಲರ ಸಹಕಾರ ಕೋರಿದರು. ಸಂಸ್ಥೆಯ ಕಾರ್ಯದರ್ಶಿ ಜೋಸೆಫ್‌ ನೊರೋನ್ಹಾ, ಪ್ರಾಂಶುಪಾಲೆ ಸಿ|ಅನ್ಸಿಲ್ಲಾ ಫೆರ್ನಾಂಡಿಸ್‌ವೇದಿಕೆಯಲ್ಲಿದ್ದರು.

ಅಂತರಾಷ್ಟ್ರೀಯ ಮಟ್ಟದ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ ಸಂಸ್ಥೆಯ ಹಳೆವಿದ್ಯಾರ್ಥಿ ಅರ್ಚನಾ ಜೆ.ಕ್ರೀಡಾ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದರು. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆದು ಪಥಸಂಚಲನದಲ್ಲಿ ವಿಜೇತ ಮಕ್ಕಳ ಶಾಲೆ ಕಾರ್ಕಳ ಪ್ರಥಮ, ಮಾನಸ ಪಾಂಬೂರು ದ್ವಿತೀಯ ಹಾಗೂ ಆಶಾ ನಿಲಯ ಉಡುಪಿ ತೃತೀಯ ಸ್ಥಾನಗಳಿಸಿದ್ದು ಜಿಲ್ಲಾಧಿಕಾರಿ ಜಗದೀಶ್‌ ಬಹುಮಾನ ವಿತರಿಸಿದರು.

Advertisement

ಜಿಲ್ಲೆಯ 15 ವಿಶೇಷ ಮಕ್ಕಳ ಶಾಲೆಗಳಿಂದ 350 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.ಮಾನಸ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಡಾ|ಎಡ್ವರ್ಡ್‌ ಲೋಬೊ, ಸೈಮನ್‌ ಡಿ’ಸೋಜಾ, ಡಾ|ಜೆರಾಲ್ಡ್‌ ಪಿಂಟೊ, ಐಡಾ ಕರ್ನೆಲಿಯೊ, ವಲೇರಿಯನ್‌ ಫೆರ್ನಾಂಡಿಸ್‌, ಜೈವಿಠಲ್‌ ಮಣಿಪಾಲ, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.

ಮಾನಸ ಸಂಸ್ಥೆಯ ಅಧ್ಯಕ್ಷ ಹೆನ್ರಿ ಮೆನೇಜಸ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಚಂದ್ರೇಶ್‌ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿ,ಜಿಲ್ಲಾ ಮತ್ತು ರಾಜ್ಯ ವಿಶೇಷ ಮಕ್ಕಳ ಶಿಕ್ಷಕರ ಸಂಘದ ಅಧ್ಯಕ್ಷೆ ಡಾ|ಕಾಂತಿ ಹರೀಶ್‌ ವಂದಿಸಿದರು.

ಕ್ರೀಡಾಂಗಣಕ್ಕೆ ಮನವಿ
ಉಡುಪಿ ಜಿಲ್ಲಾ ಪಂಚಾಯತ್‌ ಸದಸ್ಯ ವಿಲ್ಸನ್‌ ರೊಡ್ರಿಗಸ್‌ ಮಾತನಾಡಿ ಮಾನಸ ಸಂಸ್ಥೆಯ ಕ್ರೀಡಾಂಗಣಕ್ಕೆ ಮೀಸಲಾದ ಸ್ಥಳದಲ್ಲಿರುವ ಅಕೇಶಿಯಾ ಮರಗಳನ್ನು ತೆರವುಗೊಳಿಸಿ ವ್ಯವಸ್ಥಿತ ಕ್ರೀಡಾಂಗಣ ನಿರ್ಮಾಣಕ್ಕೆ ಅನುಕೂಲವಾಗುವಂತೆ ಅರಣ್ಯ ಇಲಾಖೆಯಿಂದ ಇರುವ ತಾಂತ್ರಿಕ ಅಡ್ಡಿಯನ್ನು ಸರಿಪಡಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next