ವಿಜಯಪುರ: ನೀರು ಹರಿಸಲು ಕ್ರಮ ಕೈಗೊಳ್ಳದಿದ್ದರೆ ಆಮರಣ ಉಪವಾಸಕ್ಕೆ ಅಣಿಯಾಗಲಾಗುವುದು, ರೈತರಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಜಿಲ್ಲೆಯ ಎಲ್ಲ ಏತ ನೀರಾವರಿ ಯೋಜನೆಗಳ ವ್ಯಾಪ್ತಿಗೆ ಬರುವ ಎಲ್ಲ ಕಾಲುವೆಗಳಿಗೆ ಏಪ್ರಿಲ್ 30ರವರೆಗೆ ನೀರು ಹರಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಆಲಮಟ್ಟಿಯಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ನೀರು ನಮ್ಮ ಹಕ್ಕು, ಈ ಹಕ್ಕು ಕೊಡದೇ ಹೋದರೆ ಸೋಮವಾರದಿಂದ ಆಮರಣ ಉಪವಾಸ ಸತ್ಯಾಗ್ರಹ ಪ್ರಾರಂಭಿಸಬೇಕಾಗುತ್ತದೆ ಎಂದರು.
ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಗತ್ಯವಿದೆ. ನಾವೇನು ನಿಮಗೆ ಭಿಕ್ಷೆ ಕೇಳುತ್ತಿಲ್ಲ. ಆಣೆಕಟ್ಟು ನಿರ್ಮಿಸಿರುವುದು ರೈತರಿಗಾಗಿ ನೀರಿನ ಮೇಲೆ ರೈತರಿಗೆ ಸಂಪೂರ್ಣ ಹಕ್ಕಿದೆ. ಈ ಸದ್ಯ ನೀರು ಕೊಡುವುದಿಲ್ಲ ಎನ್ನುವುದಕ್ಕೆ ಇವರ್ಯಾರು? ರೈತರಿಂದಲೇ ಆಯ್ಕೆಯಾಗಿ ಹೋದವರು ಇವರು ರೈತರ ಹಾಗೂ ಜನಸಾಮಾನ್ಯರ ಬೇಡಿಕೆಗೆ ಸ್ಪಂದಿಸುವುದು ಇವರ ಕರ್ತವ್ಯ. ಒಂದು ವೇಳೆ ನೀರು ಹರಿಸಲು ಪ್ರಾರಂಭಿಸದಿದ್ದರೆ ಆಮರಣ ಉಪವಾಸ ಸತ್ಯಾಗ್ರಹ ಕೂಡಬೇಕಾಗುತ್ತದೆ. ರೈತರಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಎಚ್ಚರಿಕೆ ನೀಡಿದ್ದಾರೆ. ಯಾವುದೇ ಹಂತಗಳ ನೆಪ ಹೇಳದೆ ಎಟಿಎಂ ತರಹ ನೀರು ಕೊಡಬೇಕು ಎಂದು ಆಗ್ರಹಿಸಿದರು.
ಧರಣಿಗೆ ಇಂಗಳೇಶ್ವರ ರೈತರ ಬೆಂಬಲ: ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ನಡೆಸುತ್ತಿರುವ ಎರಡನೇ ದಿನ ಧರಣಿಗೆ ಇಂಗಳೇಶ್ವರ ಗ್ರಾಮದ ರೈತರು ಧರಣಿ ಸ್ಥಳಕ್ಕೆ ಆಗಮಿಸಿ ಬೆಂಬಲ ನೀಡಿದರು. ರೇವಣಸಿದ್ದ ದಳವಾಯಿ ಮಾತನಾಡಿ, ಈ ಸದ್ಯ ರೈತರಿಗೆ ನೀರು ಅಗತ್ಯವಿದ್ದು ಬೇಸಿಗೆ ಸಂದರ್ಭದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರಿನ ಅಗತ್ಯವಿದೆ. ಕೂಡಲೇ ಕಾಲುವೆಗೆ ನೀರು ಹರಿಸಿ ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕು. ಹಾಗೂ ಬೇಸಿಗೆಯ ಬೆಳೆಗಳಿಗೆ ನೀರಿನ ಅನುಕೂಲತೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಒಂದು ವೇಳೆ ಹೋರಾಟಕ್ಕೆ ಸ್ಪಂದಿಸದಿದ್ದರೆ ನೂರಾರು ರೈತರು ಬೆನ್ನಿಗೆ ಬೆಂಬಲ ನೀಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರೈತ ಮುಖಂಡರಾದ ವಿಠ್ಠಲ ಬಿರಾದಾರ, ಎಸ್. ಎಂ.ಬೂದಿಹಾಳ, ಯಲ್ಲಪ್ಪ ಮನ್ಯಾಳ, ಅಂಬರೀಶ ಚಿಕ್ಕಮಠ, ಸಿದ್ದಲಿಂಗಪ್ಪ ಬಿರಾದಾರ, ಚನಬಸಪ್ಪ ಸಿಂಧೂರ, ಮಲ್ಲಪ್ಪ ಮಾಡ್ಯಾಳ, ರಾಜೇಸಾಬ ವಾಲಿಕಾರ, ಅಂಬಣ್ಣ ಹಡಪದ, ಗುರಲಿಂಗಪ್ಪ ಪಡಸಲಗಿ, ಶಿವಪ್ಪ ಸುಂಗಠಾಣ, ಚನ್ನಪ್ಪ ನಾಟೀಕಾರ, ಸೋಮಯ್ಯ ಇಂಬ್ರಾಹಿಂಪುರ, ಮೇಲಪ್ಪ ಹರಿಜನ, ಸಂಗಪ್ಪ ಪಡಸಲಗಿ, ಮಲ್ಲಪ್ಪ ಪಡಸಲಗಿ, ಅಪ್ಪು ಪತಂಗೆ, ಸಿದ್ದು ಬೊಮ್ಮನಳ್ಳಿ, ಉಮೇಶ ಹಡಪದ, ಶಂಕರ ಹದಿಮೂರ, ದಿಲೀಪ ಯಾಳವಾರ, ರಾಉ ಕಾರಬಾರಿ ಇತರರು ಇದ್ದರು.