ಮಾನ್ವಿ: ತಾಲೂಕಿನಲ್ಲಿ ಬೇಸಿಗೆ ವೇಳೆ ಕುಡಿವ ನೀರಿನ ಅಭಾವ ಉಂಟಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪಟ್ಟಣ-ಗ್ರಾಮೀಣ ಭಾಗದಲ್ಲಿನ ಜನರಿಗೆ ಜಾನುವಾರುಗಳಿಗೆ ಯಾವುದೇ ರೀತಿಯಲ್ಲಿ ನೀರಿನ ಅಭಾವ ಉಂಟಾಗದಂತೆ ಪುರಸಭೆ ಮುಖ್ಯಾಧಿಕಾರಿಗಳು ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ಕುರಿತು ಮಾನ್ವಿ ಮತ್ತು ಸಿರವಾರಗಳ ತಾಲೂಕು ಮಟ್ಟದ ಅಧಿಕಾರಿಗಳ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ಇರುವ ಕೊಳವೆ ಬಾವಿಗಳ ದುರಸ್ತಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆ ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಸಮರ್ಪಕ ನೀರು ಪೂರೈಕೆ ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು. ಕಳೆದ ಬಾರಿ ನಡೆದ ಐಸಿಸಿ ಸಭೆಯಲ್ಲಿ ತಾಲೂಕಿನಲ್ಲಿನ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಿಕೊಳ್ಳಲು ಕಾಲುವೆಗಳ ಮೂಲಕ ನೀರು ಬಿಡುವಂತೆ ಒತ್ತಾಯಿಸಲಾಗಿತ್ತು. ರಾಯಚೂರು ಕೆರೆಗೆ ನೀರು ತುಂಬಿಸಲು ಏ.11ರಿಂದ 20ರ ವರೆಗೆ ಕಾಲುವೆಗಳಿಗೆ ನೀರು ಬಿಡುವುದರಿಂದ 9 ದಿನಗಳ ಕಾಲ ಮಾನ್ವಿ ಮತ್ತು ಸಿರವಾರ ತಾಲೂಕುಗಳ ಕುಡಿಯುವ ನೀರಿನ ಕೆರೆಗಳನ್ನು ತುಂಬಿಸಲು ಅವಕಾಶವಿದೆ. ಇದರಿಂದ ಕಾಲುವೆ ನೀರು ಬಳಸಿಕೊಳ್ಳಲು ತಹಶೀಲ್ದಾರ್ ಹಾಗೂ ತಾಪಂ ಇಒ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ನೀರವಾರಿ ಇಲಾಖೆ ಎಇಇ ಸೇರಿದಂತೆ ಗ್ರಾಪಂ ಪಿಡಿಒ ಒಳಗೊಂಡಂತೆ ಟಾಸ್ಕ್ ಪೋರ್ಸ್ ರಚಿಸಿಕೊಂಡು ಕೆರೆಗಳನ್ನು ತುಂಬಿಸಿಕೊಂಡಲ್ಲಿ ಜನರಿಗೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಪುರಸಭೆ ವ್ಯಾಪ್ತಿಯಲ್ಲಿನ ರಬ್ಬಣಕಲ್ ಸೇರಿದಂತೆ ವಿವಿಧ ಕೆರೆಗಳನ್ನು ಗರಿಷ್ಠ ಪ್ರಮಾಣದ ವರೆಗೆ ತುಂಬಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ಗಂಗಾಧರರವರಿಗೆ ಸೂಚಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಚಂದ್ರಕಾಂತ್.ಎಲ್.ಡಿ, ಸಿರವಾರ ತಹಶೀಲ್ದಾರ್ ಹುಲಿಯಪ್ಪ ನಾಯಕ, ಸಿರವಾರ ತಾಪಂ ಇಒ ಉಮೇಶ, ಮಾನ್ವಿ ಪುರಸಭೆ ಮುಖ್ಯಾಧಿಕಾರಿ ಗಂಗಧಾರ ಸೇರಿದಂತೆ ನೀರವಾರಿ ಇಲಾಖೆ ಅಧಿ ಕಾರಗಳು ಹಾಗೂ ವಿವಿಧ ಗ್ರಾಪಂಗಳ ಪಿಡಿಒಗಳು ಸೇರಿದಂತೆ ಇನ್ನಿತರರು ಇದ್ದರು.