Advertisement
ಸುವರ್ಣ ವಿಧಾನಸೌಧದಲ್ಲಿ ಶನಿವಾರ ನಡೆದ ಕೃಷಿ ಇಲಾಖೆಯ ಬೆಳಗಾವಿ ವಿಭಾಗೀಯ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿಬ್ಬಂದಿ ಕೊರತೆ ಮೊದಲಾದ ಕಾರಣ ಹೇಳಿ ಬೆಳೆಹಾನಿ ಪರಿಹಾರ ನೀಡುವ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಈಗಾಗಲೇ ನಿರ್ದೇಶನ ನೀಡಿರುವಂತೆ ಎಲ್ಲ ಜಿಲ್ಲೆಗಳಲ್ಲಿ ಹೆಸರು, ಉದ್ದು ಖರೀದಿ ಕೇಂದ್ರಗಳನ್ನು ಆರಂಭಿಸಿ ರೈತರ ನೋಂದಣಿ ಜೊತೆ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದರು.
Related Articles
Advertisement
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಜಂಟಿ ಸಮೀಕ್ಷೆ ಪೂರ್ಣಗೊಂಡಿದ್ದು, ಪರಿಹಾರ ಪೋರ್ಟಲ್ ನಲ್ಲಿ ಈಗಾಗಲೇ ಮಾಹಿತಿಯನ್ನು ಅಪ್ ಲೋಡ್ ಮಾಡಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳ ಜೊತೆಗೆ ಸಹಾಯಕ ಕೃಷಿ ಅಧಿಕಾರಿಗಳಿಗೂ ಲಾಗಿನ್ ಐಡಿ ಒದಗಿಸಿದರೆ ಪರಿಹಾರ ಪ್ರಕ್ರಿಯೆ ಚುರುಕುಗೊಳಿಸಬಹುದು ಎಂದು ಸಲಹೆ ನೀಡಿದರು.
ಬೆಳಗಾವಿ ಜಿಪಂ ಸಿಇಒ ದರ್ಶನ್. ಎಚ್.ವಿ ಅವರು ಮಾತನಾಡಿ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಸಮೀಕ್ಷೆ ಮತ್ತು ಪರಿಹಾರ ಪ್ರಕ್ರಿಯೆ ವಿಳಂಬಗೊಳ್ಳುತ್ತಿದೆ. ಆದ್ದರಿಂದ ತಳಹಂತದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕಾತಿ ಮಾಡಬೇಕು ಎಂದು ಮನವಿ ಮಾಡಿದರು.
ಬೆಳೆವಿಮೆ ಪರಿಹಾರ: ಇಲಾಖೆ ಅಭಿವೃದ್ಧಿ ಪಡಿಸಿರುವ ಆ್ಯಪ್ ಮೂಲಕ ರೈತರೇ ಸ್ವತಃ ಬೆಳೆ ಸಮೀಕ್ಷೆ ಮಾಡಲು ಪ್ರೋತ್ಸಾಹ ನೀಡಬೇಕು. ಇದಕ್ಕಾಗಿ ಸೂಕ್ತ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದು ಹೇಳಿದ ಸಚಿವರು ಬೆಳೆವಿಮೆ ಪರಿಹಾರ ಕ್ಲೇಮು ಪ್ರಕರಣಗಳನ್ನು ಕೂಡಲೇ ಇತ್ಯರ್ಥಪಡಿಸಬೇಕು. ಇದಕ್ಕಾಗಿ ವಿಮೆ ಕಂಪನಿಯ ಜೊತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಪಿಎಂ-ಕಿಸಾನ್ ಯೋಜನೆಯಡಿ ರೈತರ ಇ-ಕೆವೈಸಿ ಜೋಡಣೆಗೆ ಎಲ್ಲ ಅಧಿಕಾರಿಗಳು ಪ್ರಯತ್ನಿಸಬೇಕು. ಇದಕ್ಕೆ ಇದೇ ತಿಂಗಳ 7 ಕೊನೆಯ ದಿನವಾಗಿರುವುದರಿಂದ ಬಾಕಿ ಉಳಿದ ರೈತರ ಇ-ಕೆವೈಸಿ ಮಾಡಬೇಕು. ಇ-ಕೆವೈಸಿ ಜೋಡಣೆಯಲ್ಲಿ ಬೆಳಗಾವಿ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿದೆ. ಇದನ್ನೇ ಮಾದರಿಯಾಗಿಟ್ಟುಕೊಂಡು ಉಳಿದ ಜಿಲ್ಲೆಯವರು ರೈತರ ಕೆವೈಸಿ ಮಾಡಿಸಬೇಕು. ಆದಾಗ್ಯೂ ನಿರೀಕ್ಷಿತ ಪ್ರಗತಿ ಸಾಧಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ ಎಚ್ಚರಿಕೆ ನೀಡಿದರು.
ರಸಗೊಬ್ಬರ ದಾಸ್ತಾನು ಇರುವುದರಿಂದ ನಿಗದಿತ ಅವಧಿಯಲ್ಲಿ ಪಿಒಎಸ್ ಮೂಲಕ ರೈತರಿಗೆ ವಿತರಣೆ ಮಾಡಬೇಕು. ರಸಗೊಬ್ಬರ ಗುಣ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಯಾ ಜಿಲ್ಲೆಗಳಿಗೆ ನೀಡಲಾಗಿರುವ ವಾರ್ಷಿಕ ಗುರಿಯ ಪ್ರಕಾರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳಿಸಬೇಕು. ಒಂದು ವೇಳೆ ಕಳಪೆ ಮಾದರಿ ಕಂಡುಬಂದಲ್ಲಿ ನಿಯಮಾವಳಿ ಪ್ರಕಾರ ಪ್ರಕರಣ ದಾಖಲಿಸಬೇಕು ಎಂದ ಸಚಿವರು ರಸಗೊಬ್ಬರ ಗುಣ ನಿಯಂತ್ರಣ, ಬೆಳೆಹಾನಿ ಸಮೀಕ್ಷೆ, ಪರಿಹಾರ ವಿತರಣೆ ಸೇರಿದಂತೆ ಬಹುತೇಕ ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸದ ಜಿಲ್ಲೆಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರೈತ ವಿದ್ಯಾನಿಧಿ ಯೋಜನೆ: ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯ ಕುರಿತು ಅನೇಕ ಮಕ್ಕಳಿಗೆ ಮಾಹಿತಿ ಇರುವುದಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮೂಲಕ ಎಸ್.ಎಸ್. ಪೋಟಲ್ ನಲ್ಲಿ ಮಕ್ಕಳು ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡುವಂತೆ ಅಧಿಕಾರಿಗಳು ಕೆಲಸ ಮಾಡಬೇಕಿದೆ ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರಾದ ಎಂ.ವಿ ವೆಂಕಟೇಶ, ನಿರ್ದೇಶಕರಾದ ಬಿ.ವೈ. ಶ್ರೀನಿವಾಸ, ಕೃಷಿ ಇಲಾಖೆಯ ಅಪರ ನಿರ್ದೇಶಕರಾದ ಎಂ.ಎನ್. ದಿವಾಕರ, ಡಾ| ವಿ.ಜಿ. ಪಾಟೀಲ, ಟಿ. ಜಿ ಬಾಲರೆಡ್ಡಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಉಪಸ್ಥಿತರಿದ್ದರು.