ದಾವಣಗೆರೆ: ದೇಶದ್ಯಾಂತ ನಿರಂತರವಾಗಿ ಮತೀಯ ಅಲ್ಪಸಂಖ್ಯಾತರ ಹತ್ಯೆ, ಹಲ್ಲೆ, ದೌರ್ಜನ್ಯ ನಡೆಯುತ್ತಿವೆ ಎಂದು ಆರೋಪಿಸಿ ಜಿಲ್ಲಾ ಜಾತ್ಯತೀತ ಜನತಾದಳದ ಕ್ರೈಸ್ತ ಅಲ್ಪಸಂಖ್ಯಾತ ವಿಭಾಗದ ಕಾರ್ಯಕರ್ತರು ಬುಧವಾರ ಶ್ರೀ ಜಯದೇವ ವೃತ್ತದಲ್ಲಿ ಶಾಂತಿ ಸೌಹಾರ್ದ ಪ್ರತಿಭಟನಾ ರ್ಯಾಲಿ ನಡೆಸಿದರು.
ದೇಶದ ವಿವಿಧ ರಾಜ್ಯದಲ್ಲಿ ಈಚೆಗೆ ಮೂಲಭೂತವಾದಿಗಳು ಮತೀಯ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರನ್ನು ಗುರಿಯಾಗಿಸಿ ಕೊಂಡು ನಿರಂತರವಾಗಿ ಹಲ್ಲೆ, ದೌರ್ಜನ್ಯ, ಕಿರುಕುಳ, ಮಾರಣ ಹೋಮ ನಡೆಸುತ್ತಿದ್ದಾರೆ. ಸಣ್ಣ ವಿಚಾರವನ್ನೇ ಮುಂದಿಟ್ಟುಕೊಂಡು ನಡೆಸಲಾಗುತ್ತಿರುವ ಹತ್ಯೆ, ದೌರ್ಜನ್ಯದಿಂದ ಮತೀಯ ಅಲ್ಪಸಂಖ್ಯಾತರು ನಲುಗಿ ಹೋಗುತ್ತಿದ್ದಾರೆ. ಮೂಲಭೂತವಾದಿಗಳ ನಡೆ ನಿಜಕ್ಕೂ ಅತ್ಯಂತ ಖಂಡನೀಯ. ರಾಷ್ಟ್ರಪತಿಯವರು ಮಧ್ಯ ಪ್ರವೇಶಿಸಿ, ಮತೀಯ ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲು ಪ್ರತಿಭಟನಾಕಾರರು ಮನವಿ ಮಾಡಿದರು.
ಕ್ರೈಸ್ತ ಅಲ್ಪಸಂಖ್ಯಾತರ ಹತ್ಯೆ ನಡೆಯುತ್ತಿರುವುದು ಕಳವಳ ಮತ್ತು ಆತಂಕಕಾರಿ ವಿಚಾರ. ಪಂಜಾಬ್‌ನ ಲೂಧಿಯಾನದಲ್ಲಿ ಈಚೆಗೆ ಪಾದ್ರಿ ಸುಲ್ತಾಬ್ ಮಸೀಹ ಅವರ ಹತ್ಯೆ ನಡೆಸಲಾಗಿದೆ. ಹುಬ್ಬಳ್ಳಿಯ ಫಾ| ಮೈಕಲ್ ಆಚಾರಿ ಮೇಲೆ ಹತ್ಯೆ ಯತ್ನ ನಡೆದಿದೆ. ಮೊಳಕಾಲ್ಮೂರು ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂಬ ಕಾರಣಕ್ಕೆ ಪಾದ್ರಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬೈಬಲ್ ಸುಟ್ಟು ಹಾಕಲಾಗಿದೆ. ಇಂತಹ ಹಲವಾರು ಘಟನೆ ನಡೆಯುತ್ತಲೇ ಇವೆ ಎಂದು ತಿಳಿಸಿದರು.
ರಾಜಕೀಯ ಪಕ್ಷದ ಕೆಲವು ಕೋಮುವಾದಿ ನಿಲುವು ಮತ್ತು ಮತೀಯ ಮೂಲಭೂತವಾದಿಗಳ ಕುಮ್ಮಕ್ಕಿನಿಂದ ನಡೆಯುತ್ತಿರುವ
ಹತ್ಯೆ, ದೌರ್ಜನ್ಯ ತಡೆಯಬೇಕು. ಸಾವು-ನೋವಿನ ಮನೆಯಲ್ಲೂ ರಾಜಕಾರಣ ನಿಲ್ಲಬೇಕು. ಕುಟುಂಬದ ಸದಸ್ಯರನ್ನು ಕಳೆದುಕೊಂಡವರಿಗೆ ನ್ಯಾಯ ಒದಗಿಸಬೇಕು ಎಂದರು.
ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಸ್ಟಿನ್ ಜಯಕುಮಾರ್, ಯುವ ಜನತಾದಳ ಜಿಲ್ಲಾ ಅಧ್ಯಕ್ಷ ಜೆ. ಅಮಾನುಲ್ಲಾಖಾನ್, ಮನ್ಸೂರ್ ಅಲಿ, ಕುಮಾರನಾಯ್ಕ, ದಾದಾಪೀರ್, ಗಣೇಶ್, ಟಿ. ಅಸರ್, ಸಿಗ್ಬತುಲ್ಲಾ, ಜಾಕೋಬ್, ಕರುಣಾಕರನ್ ಇದ್ದರು.