ತುಮಕೂರು: ಮುಂಗಾರು ಮಳೆಯಿಂದ ಪ್ರಾರಂಭವಾಗಲಿದೆ ಈ ವೇಳೆ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಪರಿಸ್ಥಿತಿಯನ್ನು ಎದುರಿಸಲು ಎಲ್ಲಾ ಇಲಾಖೆಗಳು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಯಾವುದೇ ಜೀವಹಾನಿ ಯಾಗದ ರೀತಿಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಮುಂಗಾರು-2023 ಪೂರ್ವಸಿದ್ದತೆ ಕುರಿತ ವೀಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಷ್ಟೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರಸಕ್ತ ಮುಂಗಾರು ಮಳೆ ಹಾಗೂ ಚಂಡಮಾರುತ ಪರಿಣಾಮಗಳನ್ನು ತಗ್ಗಿಸಲು ಕ್ಯೆಗೊಳ್ಳಬಹುದಾದ ಕ್ರಮಗಳ ಕುರಿತು ನೀಡಿರುವ ಸಲಹೆ ಸೂಚನೆಗಳ ರೀತ್ಯ ಮುನ್ನೆಚ್ಚರಿಕೆ ವಹಿಸಬೇಕು, ಈ ವರ್ಷ ಮುಂಗಾರು ಮುನ್ಸೂಚನೆ ಪ್ರಕಾರ ವಾಡಿಕೆ ಮಳೆ ಸಾಧ್ಯತೆಯಿದ್ದು, ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ ವಹಿಸುವಂತಹ ಅಧಿಕಾರಿಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕ್ರಮ ಜರುಗಿಸ ಲಾಗುವುದು ಎಂದರು.
ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿರುವುದರ ಕುರಿತು ಮತ್ತೂಮ್ಮೆ ಪರಿಶೀಲಿಸಿ ತುರ್ತುಕ್ರಮ ಕೈಗೊಳ್ಳಬೇಕು. ಮಳೆಗಾಲದಲ್ಲಿ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಕಂದಾಯ, ಅರಣ್ಯ, ಬೆಸ್ಕಾಂ, ಲೋಕೋಪಯೋಗಿ, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಗಳ ಮಧ್ಯೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು, ಮಳೆಯಿಂದ ಹಾನಿಯಾದಲ್ಲಿ ಕೂಡಲೇ ವರದಿ ನೀಡಿ ಸಂತ್ರಸ್ತರಿಗೆ ಮಾರ್ಗಸೂಚಿಯ ಅನುಸಾರ ಪರಿಹಾರ ವಿತರಿಸಲು ಕ್ರಮವಹಿಸುವಂತೆ ಎಲ್ಲಾ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ವರುಣ ಮಿತ್ರ ಉಚಿತ ಸಹಾಯವಾಣಿ: ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಸೆಲ್‌ನ ಹವಾಮಾನ ಮೇಲ್ವಿಚಾರಣಾ ಕೇಂದ್ರಗಳ ವಿಸ್ತಾರ ವಾದ ಜಾಲ, ರೈತರು ಹೋಬಳಿ ಮಟ್ಟದಲ್ಲಿ ದತ್ತಾಂಶವನ್ನು ಸಂಗ್ರಹಿಸಿ ಈ ಮಾಹಿತಿಯನ್ನು ಉಚಿತವಾಗಿ ನೀಡುತ್ತದೆ, 24/7 ಈ ಸಹಾಯವಾಣಿ ಲಭ್ಯವಿದೆ. ರೈತರು ಸಹಾಯವಾಣಿ: 9243345433 ಸಂಪರ್ಕಸಿ ಮಳೆ. ಹವಾಮಾನ, ಗಾಳಿಯ ವೇಗ ಎಷ್ಟಿದೆ? ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ? ಆಯಾ ಪ್ರದೇಶದ ಉಷ್ಣಾಂಶ ಎಷ್ಟಿದೆ? ಎಂಬ ಮಾಹಿತಿಗಳನ್ನು ರೈತರು ಪಡೆದುಕೊಳ್ಳಬಹುದಾಗಿದೆ. ಮೊಬೈಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಮಳೆ ಮಾಹಿತಿ ಕೊಡುವ ಹಲವು ಆ್ಯಪ್‌ಗ್ಳಿವೆ. ಒಮ್ಮೊಮ್ಮೆ ಇಂಟ ರ್ನೆಟ್ ಕೈ ಕೊಟ್ಟಿರುತ್ತದೆ. ಇಂತಹ ಯಾವುದೇ ಪರಿಸ್ಥಿತಿ ಯಲ್ಲಿ ವರುಣ ಮಿತ್ರ ಸಹಾಯವಾಣಿ ಕೈಹಿಡಿ ಯಲಿದ್ದು ಪ್ರತಿಯೊಬ್ಬ ರೈತರು ಕರ್ನಾಟಕ ಸರ್ಕಾರ ರೂಪಿಸಿರುವ ಉಚಿತ ಸಹಾಯವಾಣಿ ಸದೋಪ ಯೋಗ ಪಡೆಯಬೇಕೆಂದು ಡೀಸಿ ತಿಳಿಸಿದರು.
ಸಿಡಿಲು ಆ್ಯಪ್: ರಾಜ್ಯದಲ್ಲಿ ಪ್ರಾಕೃತಿಕ ವಿಕೋಪದ ವೇಳೆ ನೆರವಾಗುವ ಉದ್ದೇಶದಿಂದ ಸಿಡಿಲು ಆ್ಯಪ್ ಪರಿಚಯಿಸಲಾಗಿದ್ದು, ಈ ಆ್ಯಪ್ ಬಳಕೆದಾರ ಇರುವ ಜಾಗದಿಂದ ಎಷ್ಟು ಕಿ.ಮೀ. ಅಥವಾ ಮೀಟರ್ ದೂರದಲ್ಲಿ ಸಿಡಿಲು, ಗುಡುಗು ಕಂಡು ಬರುತ್ತಿದೆ ಎಂಬ ಅಪಾಯಗಳನ್ನು ಹಲವು ಬಣ್ಣಗಳಲ್ಲಿ ತಿಳಿಸುತ್ತದೆ. ಈ ಮೂನ್ಸೂಚನೆ ಅರಿತು ಪ್ರಕೃತಿ ವಿಕೋಪಗಳಿಂದ ಆಗುವ ನಷ್ಟವನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಿದೆ. ಸಿಡಿಲು ಬಡಿಯುವ ಸಾಧ್ಯತೆಯನ್ನು ಶೇ. 95 ನಿಖರವಾಗಿ ಈ ಆ್ಯಪ್ ತಿಳಿಸುತ್ತದೆ. ಡಿ.ಡಿ.ಎಲ್.ಆರ್ ಸುಜಯ್ ಕುಮಾರ್, ಕೃಷಿ ಇಲಾಖೆಯ ಜಂಟಿ ನಿದೇಶಕರಾದ ರವಿ ಕೆ.ಎಚ್, ತುಮಕೂರು ತಾಲೂಕು ತಹಶೀಲ್ದಾರ್ ಸಿದ್ದೇಶ್, ಚಿಕ್ಕನಾಯಕನಹಳ್ಳಿ ತಾಲೂಕು ತಹಶೀಲ್ದಾರ್ ಅರ್ಚನಾ, ತಹಶೀಲ್ದಾರ್ ಮೋಹನ್, ಸೇರಿದಂತೆ ಜಿಲ್ಲೆಯ ಉಪವಿಭಾಗಾಧಿಕಾರಿಗಳು, ಇಒಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿದ್ದರು.
ಕೆರೆಗಳ ಸಾಮರ್ಥ್ಯ ಪರಿಶೀಲಿಸಿ: ಜಿಪಂ, ತಾಪಂ ಪಿಆರ್‌ಇಡಿ ಸೇರಿದಂತೆ ಬಹಳಷ್ಟು ಕೆರೆಗಳಲ್ಲಿ ಸದ್ಯ ನೀರಿದೆ. ಮುಂದೆ ಮಳೆ ಬಂದಲ್ಲಿ ಶೀಘ್ರ ಭರ್ತಿಯಾಗುತ್ತವೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರು, ತಮ್ಮ ವ್ಯಾಪ್ತಿಗೆ ಬರುವ ಜಿಲ್ಲೆಯ ಕೆರೆಗಳ ಸಾಮರ್ಥ್ಯ ಪರಿಶೀಲನೆಗೆ ಸಮೀಕ್ಷೆ ಕೈಗೊಳ್ಳಬೇಕು. ಕೆರೆಗಳು ಒಡೆಯದಂತೆ, ಕೆರೆಗಳ ಬಂಡ್‌ಗಳನ್ನು ಬಲಪಡಿಸುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ತಗ್ಗು ಪ್ರದೇಶದ ಮನೆಗಳಿಗೆ ಎಚ್ಚರಿಕೆ ನೀಡಬೇಕು, ಯಾವುದೇ ದುರಸ್ತಿಯಿದ್ದಲ್ಲಿ ಪರಿಶೀಲಿಸಿ ದುರಸ್ತಿಗೆ ಅಗತ್ಯ ಕ್ರಮವಹಿಸಬೇಕು ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಮಾಹಿತಿ ನೀಡಿದರು.
ಎಚ್ಚರವಹಿಸಲು ಅಧಿಕಾರಿಗಳಿಗೆ ಸೂಚನೆ: ಜಿಲ್ಲೆಯಲ್ಲಿ ಈ ಹಿಂದಿನ ವರ್ಷಗಳಲ್ಲಿ ಉಂಟಾದ ಘಟನೆಗಳಿಗೆ ಅನುಗುಣವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಏನೇ ತೊಂದರೆ ಯಾದಲ್ಲಿ ಕೂಡಲೇ ಘಟನಾ ಸ್ಥಳಕ್ಕೆ ಹೋಗ ಬೇಕು. ಜೀವ, ಆಸ್ತಿ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ರಸ್ತೆ, ಸೇತುವೆಗಳು ಹಾನಿಯಾ ದಲ್ಲಿ, ಕೂಡಲೆ ರಸ್ತೆ ಸಂಪರ್ಕ ಪುನರ್‌ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು. ಅಗ್ನಿ ಶಾಮಕದಳ ತುರ್ತು ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಲು ಅಗತ್ಯ ಸುರಕ್ಷಾ ಉಪಕರಣಗಳೊಂದಿಗೆ ಸನ್ನದ್ದರಾಗಿರ ಬೇಕು ಹಾಗೂ ವಿದ್ಯುತ್ ವ್ಯತ್ಯಯ, ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಕಂಡು ಬಂದಲ್ಲಿ ಕೂಡಲೇ ಸರಿಪಡಿಸಿ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.