ಮುದ್ದೇಬಿಹಾಳ: ಕೋವಿಡ್ ಸೋಂಕಿನ ನಡುವೆಯೂ ಮಳೆಗಾಲದಲ್ಲಿ ಹೆಚ್ಚಾಗುವ ಸೊಳ್ಳೆಗಳ ಹಾವಳಿ ನಿಯಂತ್ರಿಸಲು ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವಿಜಯಪುರ ಜಿಲ್ಲಾ ಕೀಟಶಾಸ್ತ್ರಜ್ಞ ರಿಯಾಜ್ ದೇವರಳ್ಳಿ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಾಗತಿಕ ಸೊಳ್ಳೆ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚರಂಡಿ, ನದಿ, ಕೆರೆ, ಕಾಲುವೆ, ಹಳ್ಳಗಳಲ್ಲಿ ಸ್ಚಚ್ಛತೆ ಕಾಯ್ದುಕೊಳ್ಳಬೇಕು. ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಕೈಗಾರಿಕಾ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತಿಪ್ಪೆ ಗುಂಡಿಗಳಲ್ಲಿ ನೀರು ನಿಲ್ಲಿಸುವುದು, ಘನ-ದ್ರವ ತ್ಯಾಜ್ಯ ಅವೈಜ್ಞಾನಿಕವಾಗಿ ನಿರ್ವಹಣೆ ಮಾಡುವುದು ಮುಂತಾದವುಗಳಿಂದ ಸೊಳ್ಳೆಗಳ ಸಂಖ್ಯೆ ವೃದ್ಧಿಸುತ್ತದೆ. ತೆಂಗಿನಚಿಪ್ಪು, ಹೂದಾನಿ, ಟೈರ್, ಖಾಲಿ ಡಬ್ಬ, ಕ್ಯಾನ್, ಅಕ್ವೇರಿಯಂ, ಏರ್ ಕಂಡಿಷನರ್, ಏರ್ ಕೂಲರ್ ಇತ್ಯಾದಿಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಣಿ ಡಾ| ಜೇಬುನ್ನಿಸಾ ಬೀಳಗಿ ಮಾತನಾಡಿ, ಲಂಡನ್‌ನ ಸ್ಕೂಲ್ ಆಫ್ ಹೈಜಿನ್ ಆ್ಯಂಡ್ ಟ್ರಾಫಿಕಲ್ ಮೆಡಿಸನ್ ಸಂಸ್ಥೆ ಈ ದಿನ ಆಚರಿಸುತ್ತದೆ. ಸೊಳ್ಳೆಯಿಂದ ಹರಡುವಂತಹ ಮಲೇರಿಯಾ ಮತ್ತು ಇತರ ಪ್ರಾಣಾಂತಿಕ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದೇ ಸೊಳ್ಳೆ ದಿನದ ಉದ್ದೇಶ ಎಂದರು. ತಾಲೂಕು ಆರೋಗ್ಯಾ ಧಿಕಾರಿ ಡಾ| ಸತೀಶ ತಿವಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ಆರೋಗ್ಯ ಇಲಾಖೆ ಆದ್ಯ ಕರ್ತವ್ಯ ಎಂದರು.
ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಯಲ್ಲಪ್ಪ ಛಲವಾದಿ, ಐ.ಸಿ. ಮಾನಕರ, ಎಸ್.ಸಿ. ರುದ್ರವಾಡಿ, ವೀರೇಶ ಎಸ್.ಬಿ., ಮಧು ಟಕ್ಕಳಕಿ, ಎನ್.ಎಚ್. ಬೋರಗಿ, ಶಿವಾನಂದ ಬೊಮ್ಮನಹಳ್ಳಿ, ಆನಂದ ಬಾಗೇವಾಡಿ, ಮುದ್ದೇಬಿಹಾಳ-ತಾಳಿಕೋಟೆಭಾಗದ ಆಶಾಗಳು ಪಾಲ್ಗೊಂಡಿದ್ದರು.ಆರೋಗ್ಯ ಸಹಾಯಕ ಎಂ.ಎಸ್. ಗೌಡರ ನಿರೂಪಿಸಿದರು.
ಪರಿಸರ, ನೀರು ಮತ್ತು ಗಾಳಿ ಕಲುಷಿತಗೊಳ್ಳದ ರೀತಿಯಲ್ಲಿ ಬದುಕಬೇಕು. ನಿಂತ ನೀರು ಸೊಳ್ಳೆಗಳಿಗೆ ಸ್ವರ್ಗವಿದ್ದಂತೆ. ಸೊಳ್ಳೆ ಮರಿ ತಿನ್ನುವ ಗಪ್ಪಿ ಮೀನುಗಳನ್ನು ಬೆಳೆಸಿ ಸೊಳ್ಳೆಗಳ ನಿಯಂತ್ರಣ ಮಾಡಬೇಕು. ಕೀಟನಾಶಕ, ಸೊಳ್ಳೆ ನಿಯಂತ್ರಣ ಔಷ ಧಗಳ ಬಳಕೆ ಮಹತ್ವ ಅರಿತುಕೊಳ್ಳಬೇಕು. –
ರಿಯಾಜ್ ದೇವರಳ್ಳಿ,ವಿಜಯಪುರ ಜಿಲ್ಲಾ ಕೀಟಶಾಸ್ತ್ರಜ್ಞ