ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಕಾಂಗ್ರೆಸ್‌ನ ಪ್ರಭಾವಿ ಶಾಸಕ ಹ್ಯಾರಿಸ್ ಅವರ ಪುತ್ರ ಮಹಮದ್ ನಲಪಾಡ್ ಹತ್ತು ಮಂದಿಯ ಗ್ಯಾಂಗ್ ನಡೆಸಿದ ಪುಂಡಾಟಿಕೆ ರಾಜಕಾರಣಿಗಳ ಮತ್ತು ಶ್ರೀಮಂತರ ದಾರಿ ತಪ್ಪಿದ ಮಕ್ಕಳ ಅಹಂಕಾರದ ಪರಮಾವಧಿಗೊಂದು ಉತ್ತಮ ಉದಾಹರಣೆ. ಹೊಟೇ ಲೊಂದರಲ್ಲಿ ಟೇಬಲಿಗೆ ಕಾಲು ತಾಗಿತು ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ವತ್ ಎಂಬ ಯುವಕನ ಮೇಲೆ ನಲಪಾಡ್ ಮತ್ತು ಆತನ ಜತೆಗಿದ್ದವರು ಬರ್ಬರವಾಗಿ ಹಲ್ಲೆ ಮಾಡಿದ್ದಾರೆ. ಅನಂತರ ವಿದ್ವತ್‌ನನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿಗೂ ಹೋಗಿ ಹಲ್ಲೆ ಮಾಡಿದ್ದಲ್ಲದೆ ಉಳಿದ ವರಿಗೆ ಬೆದರಿಕೆಯೊಡ್ಡಿದ್ದಾರೆ. ನಲಪಾಡ್‌ನ ಈ ಅಹಂಕಾರದ ಹಿಂದೆ ಇರುವುದು ತಾನು ಏನು ಮಾಡಿದರೂ ನಡೆಯುತ್ತದೆ ಮತ್ತು ರಾಜಕೀಯ ಪ್ರಭಾವ ಬಳಸಿ ಪಾರಾಗಿ ಬರುತ್ತೇನೆ ಎಂಬ ಭಂಡ ಧೈರ್ಯ.
ಸಾಮಾನ್ಯವಾಗಿ ರಾಜಕಾರಣಿಗಳ ಅಥವಾ ಶ್ರೀಮಂತರ ಮಕ್ಕಳ ಇಂತಹ ಪುಂಡಾಟಿಕೆಯ ಪ್ರಕರಣಗಳು ಮುಚ್ಚಿ ಹೋಗುವುದೇ ಹೆಚ್ಚು. ರಾಜಕಾರಣಿ ಆಡಳಿತ ಪಕ್ಷದವನಾಗಿದ್ದರೆ ವಿಧಾನಸಭೆಯಿಂದಲೇ ಪೊಲೀಸರಿಗೆ ಫೋನು ಕರೆಗಳು ಬರತೊಡಗುತ್ತದೆ. ಕಡೆಗೆ ಪೊಲೀಸರು ಕಾಟಾಚಾರಕ್ಕೆ ಆರೋಪಿಗಳನ್ನು ಬಂಧಿಸಿದ ನಾಟಕವಾಡಿ ದುರ್ಬಲ ಸೆಕ್ಷನ್‌ಗಳಡಿ ಕೇಸ್ ದಾಖಲಿಸಿಕೊಂಡು ಸುಲಭವಾಗಿ ಜಾಮೀನು ಸಿಗುವಂತೆ ಮಾಡುತ್ತಾರೆ.
ಪೊಲೀಸರು ದಾಖಲಿಸುವ ಎಫ್ಐಆರ್ ಎಷ್ಟು ದುರ್ಬಲವಾಗಿರುತ್ತದೆ ಎಂದರೆ ಕೋರ್ಟಿನಲ್ಲೂ ಇಂತಹ ಕೇಸುಗಳು ನಿಲ್ಲುವುದಿಲ್ಲ. ಒಂದು ವೇಳೆ ಕರ್ನಾಟಕದಲ್ಲಿ ಈಗ ಚುನಾವಣೆ ಸಮಯ ಅಲ್ಲದಿರು ತ್ತಿದ್ದರೆ ನಾಲಪಾಡ್ ಪ್ರಕರಣಕ್ಕೂ ಇದೇ ಗತಿಯಾಗುತ್ತಿತ್ತು. ಸದ್ಯದಲ್ಲೇ ಚುನಾವಣೆ ಘೋಷಣೆಯಾಗಲಿರುವುದರಿಂದ ಸರಕಾರ ಕಠಿಣ ಕ್ರಮ ಕೈಗೊಳ್ಳಲು ಹೇಳಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಮುಖಂಡರೆಲ್ಲ ಕಾನೂನು ಎಲ್ಲರಿಗೂ ಸಮಾನ, ಆರೋಪಿ ಯಾರೇ ಆಗಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ. ಬೆಂಗಳೂರು ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ನಾಲಪಾಡ್‌ರನ್ನು ಈ ಹುದ್ದೆಯಿಂದ ಮತ್ತು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸ ಲಾಗಿದೆ. ಬೇರೆ ಸಮಯದಲ್ಲಿ ಅವರಿಂದ ಇಷ್ಟು ಕ್ಷಿಪ್ರವಾಗಿ ಇಂತಹ ಪ್ರತಿಕ್ರಿಯೆಯನ್ನು ನಿರೀಕ್ಷಿಸುವುದು ಸಾಧ್ಯವಿತ್ತೇ? ಕಳೆದ ವರ್ಷ ಆಗಸ್ಟ್‌ನಲ್ಲಿ ಹರ್ಯಾಣದಲ್ಲೂ ಇದೇ ಮಾದರಿಯ ಪ್ರಕರಣ ಸಂಭವಿಸಿತ್ತು. ರಾಜ್ಯದ ಬಿಜೆಪಿ ಅಧ್ಯಕ್ಷ ಸುಭಾಶ್ ಬರಾಲ ಅವರ ಪುತ್ರ ವಿಕಾಸ್ ಬರಾಲ ರಾತ್ರಿ ಕೆಲಸದಿಂದ ಹಿಂದಿರುಗುತ್ತಿದ್ದ ಯುವತಿ ಯನ್ನು ಹಿಂಬಾಲಿಸಿ ಕಿರುಕುಳ ನೀಡಿದ ಘಟನೆ ದೇಶಾದ್ಯಂತ ಕಿಡಿಯೆಬ್ಬಿಸಿ ಬಿಜೆಪಿಗೆ ತೀವ್ರ ಮುಜುಗರವುಂಟು ಮಾಡಿತ್ತು. ಇಲ್ಲೂ ಆರಂಭ ದಲ್ಲಿ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿ ದರೂ ಅನಂತರ ಪ್ರತಿಭಟನೆಗೆ ಮಣಿದು ಎರಡನೇ ಸಲ ಆರೋಪಿ
ಗಳನ್ನು ಬಂಧಿಸಿದರು. ವಿಪರ್ಯಾಸವೆಂದರೆ ಆಗ ಬಿಜೆಪಿಯನ್ನು ಗುರಿ ಮಾಡಿಕೊಂಡು ಆಕಾಶ ಪಾತಾಳ ಒಂದು ಮಾಡಿದ ಕಾಂಗ್ರೆಸ್ ಪಕ್ಷ ಇಂದು ಅದೇ ರೀತಿಯ ಪ್ರತಿಭಟನೆಯನ್ನು ಎದುರಿಸುತ್ತಿದೆ. ಚುನಾವಣೆ ಸಮಯ ವಾಗಿರುವುದರಿಂದ ಬಿಜೆಪಿ ಮತ್ತು ಆಪ್ ಪಕ್ಷಗಳು ಬೆಂಗಳೂರಿನಲ್ಲಿ ಬೆಳಗ್ಗಿನಿಂದಲೇ ತೀವ್ರ ಪ್ರತಿಭಟನೆ ನಡೆಸುತ್ತಿವೆ.
ಒಂದು ಪ್ರಕರಣದಲ್ಲಿ ಸ್ವತಹ ಗುಜರಾತ್ ಹೈಕೋರ್ಟ್ ಈ ದೇಶದಲ್ಲಿ ರಾಜಕಾರಣಿಗಳ ವಿರುದ್ಧ ಕೇಸ್ ದಾಖಲಿಸಿ ಗೆಲ್ಲುವುದು ಸುಲಭವಲ್ಲ ಎಂದಿರುವುದು ಗಮನಾರ್ಹ ವಿಚಾರ. ಆರೋಪಿ ರಾಜಕಾರಣಿಯಾ
ಗಿದ್ದರೆ ಅವನ ವಿರುದ್ಧ ಆಡಳಿತ ಯಂತ್ರ ಚಲಿಸುವಂತೆ ಮಾಡುವುದೇ ದೊಡ್ಡ ಸಾಹಸ. ಇಂತಹ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾದ ಕೂಡಲೇ ಆರೋಪಿಗಳ ಕಡೆಯವರು ಸಂತ್ರಸ್ತನ ಮನೆ ಬಾಗಿಲಿಗೆ ಸಂಧಾನಕ್ಕಾಗಿ ಹೋಗುತ್ತಾರೆ.
ವಿವಿಧ ಆಮಿಷಗಳನ್ನೊಡ್ಡಿ ಸಂತ್ರಸ್ತನನ್ನು ಸಂಧಾನಕ್ಕೊಪ್ಪಿಸ ಲಾಗುತ್ತದೆ. ಒಂದು ವೇಳೆ ಒಪ್ಪದಿದ್ದರೆ ಬೆದರಿಕೆ ಒಡ್ಡಿಯಾದರೂ ಒಪ್ಪಿಸುತ್ತಾರೆ. ಅನಂತರ ಸಂತ್ರಸ್ತ ಕೋರ್ಟಿಗೆ ಬಂದು ಎಫ್ಐಆರ್ ರದ್ದುಪಡಿಸಲು ನ್ಯಾಯಾಲ ಯವನ್ನು ವಿನಂತಿಸುತ್ತಾನೆ ಎಂದು ತೀರ್ಪು ನೀಡಿದ ನ್ಯಾ| ಜೆ. ಬಿ. ಪರ್ಡಿವಾಲಾ ಹೇಳಿದ್ದರು. ಇದು ದೇಶದ ಕಾನೂನು ಮತ್ತು ವ್ಯವಸ್ಥೆ ಪಾಲನೆಗೆ ಕೈಗನ್ನಡಿ ಹಿಡಿಯುವಂತಹ ಮಾತು. ಕಾನೂನು ಎಲ್ಲರಿಗೂ ಸಮಾನ ಎನ್ನುವುದು ಬರೀ ಕಾನೂನು ಪುಸ್ತಕದಲ್ಲಿರುವ ವಾಕ್ಯವಷ್ಟೇ. ರಾಜಕಾರಣಿಗಳು ಮತ್ತು ಶ್ರೀಮಂತರು ಕಾನೂನಿನ ಎದುರು ಹೆಚ್ಚು ಸಮಾನರು ಎನ್ನಲು ಧಾರಾಳ ಉದಾಹರಣೆಗಳು ಸಿಗುತ್ತವೆ. ಈ ಹಿನ್ನೆಲೆಯಲ್ಲಿ ಹ್ಯಾರಿಸ್ ಪುತ್ರ ನಾಲಪಾಡ್ ಪ್ರಕರಣವೂ ಇದೇ ಹಾದಿ ಹಿಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಇಷ್ಟಕ್ಕೂ ಚುನಾವಣೆ ಮುಗಿದ ಮೇಲೆ ಯಾರಿಗಾದರೂ ಈ ಪ್ರಕರಣದ ನೆನಪು ಉಳಿದಿದ್ದರೆ ಅದೇ ಹೆಚ್ಚು.