Advertisement
ನಗರದ ನಗರಸಭೆ ಸಭಾಭವನದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ಕರವಸೂಲಿ ವಿಷಯ ಚರ್ಚೆಗೆ ಗ್ರಾಸವಾಯಿತು. ನಗರಸಭೆ ಸದಸ್ಯ ಡಾ| ಸತೀಶ ಮಲಘಾಣ ನಗರದಲ್ಲಿ ನೀರಿನ ಕರ ವಸೂಲಿ ಯಾವ ಮಟ್ಟದ ಸಂಗ್ರಹ ಮಾಡಲಾಗುತ್ತಿದೆ ಎಂದು ಪ್ರಶ್ನಿದರು, ಅವರ ಮಾತಿಗೆ ಉತ್ತರ ಉತ್ತರಿಸಿದ ಅಧಿಕಾರಿಗಳು ಶೇ. 15 ಕರ ವಸೂಲಿಯಾಗುತ್ತಿದೆ ಎಂದರು. ಈ ವೇಳೆ ಒಕ್ಕೊರಲಿನಿಂದ ಧ್ವನಿಗೂಡಿಸಿದ ಸದಸ್ಯರು, ನಗರದಲ್ಲಿನ ಅಕ್ರಮ ನಳ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಸಿ ಅವುಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ನೀರಿನ ಕರ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಬೇಕು ಎಂದರು. ಸದಸ್ಯರ ಮಾತಿಗೆ ಉತ್ತರಿಸಿದ ನಗರಸಭೆ ಆಯುಕ್ತ ಶಿವಪ್ಪ ಅಂಬಿಗೇರ ನಾನು ಅಧಿಕಾರಕ್ಕೆ ಬರುವ ಮುನ್ನ ನೀರಿನ ಕರ ಸಂಗ್ರಹ ಶೇ. 4ರಷ್ಟಿತ್ತು ನಾನು ನೋಟಿಸ್ ನೀಡಿ ಹಲವು ಕ್ರಮ ಕೈಗೊಂಡ ಮೇಲೆ 15ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಕರ ಸಂಗ್ರಹಕ್ಕೆ ಮುಂದಾಗುವುದಾಗಿ ತಿಳಿಸಿದರು. ನಗರದಲ್ಲಿನ ಮನೆ, ವಾಣಿಜ್ಯ, ಕೈಗಾರಿಕೆ ತೆರಿಗೆಯನ್ನೂ ಸಹ ಹೆಚ್ಚಿನ ಪ್ರಮಾಣದಲ್ಲಿ ವಸೂಲಿ ಮಾಡುವಂತೆ ತಿಳಿಸಿದರು.
Related Articles
Advertisement
ನಗರದ ಜನರ ಬೇಡಿಕೆಗೆ ತಕ್ಕಂತೆ ನಮ್ಮಲ್ಲಿ ಸೇಫ್ಟಿಕ್ ಟ್ಯಾಂಕ್‌ಗಳು ಇಲ್ಲ ಬೇರೆ ಕಡೆಯಿಂದ ಆಗಮಿಸಿ ಸೇಫ್ಟಿಕ್ ಟ್ಯಾಂಕರ್‌ಗಳು ಬಂದು ನಗರದ ಜನತೆಗೆ ಸೇವೆ ಸಲ್ಲಿಸುತ್ತಿವೆ. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಸದಸ್ಯರು ಒಕ್ಕರಲಿನಿಂದ ಒತ್ತಾಯಿಸಿದರು.
ನಗರಸಭೆ ಸದಸ್ಯೆ ಅಂಬಿ ಮಾತನಾಡಿ, ಎಸ್‌ಸಿಪಿ-ಟಿಎಸ್‌ಪಿ ಅನುದಾನದಲ್ಲಿ ಎಸ್‌ಸಿ- ಎಸ್‌ಟಿ ವಿದ್ಯಾರ್ಥಿಗಳಿಗೆ ನೀಡುವ ಶಿಷ್ಟವೇತನದ ಬಗ್ಗೆ ನಮಗೆ ಸೂಕ್ತ ಮಾಹಿತಿ ನೀಡುತ್ತಿಲ್ಲ. ಇದರಿಂದ ನಮ್ಮ ವಾರ್ಡ್‌ನ ವಿದ್ಯಾರ್ಥಿಗಳು ಶಿಷ್ಯವೇತನದಿಂದ ವಂಚಿತವಾಗುವಂತಾಗಿದೆ. ಅಧಿಕಾರಿಗಳು ಎಲ್ಲ ಸದಸ್ಯರಿಗೂ ಸೂಕ್ತ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಸದಸ್ಯ ವಿನೋದ ಕಲಾಲ ಮಾತನಾಡಿ, ನಗರಸಭೆ ಕಚೇರಿಯಲ್ಲಿ ಗುತ್ತಿಗೆ ಆಧಾರದ ಅದರಲ್ಲೂ ಡಾಟಾ ಎಂಟ್ರಿ ಆಪರೇಟರ್‌ಗಳ ದುವರ್ತನೆ ಹೆಚ್ಚಾಗಿದೆ. ಅಧಿಕಾರಿಗಳು ಅದಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಅಂತವರನ್ನು ಬದಲಿಸಬೇಕು ಎಂದು ಆಕ್ರೋಶ ಹೊರಹಾಕಿದರು. ಡಾಟಾ ಎಂಟ್ರಿ ಆಪರೇಟರ್‌ಗಳು ಸದಸ್ಯರಿಗೆ ಸೂಕ್ತ ಮಾಹಿತಿ ನೀಡುವುದಿಲ್ಲ. ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸುವುದಿಲ್ಲ ಎಂದು ಆರೋಪಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಆಯುಕ್ತ ಗುತ್ತಿಗೆ ಆಧಾರದ ನೌಕರರಿಗೆ ಈ ಬಗ್ಗೆ ತಿಳಿ ಹೇಳಿ ಅವರ ವರ್ತನೆಯಲ್ಲಿ ತಿದ್ದಿಕೊಳ್ಳಲು ಸೂಚಿಸಲಾಗುವುದು ಎಂದು ಹೇಳಿದರು.
ಸದಸ್ಯರಾದ ಸುರೇಶ ಕಾಂಬಳೆ, ಸದಾಶಿವ ಜೋಶಿ, ಸಂತೋಷ ಪಾಲೋಜಿ, ಪಾರ್ವತಿ ಹರಗಿ, ಸ್ವಾತಿ ಕುಲಕರ್ಣಿ, ಲಕ್ಷ್ಮೀ ಮಾನೆ, ನಾಮನಿರ್ದೇಶಕ ಅನಿಲ ಚವಾಣ ಇತರರು ಇದ್ದರು.