ರಾಯಚೂರು: ಸೊಳ್ಳೆಗಳ ಹಾವಳಿ ಮಿತಿ ಮೀರುತ್ತಿದೆ. ಇದರಿಂದ ಡೆಂಘೀ, ಮಲೇರಿಯಾ ಹಾಗೂ ಮೆದುಳು ಜ್ವರಗಳಂಥ ಕಾಯಿಲೆಗಳು ಹರಡುತ್ತಿವೆ. ಹೀಗಾಗಿ ಸೊಳ್ಳೆಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಡೆಂಘೀ ವಿರೋಧಿ ಮಾಸಾಚರಣೆ ಕಾರ್ಯಕ್ರಮ
ಕುರಿತು ಜಿಲ್ಲಾ ಅಂತರ್ ಇಲಾಖೆ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನರಲ್ಲಿ ಜಾಗೃತಿ
ಮೂಡಿಸಲು ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಸ್ಟಿಕ್ಕರ್ ಅಂಟಿಸಬೇಕು. ಆನೆಹೊಸೂರು ಹಾಗೂ ಇತರ ಕಡೆಗಳಲ್ಲಿ ಈ ಹಿಂದೆ ಸೊಳ್ಳೆ ನಿಯಂತ್ರಣಕ್ಕೆ ಸೂಚಿಸಿದ್ದರೂ ಇನ್ನೂ ಫಲಿತಾಂಶ ಹಾಗೇ ಇದೆ. ಗ್ರಾಪಂ ಹಾಗೂ ತಾಲೂಕು ಆರೋಗ್ಯ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಿರಿ ಎಂದು ಪ್ರಶ್ನಿಸಿದರು.
ಡೆಂಘೀ ಜ್ವರದಿಂದ ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮೈ ಕೈ ನೋವು, ವಿಪರೀತ ಸುಸ್ತು, ಚರ್ಮದ ಮೇಲೆ ಗುಳ್ಳೆಗಳು, ವಸಡು ಮತ್ತು ಮೂಗಿನಿಂದ ರಕ್ತ ಸೋರುವಿಕೆ ಉಂಟಾಗುತ್ತದೆ. ಇಂಥ ಸೂಚನೆಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಸೂಕ್ತ ಎಂದರು.
ಮುಖ್ಯವಾಗಿ ಡೆಂಘೀ ರೋಗ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನಿಂತ ನೀರು ಸರಾಗವಾಗಿ ಹರಿಯುವಂತೆ
ಮಾಡಬೇಕು. ಮನೆಯಲ್ಲಿ ನೀರು ಸಂಗ್ರಹಣಾ ಸಾಮಗ್ರಿಗಳನ್ನು ಮುಚ್ಚಳದಿಂದ ಮುಚ್ಚಬೇಕು. ಡ್ರಮ್, ಬ್ಯಾರಲ್‌ಗಳನ್ನು ವಾರಕ್ಕೊಮ್ಮೆಯಾದರೂ ಕಡ್ಡಾಯವಾಗಿ ತಿಕ್ಕಿ ಸ್ವತ್ಛವಾಗಿಡಬೇಕು. ಹಗಲು ಮತ್ತು ರಾತ್ರಿ ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಬಳಸಬೇಕು. ಯಾವುದೇ ಜ್ವರ ಇದ್ದರೂ ತಕ್ಷಣ ಹತ್ತಿರದ ಸರ್ಕಾರ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳುವಂತೆ ಜನರಿಗೆ ಮಾಹಿತಿ ನೀಡಬೇಕು ಎಂದರು.
ಜಿಪಂ ಸಿಇಒ ನಲಿನ್ ಅತುಲ್, ಸಹಾಯಕ ವಿಭಾಗೀಯ ಆಯುಕ್ತ ಶಿಲ್ಪಾ ಶರ್ಮಾ, ಪ್ರೊಬೇಷರಿ ಐಎಎಸ್ ಅಧಿಕಾರಿ ನವೀನ್ ಭಟ್, ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ| ಅಶೋಕ ಕೊಳ್ಳಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಲಕ್ಷ್ಮೀಬಾಯಿ, ನಗರಸಭೆ ಪೌರಾಯುಕ್ತ ರಮೇಶ ನಾಯಕ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ವಿಜಯಾ ಕೆ., ಡಾ| ವಿಜಯ ಶಂಕರ, ಡಾ| ಮಹ್ಮದ್ ಶಕೀರ್ ಸಭೆಯಲ್ಲಿದ್ದರು.