ಹಾವೇರಿ: ಡೆಂಘೀ, ಮಲೇರಿಯಾ ಒಳಗೊಂಡಂತೆ ಸಾಂಕ್ರಾಮಿಕ ರೋಗಗಳ ತಡೆಗೆ ಸೊಳ್ಳೆಗಳ ನಿಯಂತ್ರಣ, ಗಟಾರಗಳ ಸ್ವಚ್ಛತೆ ಹಾಗೂ ನಿಯಮಿತವಾಗಿ ಧೂಮೀಕರಿಸುವ ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಾಂಕ್ರಾ ಮಿಕ ರೋಗಗಳ ತಡೆ ಹಾಗೂ ಡೆಂಘೀ, ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತಂತೆ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಮಳೆ ಆರಂಭಗೊಂಡಿರುವುದರಿಂದ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಳೆ ನೀರು ನಿಲ್ಲದಂತೆ ಕ್ರಮವಹಿಸಬೇಕು. ಕುಡಿಯುವ ನೀರಿನ ಮೂಲಗಳ ಸುತ್ತಲೂ ಕಲುಷಿತ ನೀರು ಸೊಳ್ಳೆಗಳ ಹರಡುವಿಕೆಯನ್ನು ತಡೆಯಬೇಕು. ಈ ನಿಟ್ಟಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಗ್ರಾಮೀಣ ಸಂಸ್ಥೆಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಯಮಿತವಾಗಿ ಫಾಗಿಂಗ್ ನಡೆಸಬೇಕು. ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆಯೊಂದಿಗೆ ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸೊಳ್ಳೆಗಳ ಉತ್ಪತ್ತಿ ತಾಣಗಳಾದ ಕಲ್ಲು ಗಣಿಗಾರಿಕೆ ಸ್ಥಳಗಳು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಡಿಪೋಗಳಲ್ಲಿರುವ ಅನುಪಯುಕ್ತ ಟಯರ್ ದಾಸ್ತಾನುಗಳನ್ನು ಸೂಕ್ತವಾಗಿ ನಿರ್ವಹಿಸಬೇಕು. ಕೃಷಿ ಹೊಂಡ, ಮನೆಯಲ್ಲಿ ಬಳಸುವ ವಾಟರ್ ಏರ್‌ಕೂಲ್, ನೀರು ಸಂಗ್ರಹ ತೊಟ್ಟಿ ಸೇರಿದಂತೆ ಸೊಳ್ಳೆಗಳು ಸಂಗ್ರಹವಾಗುವ ಮತ್ತು ಸಂತಾನೋತ್ಪತ್ತಿ ಮಾಡುವ ಸ್ಥಳಗಳನ್ನು ಸರಿಯಾಗಿ ನಿರ್ವಹಿಸಬೇಕು. ಈ ಕುರಿತಂತೆ ಜಾಗೃತಿ ಮೂಡಿಸಬೇಕು. ಶಾಲಾ, ಕಾಲೇಜು ಮಕ್ಕಳು ಸೊಳ್ಳೆ ಕಡಿತರಿಂದ ದೂರ ಉಳಿಯಲು ಸುರಕ್ಷತೆ ಕ್ರಮಗಳನ್ನು ಅನುಸರಿಸುವಂತೆ ಜಾಗೃತಿ ಕೈಗೊಳ್ಳಬೇಕು. ಆರೋಗ್ಯ ಇಲಾಖೆಗಳು ನಿಯಮಿತವಾಗಿ ಲಾರ್ವಾ ಸಮಿತಿ ಸೊಳ್ಳೆ ಉತ್ಪತ್ತಿಗಳ ತಾಣಗಳ ನಿರ್ಮೂಲನೆಗೆ ಮೇಲ್ವಿಚಾರಣೆ, ಶಾಲಾ, ಕಾಲೇಜು, ಅಂಗನವಾಡಿಗಳಲ್ಲಿ ಆರೋಗ್ಯ ಶಿಕ್ಷಣ, ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಕ್ರಮವಹಿಸಲು ಸೂಚಿಸಿದರು. ಮೀನುಗಾರಿಕೆ ಇಲಾಖೆ, ಕೃಷಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಇಲಾಖೆ, ಭೂ ವಿಜ್ಞಾನ ಮತ್ತು ಗಣಿ ಇಲಾಖೆ, ಆರೋಗ್ಯ ಇಲಾಖೆ, ಪುರಸಭೆ, ನಗರಸಭೆ, ಗ್ರಾಮ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಆಡಳಿತ, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ರೋಗ ತಾಣಗಳ ನಿರ್ಮೂಲನೆಗೆ ಆದ್ಯ ಗಮನಹರಿಸಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಜೇಂದ್ರ ದೊಡ್ಡಮನಿ, ಜಿಲ್ಲಾ ರೋಗವಾಹಕ ಆಶ್ರಿತ ಅಧಿಕಾರಿ ಡಾ| ಸುಹೀಲ್ ಹರವಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಇದ್ದರು.