Advertisement

ದೇಶದ್ರೋಹಿಗಳ ಮೇಲೆ ಕ್ರಮ ಜರುಗಿಸಿ

07:16 AM Mar 02, 2019 | Team Udayavani |

ತುಮಕೂರು: ನಮ್ಮ ದೇಶದಲ್ಲಿಯೇ ಇದ್ದು, ಅನ್ನ, ಗಾಳಿ, ನೀರು ಕುಡಿದು ದೇಶದ್ರೋಹದ ಕೆಲಸ ಮಾಡುವವರನ್ನು ಗುರುತಿಸಿ ಅಂಥವರ ಮೇಲೆ ಕೇಂದ್ರ, ರಾಜ್ಯ ಸರ್ಕಾರಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಕೆಲ ಮುಸ್ಲಿಂ ಸಂಘಟನೆಗಳ ಹೆಸರು ಹೇಳಿಕೊಂಡು ದೇಶ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಎಸ್‌.ಶಿವಣ್ಣ ಒತ್ತಾಯಿಸಿದರು.

Advertisement

ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಒಳಗಿರುವ ದೇಶದ್ರೋಹಿಗಳ ಬಗ್ಗೆ ಹೆಚ್ಚು ನಿಗಾವಹಿಸುವುದು ಅಗತ್ಯವಾಗಿದೆ. ದೇಶದಲ್ಲಿರುವ ಅನೇಕ ಮುಸಲ್ಮಾನರಲ್ಲಿ ಒಳ್ಳೆಯ ವ್ಯಕ್ತಿಗಳು, ದೇಶ ಪ್ರೇಮಿಗಳೂ ಇದ್ದಾರೆ. ಅದೇ ರೀತಿಯಲ್ಲಿ ನಮ್ಮೊಳಗೆ ಇದ್ದುಕೊಂಡೇ ನಮಗೆ ವಂಚನೆ ಮಾಡುವ ಅನೇಕರಿದ್ದಾರೆ. ಅಂಥವರ ಮೇಲೆ ನಿಗಾ ಇಡಬೇಕು ಎಂದರು.

ರದ್ದು ಮಾಡಿ: ಮುಸ್ಲಿಂ ಸಂಘಟನೆಗಳಾದ ಸೋಷಿಯಲ್‌ ಡೆಮಾಕ್ರಿಟಿಕ್‌ ಪಾರ್ಟಿ ಆಫ್ ಇಂಡಿಯಾ, ಪಿಎಫ್ಐ ಮತ್ತು ಮದರಸಾಗಳನ್ನು ರದ್ದು ಮಾಡಬೇಕು. ಇವುಗಳು ಬ್ಯಾನ್‌ ಆದರೆ ಮುಂದೆ ಇನ್ನೊಂದು ಸಂಘಟನೆ ಇರಲಿ ಎಂದು ಮುಸ್ಲಿಂ ಸ್ಟೂಡೆಂಟ್‌ ಆರ್ಗನೈಜೇಶನ್‌ ಮಾಡಿಕೊಂಡು ಮುಸ್ಲಿಂ ಯುವಕರನ್ನು ಸಂಘಟಿಸಿ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ತಯಾರು ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

ಭಯೋತ್ಪಾದಕತೆ ವಾತಾವರಣ: ಶಿರಾ ನಗರದಲ್ಲಿ ಕೆಲವರು ಗೋಡೆಗಳ ಮೇಲೆ ವಾಲ್‌ಪೋಸ್ಟ್‌ ಹಾಕಿ ಬಾಬರಿ ಮಸಿದಿ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ ಎನ್ನುವ ಭಿತ್ತಿ ಪತ್ರಗಳನ್ನು ಹಾಕಿದ್ದಾರೆ. ಇದನ್ನು ನೋಡಿದರೆ ನಮ್ಮ ಜಿಲ್ಲೆಯಲ್ಲಿಯೂ ಈ ಭಯೋತ್ಪಾದಕತೆ ವಾತಾವರಣ ಇದೆ ಎಂದರು.

ಬಡವರಿಗೆ ಆಮಿಷ: ಹುಬ್ಬಳ್ಳಿಯಲ್ಲಿ ನಾಲ್ಕು ಜನ ಪಾಕಿಸ್ತಾನದ ಪರವಾಗಿ, ಉಗ್ರವಾದಿಗಳ ಪರವಾಗಿ ಘೋಷಣೆ ಹಾಕಿದ್ದರು. ಇವರಲ್ಲಿ ಶಿರಾದ ಶೇಖ್‌ ಮನ್ಸೂರ್‌ ಇದ್ದ. ಇವನು ಮದುವೆಯಾಗಿರುವುದು ಶಿರಾದಲ್ಲಿ. ಈತ ದೆಹಲಿ ಪಿಎಫ್ಐನಿಂದ ನಂಟು ಹೊಂದಿದ್ದಾನೆ. ಇದಲ್ಲದೇ ಶಿರಾದ ಜುನೇದ್‌ ಖಾನ್‌ ಇವನು ಹಿಂದೂ ಹುಡುಗಿಯನ್ನು ಮದುವೆಯಾಗಿ ಗೌರಿಬಿದನೂರಿನ ಆಲಿಪುರದಲ್ಲಿ ವಾಸವಾಗಿದ್ದಾನೆ.

Advertisement

ಇವನೊಂದಿಗೆ 16 ವರ್ಷದ ಯುವಕ ಸೇರಿಕೊಂಡು ಫೆ.20ರಂದು ಆಲಿಪುರದಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿ ಜೈಕಾರ ಹಾಕಿದ್ದಾನೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ತುಮಕೂರಿನಲ್ಲಿ ಎಸ್‌ಬಿಪಿಐ ಮುಖಂಡ ಮೆಹಬೂಬ್‌ ಪಾಷಾ, ಶಿರಾದಲ್ಲಿ ಸಲಾವುದ್ದಿನ್‌ ಬಡವರಿಗೆ ಆಸೆ ಆಮಿಷ ತೋರಿ ತಮ್ಮತ್ತ ಸೆಳೆಯುತ್ತಿದ್ದಾರೆ ಎಂದರು.

ಪೊಲೀಸರು ಮೌನ: ಶಿರಾ ಪೊಲೀಸರಿಗೆ ಇದೆಲ್ಲವೂ ಗೊತ್ತಿದೆ. ನಮಗೇಕೆ ಬೇಕು ಎಂದು ಮೌನವಾಗಿದ್ದಾರೆ. ದೇಶದಲ್ಲಿರುವ ದೇಶದ್ರೋಹಿಗಳ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಇಂಥ ದೇಶ ದ್ರೋಹಿಗಳನ್ನು ಪತ್ತೆಹಚ್ಚಿ ಹಿಡಿಯಲು ದೆಹಲಿಯಿಂದಲೇ ಬರಬೇಕಾದ ಸ್ಥಿತಿ ನಮ್ಮಲ್ಲಿದೆ. ಸ್ಥಳೀಯ ಪೊಲೀಸರು ಎಲ್ಲವನ್ನು ತಿಳಿದಿದ್ದು ಮೌನವಾಗಿದ್ದಾರೆ ಎಂದು ನುಡಿದರು.

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಟಿಪ್ಪು ಸುಲ್ತಾನ್‌ ಹೆಸರನ್ನು ಪ್ರಸ್ತಾಪ ಮಾಡುತ್ತಾರೆ ಎಂದರೆ ಅವರಿಗೆ ಈ ಹೆಸರು ಕೊಟ್ಟವರು ಯಾರು, ಈ ವೇಳೆ ಈ ಬಳಕೆ ಬೇಕಿತ್ತೆ. ಈ ಎಲ್ಲವನ್ನು ನೋಡಿದರೆ ನಮ್ಮಲ್ಲಿಯೇ ಮೀರ್‌ ಸಾದಿಕ್‌ಗಳಿದ್ದಾರೆ. ಆದ್ದರಿಂದ ಜಾಗೃತ ವಹಿಸಬೇಕಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಜಯಸಿಂಹರಾವ್‌, ಶಾಂತರಾಜು, ಮಂಜುನಾಥ, ಜಿ.ಕೆ. ಬಸವರಾಜ್‌, ರಮೇಶ್‌, ನಂಜುಂಡಯ್ಯ, ಎನ್‌.ಗಣೇಶ್‌, ಕೆ.ಪಿ.ಮಹೇಶ್‌ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next