ಕೆ.ಆರ್.ನಗರ: ಸರ್ಕಾರದ ಆಶ್ರಯ ಗ್ರಾಮ ಯೋಜನೆಯನ್ನು ಸಿದ್ದಾಪುರ ಗ್ರಾಮದ ಪತಿ ಮತ್ತು ಪತ್ನಿ ಇಬ್ಬರೂ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಇಬ್ಬರೂ ಒಂದೇ ಮನೆಗೆ ಗ್ರಾಮ ಪಂಚಾಯಿತಿ ಹಾಗೂ ತೋಟಗಾರಿಕೆ ಇಲಾಖೆ ಎರಡರಲ್ಲೂ ಅನುದಾನ ಪಡೆದುಕೊಂಡಿದ್ದಾರೆ. ಇದು ಸರ್ಕಾರಕ್ಕೆ ಮಾಡಿದ ಮೋಸ. ಅನುದಾನ ವಾಪಸ್ ಪಡೆದುಕೊಳ್ಳಬೇಕು ಎಂದು ಕೆಸ್ತೂರು ತಾಪಂ ಸದಸ್ಯ ಕೆ.ಎಲ್.ಲೋಕೇಶ್ ಆರೋಪಿಸಿದರು.
ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಅಧ್ಯಕ್ಷೆ ಮಲ್ಲಿಕಾ ರವಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಲೋಕೇಶ್ ಮಾತನಾಡಿ, ಗ್ರಾಪಂ ಪಿಡಿಒ ನಿರ್ಲಕ್ಷ್ಯದಿಂದ ಈ ಅಕ್ರಮ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಂಡು ಹಣ ಸರ್ಕಾರದ ಖಾತೆಗೆ ಜಮಾ ಮಾಡಿಸಬೇಕು ಎಂದು ಒತ್ತಾಯಿಸಿದರು.
ಸಿದ್ಧಾಪುರ ಗ್ರಾಮದ ಗೌರಮ್ಮ ಗ್ರಾಪಂನಿಂದ ಮತ್ತು ಅವರ ಪತಿ ಬಾಲಕೃಷ್ಣ ತೋಟಗಾರಿಕೆ ಇಲಾಖೆಯಿಂದ ಮನೆ ಮಂಜೂರಾಗಿದೆ. ಒಂದೇ ಮನೆಗೆ ಎರಡು ಇಲಾಖೆಯಲ್ಲಿ ಬಿಲ್ ಮಾಡಿರುವ ಬಗ್ಗೆ ದಾಖಲೆ ಪ್ರದರ್ಶಿಸಿ, ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸದಸ್ಯರು ಪಿಡಿಒ ಅವರನ್ನು ಸಭೆಗೆ ಕರೆಯಿಸಿ ವಿವರಣೆ ಪಡೆಯಬೇಕು ಎಂದರು.
ಸದಸ್ಯ ಎಚ್.ಟಿ.ಮಂಜುನಾಥ್ ಮಾತನಾಡಿ, ತಾಲೂಕಿನಾದ್ಯಂತ ರಸಗೊಬ್ಬರಕ್ಕಾಗಿ ರೈತರು ಅಲೆದಾಡುತ್ತಿದ್ದಾರೆ. ಒಂದು ಮೂಟೆ ಯೂರಿಯಾ ಖರೀದಿ ಮಾಡಲು ಮಾರಾಟವಾಗದ, ಮತ್ತೂಂದು ಗೊಬ್ಬರದ ಮೂಟೆ ಖರೀದಿ ಮಾಡುವಂತೆ ಅಂಗಡಿ ಮಾಲಿಕರು ಷರತ್ತು ವಿಧಿಸಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆಯವರು ಅಂಗಡಿಗಳಿಗೆ ಭೇಟಿ ನೀಡಿ, ರೈತರಿಗೆ ಅನುಕೂಲ ಮಾಡಿಕೊಡಲು ಕ್ರಮ ವಹಿಸಿಲ್ಲ ಎಂದು ದೂರಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಮಹದೇವ್ ಕೃಷಿ ಮತ್ತು ತೋಟಗಾರಿಕೆ ಇಲಾಖೆಯವರು ರೈತರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು. ಯೂರಿಯಾ ವಿತರಣೆಗೆ ತೊಂದರೆಯಾಗದಂತೆ ಎಚ್ಚರ ವಹಿಸುವುದರ ಜತೆಗೆ ಬಾರಿ ಮಳೆಯಾಗುತ್ತಿರುವುದರಿಂದ ಭತ್ತದ ಬೆಳೆಗೆ ರೋಗ ತಗಲುವ ಸಾಧ್ಯತೆಗಳು ಹೆಚ್ಚಾಗಿವೆ. ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ತೆರಳಿ ರೈತರಿಗೆ ಸಲಹೆ ಸೂಚನೆ ನೀಡಬೇಕು ಎಂದು ಸೂಚಿಸಿದರು.
ಮುಂಡೂರು ಮತ್ತು ಮೂಲೆಪೆಟ್ಲು ಗ್ರಾಮದ ಬಳಿ ನಿಯಮ ಬಾಹಿರವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಎಂದು ಸದಸ್ಯರಾದ ಎಚ್.ಟಿ.ಮಂಜುನಾಥ್, ಕುಮಾರ್, ಶ್ರೀನಿವಾಸ ಪ್ರಸಾದ್ ಒತ್ತಾಯಿಸಿದರಲ್ಲದೆ, ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ನಿಯಮಬಾಹಿರವಾಗಿ ಗಣಿಗಾರಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಂಡು ಪರವಾನಗಿ ರದ್ದುಗೊಳಿಸಬೇಕು ಎಂದು ಹೇಳಿದರು.
ಸದಸ್ಯ ಚಂದ್ರಶೇಖರ್ ಮಾತನಾಡಿ, ಸಾಲಿಗ್ರಾಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಳ ಮತ್ತು ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು ವೈದ್ಯರು ಸೇರಿದಂತೆ ಅಗತ್ಯ ಸಿಬ್ಬಂದಿಗಳ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷೆ ಸಾಕಮ್ಮ ಸಣ್ಣಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಯೋಗೇಶ್, ಸದಸ್ಯ ಜಿ.ಎಸ್.ಮಂಜುನಾಥ್, ರತ್ನಮ್ಮ, ಮಮತಮಹೇಶ್, ಶೋಭಕುಮಾರ್, ಚಂದ್ರಶೇಖರ್, ನಾಗರಾಜು, ಕುಮಾರ್, ಶ್ರೀನಿವಾಸ ಪ್ರಸಾದ್, ಪುಟ್ಟಗೌರಮ್ಮ, ಸಿದ್ದಮ್ಮ ದೇವರಾಜು, ಇಒ ಎಚ್.ಡಿ.ಗಿರೀಶ್, ತಾಲೂಕು ಪಂಚಾಯ್ತಿ ಅನಿತಾ, ಕರಿಗೌಡ ಮತ್ತಿತರರು ಹಾಜರಿದ್ದರು.