ಕಲಘಟಗಿ: ಖಾಸಗಿ ಸಂಸ್ಥೆಯೊಂದರಿಂದ ನಡೆದಿದೆ ಎನ್ನಲಾದ ವಂಚನೆ ಪ್ರಕರಣ ಸಂಬಂಧ ಕಾರ್ಮಿಕ ಸಚಿವ ಸಂತೋಷ್ ಲಾಡ್, ಎಸ್ಪಿ ಧರ್ಮೇಂದ್ರಕುಮಾರ್ ಮೀನಾ ಹಾಗೂ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಸಾರ್ವಜನಿಕರೊಂದಿಗೆ ರವಿವಾರ ಸಮಾಲೋಚನೆ ನಡೆಸಿದರು.
ಸಚಿವ ಲಾಡ್ ಮಾತನಾಡಿ, ಕೋಟ್ಯಂತರ ರೂ. ವಂಚನೆ ಪ್ರಕರಣ ನಡೆದಿದೆ. ಅಹಿತಕರ ಘಟನೆಗಳಿಗೆ ಆಸ್ಪದ ನೀಡದೆ ಧೈರ್ಯ ತುಂಬಿಕೊಳ್ಳಬೇಕು. ಕಡು ಬಡವರು ಮೋಸ ಹೋಗಲು ಮಧ್ಯಸ್ಥಿಕೆಗಾರರ ಪ್ರೇರಣೆಯೇ ಕಾರಣವಾಗಿದ್ದು, ತಕ್ಷಣ ಅವರೆಲ್ಲರನ್ನು ಹುಡುಕಿ ಕಾನೂನು ಕ್ರಮ ಜರುಗಿಸಬೇಕೆಂದು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಇಂದೇ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತೇನೆ. ಖಾಸಗಿ ಸಂಸ್ಥೆಯವರು ತಕ್ಷಣ ಬಾರದಿದ್ದಲ್ಲಿ ನಾಪತ್ತೆಯಾದ ಎಲ್ಲರನ್ನೂ ಆದಷ್ಟು ಶೀಘ್ರ ಕಾನೂನಾತ್ಮಕವಾಗಿ ಕರೆ ತರಲು ಪ್ರಯತ್ನಿಸಲಾಗುವುದು. ಜನರು ಅಂಜಬೇಕಿಲ್ಲ ಎಂದರು.
ದೂರು ದಾಖಲು: ಎಸ್ಪಿ ಧರ್ಮೇಂದ್ರಕುಮಾರ್ ಮೀನಾ ಮಾತನಾಡಿ, ಇದೇ ರೀತಿಯ ವ್ಯವಹಾರವನ್ನು ಇನ್ನೂ ಯಾರಾದರೂ ಮಾಡುತ್ತಿರುವ ಕುರಿತು ದೂರು ಬಂದಲ್ಲಿ ತಕ್ಷಣ ಕಾನೂನು ಕ್ರಮ ಜರುಗಿಸಲಾಗುವುದು. ದೂರು ಬಾರದಿದ್ದರೂ ಇತರೆ ಇಲಾಖೆಗಳ ಮುಖಾಂತರ ಕ್ರಮ ಜರುಗಿಸಲಾಗುವುದು.
ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಶಂಭುಲಿಂಗ ಹಾನಗಲ್ ಮತ್ತು ಇನ್ನು ಕೆಲವರು ದೂರು ದಾಖಲಿಸಿದ್ದು, ಅದರಲ್ಲಿ 34 ಜನರು ಸಹಿಯನ್ನೂ ಮಾಡಿದ್ದಾರೆ. 1.26 ಕೋಟಿ ರೂ. ವಂಚನೆ ಕುರಿತು ದೂರಿನಲ್ಲಿ ಹೇಳಲಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಖಾಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಾದಿರಾಜ ಬೇಗೂರ, ರಾಮಚಂದ್ರ ಢವಳೆ, ಮಹೇಶ ಕಮ್ಮಾರ ಹಾಗೂ ಕಲಘಟಗಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಆಡಳಿತ ಮಂಡಳಿ ಉಪಾಧ್ಯಕ್ಷ ಶಂಭುಲಿಂಗ ಬಳಿಗಾರ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಆದರೆ, ಯಾರನ್ನೂ ಬಂಧಿ ಧಿಸಿಲ್ಲ. ಪ್ರಕರಣದ ತನಿಖೆಗೆ ಸಿಪಿಐ ಶ್ರೀನಿವಾಸ ಹಾಂಡ್ ನೇತೃತ್ವದಲ್ಲಿ ತಂಡ ರಚಿಸಿದ್ದು ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಮೇಲುಸ್ತುವಾರಿ ವಹಿಸಲಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಅವರ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಲಾಗುವುದು ಎಂದರು. ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಮಾತನಾಡಿ, ವಿದ್ಯಾವಂತರೂ ಇದರಲ್ಲಿ ಭಾಗಿಯಾಗಿದ್ದಾರೆ.
ದೇಶಾದ್ಯಂತ ಪ್ರತಿನಿತ್ಯ ಇಂತಹ ಘಟನೆಗಳು ನಡೆಯುವುದನ್ನು ಗಮನಿಸಿಯೂ ಕೋಟ್ಯಂತರ ರೂ. ವಂಚನೆಗೆ ಒಳಗಾಗಿದ್ದು ಖೇದಕರ. ಎಲ್ಲೆಡೆ ಈ ಕುರಿತು ಅರಿವು ಮೂಡಿಸಲು ಮುಂದಾಗಬೇಕು. ತೊಂದರೆಗೀಡಾದವರು ದೃತಿಗೆಡಬಾರದು ಎಂದರು. ಸಿಪಿಐ ಶ್ರೀನಿವಾಸ ಹಾಂಡ್, ತಹಶ್ರೀಲ್ದಾರ ಬಿ.ವಿ. ಲಕ್ಷ್ಮೇಶ್ವರ ಮುಂತಾದವರಿದ್ದರು.