Advertisement

ಡೆಂಘೀ, ಚಿಕೂನ್‌ಗುನ್ಯಾ ತಡೆಗೆ ಕ್ರಮ ಕೈಗೊಳ್ಳಿ: ಡಿಸಿ

12:24 PM May 24, 2017 | Team Udayavani |

ದೇವನಹಳ್ಳಿ: ಮಳೆಗಾಲ ಆರಂಭವಾಗಿದ್ದು ಡೆಂಘೀ ಮತ್ತು ಚಿಕೂನ್‌ ಗುನ್ಯಾ ರೋಗಗಳು ವ್ಯಾಪಕವಾಗಿ ಕಂಡು ಬರಬಹುದಾಗಿರುವುದರಿಂದ, ಸೊಳ್ಳೆಗಳನ್ನು ನಿಯಂತ್ರಿಸುವ ಮೂಲಕ ರೋಗ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಸ್‌.ಪಾಲಯ್ಯ ತಿಳಿಸಿದರು.

Advertisement

ಬೆಂಗಳೂರಿನಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಚರ್ಚಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸೊಳ್ಳೆಗಳಿಂದ ಈ ರೋಗಗಳು ಬರುವುದರಿಂದ ಮುಂಜಾಗ್ರತೆಯಾಗಿ ಪರಿಸರ ಸ್ವತ್ಛತೆ ಕಾಪಾಡುವುದರ ಜೊತೆಗೆ ಸೊಳ್ಳೆಗಳನ್ನು ನಿಯಂತ್ರಿಸುವ ಬಗ್ಗೆ ಸಾರ್ವಜನಿರಲ್ಲಿ ಅರಿವು ಮೂಡಿಸಬೇಕು. ಯಾವುದೇ ರೀತಿಯ ಜ್ವರ ಕಾಣಿಸಿಕೊಂಡರೆ ಕೂಡಲೇ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕೆಂಬ ವಿಷಯಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕೆಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಈ ರೋಗಗಳನ್ನು ಹರಡುವ ಸೊಳ್ಳೆಗಳು ಶುದ್ಧ ನೀರಿನಲ್ಲಿಯೆ ಉತ್ಪತ್ತಿಯಾಗುವುದರಿಂದ ಜಿಲ್ಲೆಯ ಕೆಲವೊಂದು ಭಾಗದಲ್ಲಿ, ಅದರಲ್ಲೂ ನೀರಿನ ಅಭಾವವಿರುವ ಪ್ರದೇಶಗಳಲ್ಲಿ ಜನರು ನೀರನ್ನು ಶೇಖರಣೆ ಮಾಡಿಕೊಳ್ಳುತ್ತಿರುವ ಭಾಗಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಂಗ್ರಹಿಸಿರುವ ನೀರಿನಲ್ಲಿ ಲಾರ್ವಗಳಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಹಾಗೂ ನೀರನ್ನು ಹೆಚ್ಚು ದಿನ ಸಂಗ್ರಹಿಸಿಡದಂತೆ ಸಲಹೆ ನೀಡಬೇಕೆಂದು ಸೂಚಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್‌ ಮಾತನಾಡಿ, ಜಿಲ್ಲೆಯಲ್ಲಿ 2 ಡೆಂಘೀ ಪ್ರಕರಣಗಳು ಮಾತ್ರ ಕಂಡು ಬಂದಿವೆ. ರೋಗ ನಿಯಂತ್ರಣಕ್ಕೆ ಮುಂಜಾಗ್ರತೆ ವಹಿಸಲಾಗಿದೆ ಎಂದು ತಿಳಿಸಿದರಲ್ಲದೆ, ಘನತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಬೇಕು. ಗುಂಡಿಗಳಲ್ಲಿ ನೀರು ಸಂಗ್ರಹವಾಗದಂತೆ ಗುಂಡಿಗಳನ್ನು ಮುಚ್ಚಬೇಕು. ಚರಂಡಿಗಳಲ್ಲಿ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಅಗತ್ಯ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.

Advertisement

ರೋಗ ಗುಣಲಕ್ಷಣ ಹಾಗೂ ಹರಡುವ ಬಗ್ಗೆ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುವುದು. ಮತ್ತು ಹೋಟೆಲ್‌ಗ‌ಳಲ್ಲಿ ಶುದ್ಧ ಕುಡಿಯುವ ನೀರನ್ನು ಒದಗಿಸುವುದರ ಜೊತೆಗೆ ಸ್ವತ್ಛತೆ ಕಾಪಾಡುವಂತೆ ಸೂಚನೆ ಕೊಡಲಾಗುವುದು ಎಂದು ಹೇಳಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಧರ್ಮೇಂದ್ರ ಮಾತನಾಡಿ, ಮಳೆ ಬಂದಾಗ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಅಂದರೆ ಹೆಚ್ಚು ದಿನ ನೀರು ಸಂಗ್ರಹವಾಗುವ ಒಡೆದ ಟೈರ್‌ಗಳು, ತೆಂಗಿನ ಚಿಪ್ಪು, ಸಿಮೆಂಟ್‌ ತೊಟ್ಟಿ, ತೆರೆದ ಪ್ಲಾಸ್ಟಿಕ್‌ ಪರಿಕರಗಳು, ಬಿಸಾಡಿದ ಪ್ಲಾಸ್ಟಿಕ್‌ ಲೋಟಗಳು, ಬಾಟಲ್‌ಗ‌ಳು, ಹೂವಿನ ಕುಂಡ ಇತ್ಯಾದಿ ಸ್ಥಳಗಳಲ್ಲಿ ಸೊಳ್ಳೆ ಉತ್ಪಾದನೆಯಾಗುವುದರಿಂದ ಸಾರ್ವಜನಿಕರು ಅವುಗಳನ್ನು ತೆರವುಗೊಳಿಸುವ ಮೂಲಕ ಎಚ್ಚರವಹಿಸಬೇಕೆಂದು ತಿಳಿಸಿದರು.

ಅಧಿಕ ಜ್ವರ, ತೀವ್ರ ತಲೆನೋವು, ಕಣ್ಣುಗಳ ಹಿಂಭಾಗದಲ್ಲಿ ತೀವ್ರತರ ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕೆಂದರು.
ಸಭೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎ.ದಯಾನಂದ, ಅಪರ ಜಿಲ್ಲಾಧಿಕಾರಿ ಎ.ಎಂ.ಯೋಗೀಶ್‌, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next