Advertisement

ಹೊಡೆದಾಟಕ್ಕೆ ಲಕ್ಷ್ಯ; ಕಥೆ ಅಲಕ್ಷ್ಯ

04:50 PM Jan 12, 2018 | |

“ಲಕ್ಷ ನೋಡಿದರೆ ಹೆಣ ಬೀಳಿಸ್ತಾನೆ. ಇನ್ನೊಂದು ಲಕ್ಷ ಜಾಸ್ತಿ ಕೊಟ್ರೆ, ಅದೇ ಹೆಣನ ಎಬ್ಬಿಸಿ ನಿಲ್ಲಿಸ್ತಾನೆ…! ಒಟ್ನಲ್ಲಿ ದುಡ್ಡು ಕೊಟ್ರೆ ಅವನು ಏನ್‌ ಬೇಕಾದ್ರೂ ಮಾಡ್ತಾನೆ…’  ಇದು “ಮರಿ ಟೈಗರ್‌’ ಚಿತ್ರದ ಒನ್‌ಲೈನ್‌. ಇಷ್ಟು ಹೇಳಿದ ಮೇಲೆ ಹೊಡಿ, ಬಡಿ, ಕಡಿ ಬಗ್ಗೆ ಹೇಳಂಗಿಲ್ಲ. ನಾಯಕ ದುಡ್ಡು ನೋಡಿದ್ರೆ ಸಾಕು “ಧೂಳ್‌’ ಎಬ್ಬಿಸ್ತಾನೆ. ಹಾಗಾಗಿ ಇಡೀ ಸಿನಿಮಾನೇ ಧೂಳು ಧೂಳು! ಈ ಚಿತ್ರದ ಒಂದೇ ಒಂದು ಖುಷಿಯ ಅಂಶವೆಂದರೆ ಇಲ್ಲಿ ಇಬ್ಬರು ಹೀರೋಗಳ ಫೈಟ್‌ ಮಾಡೋದು, ಹೆಜ್ಜೆ ಹಾಕೋದ್ದನ್ನ ಉಚಿತವಾಗಿ ನೋಡಬಹುದು!

Advertisement

ಹೌದು, ದೃಶ್ಯವೊಂದರಲ್ಲಿ “ಜಗ್ಗು ದಾದ’ ಚಿತ್ರದ ಹಾಡೊಂದು ಕಾಣಿಸಿಕೊಳ್ಳುತ್ತೆ. ಸಾಮಾನ್ಯವಾಗಿ ಸೆಕೆಂಡ್‌ಗಳ ಲೆಕ್ಕದಲ್ಲಿ ಬೇರೆ ಚಿತ್ರಗಳ ಹಾಡು ಬಂದು ಹೋಗುತ್ತೆ. ಆದರೆ, ಇಲ್ಲಿ ಇಡೀ ಹಾಡೇ ಆವರಿಸಿಕೊಳ್ಳುತ್ತೆ. ಅದೇನೆ ಇದ್ದರೂ ನೋಡುಗರಿಗೆ “ಜಗ್ಗು ದಾದ’ ದರ್ಶನ ಭಾಗ್ಯ ಉಚಿತ. ಇಷ್ಟೇ ಅಲ್ಲ, ಟೈಗರ್‌ ಪ್ರಭಾಕರ್‌ ಅವರನ್ನೂ ಪುನಃ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ ನಿರ್ದೇಶಕರು. ಅಲ್ಲಲ್ಲಿ, ಪ್ರಭಾಕರ್‌ ಅವರ “ಸಾಹಸ’ಮಯ ದೃಶ್ಯಗಳು ಮತ್ತು ಹಾಡುಗಳನ್ನು ತೋರಿಸುವಲ್ಲಿ ಹರಸಾಹಸ ಪಡಲಾಗಿದೆ.

ಹಾಗಾಗಿ ಇಲ್ಲಿ ಇಬ್ಬರು ಹೀರೋಗಳ ಹಾಡು, ಕುಣಿತವನ್ನು ಉಚಿತವಾಗಿ ಕಾಣಬಹುದು. “ಮರಿ ಟೈಗರ್‌’ ಚಿತ್ರದ ಕಥೆ ಏನೆಂಬುದನ್ನು ಕೇಳಂಗಿಲ್ಲ. ಹೊಡೆದಾಟಗಳು ಹೇಗಿದೆ ಅನ್ನುವುದನ್ನು ಕೇಳಲ್ಲಡ್ಡಿಯಿಲ್ಲ. ಪಕ್ಕಾ ಮಾಸ್‌ ಅಂಶಗಳನ್ನು ಇಟ್ಟುಕೊಂಡು ಚಿತ್ರ ಮಾಡಿದ್ದಾರೆ. ಹಾಗಾಗಿ ಇಲ್ಲಿ ಕಥೆಗಿಂತ ಹೊಡಿ, ಬಡಿ ಆರ್ಭಟಗಳದ್ದೇ ಕಾರುಬಾರು. ಇಡೀ ಚಿತ್ರ ನೋಡುವಾಗ ಯಾವ್ಯಾವ ಕಾಲಘಟ್ಟದಲ್ಲಿ ಮಾಡಲಾಗಿದೆ ಎಂಬ ಅನುಮಾನ ಮೂಡುವುದು ಸಹಜ. ಅದಕ್ಕೆ ಕಾರಣ, ಕಂಟಿನ್ಯುಟಿ.

ಅಲ್ಲಲ್ಲಿ ಅದು ಕಾಣೆಯಾಗಿದೆ. ಇನ್ನು, ಚಿತ್ರಮಂದಿರದ ಸಮಸ್ಯೆಯೋ, ಸಿನಿಮಾ ಛಾಯಾಗ್ರಹಣದ ಸಮಸ್ಯೆಯೋ ಗೊತ್ತಿಲ್ಲ. ಪರದೆ ಮೇಲೆ ಆಗಾಗ ಬರುವ ಬಹುತೇಕ ದೃಶ್ಯಗಳು ಅಸ್ಪಷ್ಟ. ಅಲ್ಲಲ್ಲಿ “ಮರಿ ಟೈಗರ್‌’ನ ಅಂದ ಚೆಂದ ಹೊರತುಪಡಿಸಿದರೆ, ಚಿತ್ರದಲ್ಲಿ ಕ್ಯಾಮೆರಾ ಕೈಚಳಕದ ಕೊರತೆಯದ್ದೇ ಸಮಸ್ಯೆ. ಮೊದಲರ್ಧ ಕಥೆ ಹುಡುಕುವ ಗೋಜಿಗೆ ಹೋಗುವಂತಿಲ್ಲ. ಯಾಕೆಂದರೆ, ಡೀಲು ಪಡೆಯೋದು, ಸಿಕ್ಕವರನ್ನು ಹೊಡೆದುರುಳಿಸೋದು. ಹಾಗಾಗಿ ಬರೀ ಹಾರಾಟ, ಚೀರಾಟ, ಮಚ್ಚು, ಲಾಂಗುಗಳ ಆರ್ಭಟವಷ್ಟೇ.

ಅದರ ನಡುವೆ “ಉಂಡ್‌ ಸಾಯಿ, ತಿಂದ್‌ ಸಾಯಿ, ಕುಡ್‌ ಸಾಯಿ ತಮ್ಮ, ಸುಮ್‌ ಸುಮ್ನೆ ಸತ್ತೋದ್ರೆ ಬೈಯ್ತಾನೆ ಬ್ರಹ್ಮ..’ ಎಂಬ ತಮಟೆ ಸದ್ದಿನ ಟಪ್ಪಾಂಗುಚ್ಚಿ ಹಾಡೊಂದು ಬಂದು ಮಾಸ್‌ ಪ್ರೇಕ್ಷಕರ ಖುಷಿ ಪಡಿಸುವುದೊಂದೇ ಸಮಾಧಾನಕರ. ದ್ವಿತಿಯಾರ್ಧದಲ್ಲಿ ಒಂಚೂರು ಕಥೆ ಬಿಚ್ಚಿಕೊಳ್ಳುತ್ತಾದರೂ, ಅದೂ ದಂಢಂ ದಶಗುಣಂನಲ್ಲೇ ಸಾಗುತ್ತೆ. ಹಾಗಾಗಿ, ಅಲ್ಲಿ ಸಾಹಸ ನಿರ್ದೇಶಕರ ಹರಸಾಹಸದ ಕೆಲಸ ಕಾಣುತ್ತೆ ಹೊರತು ಬೇರೇನೂ ಇಲ್ಲ. ಟೈಗರ್‌ ಕೇರ್‌ ಆಫ್ ರೈಲ್ವೇ ಸ್ಟೇಷನ್‌. ಅವನೊಬ್ಬ ಅನಾಥ. ರೈಲ್ವೇ ನಿಲ್ದಾಣದಲ್ಲೇ ಬೆಳೆದವನು.

Advertisement

ಅಲ್ಲೇ ಪಾಳುಬಿದ್ದ ಬೋಗಿಯೊಂದನ್ನು ಮನೆಯನ್ನಾಗಿಸಿಕೊಂಡು ದಿನ ಸವೆಸುವವನು. ಹಣ ಪಡೆದು, ಡೀಲ್‌ ಮಾಡೋದು ಅವನ ನಿತ್ಯ ಕಾಯಕ. ಟೈಗರ್‌ ಮಾತು ಕೊಟ್ರೆ, ದೇವರು ಮಾತು ಕೊಟ್ಟಂತೆ. ಅಂಥವನ ಬೋಗಿಮನೆಗೆ ಇದ್ದಕ್ಕಿದ್ದಂತೆ ಒಬ್ಬ ಚಂದದ ಹುಡುಗಿಯ ಎಂಟ್ರಿಯಾಗುತ್ತೆ. ಅವಳಿಗೊಂದು ಗಂಡಾಂತರ ಕಾದಿರುತ್ತೆ. ಅದಕ್ಕಾಗಿಯೇ ಅವಳು ದೂರದ ಊರೊಂದರಿಂದ ಓಡಿ ಬಂದು, ಆ ಬೋಗಿಯೊಳಗೆ ಆಶ್ರಯ ಪಡೆಯುತ್ತಿರುತ್ತಾಳೆ. ಅವಳು ಯಾಕೆ ಬಂದಳು, ಅವಳ ಹಿನ್ನೆಲೆ ಏನು ಅನ್ನೋದೇ ಕಥೆ ಮತ್ತು ವ್ಯಥೆ.

ಅವಳ ಕಣ್ಣೀರ ಕಥೆ ಕೇಳಿ ಮಾನವೀಯತೆ ತೋರುವ ಟೈಗರ್‌, ರಾಕ್ಷಸನ ಹಾಗೆ ಎದುರಿಗಿದ್ದ ಖಳರನ್ನು ಕೊಚ್ಚಿ ಹಾಕುತ್ತಾನೆ. ಅವನು ಯಾಕೆ ಹಾಗೆ ಮಾಡ್ತಾನೆ ಎಂಬ ಕುತೂಹಲವೇನಾದರೂ ಇದ್ದರೆ, “ಮರಿ ಟೈಗರ್‌’ ಎಗರೋದನ್ನ ನೋಡಬಹುದು. ವಿನೋದ್‌ ಪ್ರಭಾಕರ್‌ ಹೊಡೆದಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಡೈಲಾಗ್‌ ಬಿಡೋದ್ರಲ್ಲಿ, ಗಟ್ಟಿಮಸ್ತಾಗಿರುವ ದೇಹ ತೋರಿಸುವುದರಲ್ಲಿ ಅವರ ತಂದೆಯನ್ನು ನೆನಪಿಸುತ್ತಾರೆ.

ಸಿಕ್ಕ ಪಾತ್ರಕ್ಕೆ ಇರುವ ಚೌಕಟ್ಟಿನೊಳಗೆ ಎಷ್ಟು ಬೇಕೋ ಅಷ್ಟು ನಟಿಸಿದ್ದಾರೆ. ಒಬ್ಬ ಅಸಹಾಯಕ ಹುಡುಗಿಯಾಗಿ ತೇಜು ನಟನೆ ಪರವಾಗಿಲ್ಲ. ಉಳಿದಂತೆ ಬರುವ ಪಾತ್ರಗಳ್ಯಾವೂ ಅಷ್ಟೊಂದು ಗಮನಸೆಳೆಯಲ್ಲ. ಆದರೆ, ಫೈಟರ್ಗಳಂತೂ ತುಂಬಾ ಶಿಸ್ತುಬದ್ಧವಾಗಿ ಒದೆ ತಿಂದಿರುವುದೇ ಹೈಲೈಟ್‌. ಆ ಕಾರಣಕ್ಕೆ ಥ್ರಿಲ್ಲರ್‌ ಮಂಜು, ಡಿಫ‌ರೆಂಟ್‌ ಡ್ಯಾನಿ ಸಾಹಸವನ್ನು ಮೆಚ್ಚಬೇಕು. ರಾಕ್‌ರವಿ ಸಂಗೀತದ ಸದ್ದು ಅಷ್ಟಾಗಿ ಕೇಳಿಸಲ್ಲ. ಜೈ ಆನಂದ್‌ ಕ್ಯಾಮೆರಾ ಸೊಬಗು ಸೊರಗಿದೆ.

ಚಿತ್ರ: ಮರಿ ಟೈಗರ್‌
ನಿರ್ಮಾಣ: ರಮೇಶ್‌ ಕಶ್ಯಪ್‌
ನಿರ್ದೇಶನ: ಪಿ.ಎನ್‌.ಸತ್ಯ
ತಾರಾಗಣ: ವಿನೋದ್‌ ಪ್ರಭಾಕರ್‌, ತೇಜು, ಮನೋಜ್‌, ಕೋಟೆ ಪ್ರಭಾಕರ್‌, ಬುಲೆಟ್‌ ಪ್ರಕಾಶ್‌, ಪೆಟ್ರೋಲ್‌ ಪ್ರಸನ್ನ ಮುಂತಾದವರು

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next