ಸುಳ್ಯ: ಮೂಲಸೌಕರ್ಯ ಕೊರತೆ ಹಿನ್ನೆಲೆಯಲ್ಲಿ ನಗರದ ಕುದ್ಪಾಜೆ ಕಾಲನಿ ಮತ್ತು ಐವರ್ನಾಡು ಗ್ರಾಮದ ಶಾಂತಿಮೂಲೆಯಲ್ಲಿ ಸ್ಥಳೀಯರು ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದು, ತಹಶೀಲ್ದಾರ್ ಕುಂಞಿ ಅಹ್ಮದ್ ಮತ್ತು ಅಧಿಕಾರಿಗಳು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಿದರಲ್ಲದೆ ಮತದಾನದ ಮಹತ್ವದ ಪಾಠ ಹೇಳಿ, ಮತ ಚಲಾಯಿಸಲು ಪ್ರೇರೇಪಿಸಿದರು.
ಕುದ್ಪಾಜೆ ಕಾಲನಿಯಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿತ್ತು. ಸ್ಥಳಕ್ಕೆ ತೆರಳಿದ ತಹಶೀಲ್ದಾರ್ ನೇತೃತ್ವದ ತಂಡ, ಅಲ್ಲಿನ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆ ಅರಿತು, ನ.ಪಂ. ಎಂಜಿನಿಯರ್‌ಗೆ ರಸ್ತೆ ಅಗಲಕ್ಕೆ ಕ್ರಮ, ಕುಡಿಯುವ ನೀರಿನ ಸಮಸ್ಯೆಗೆ ಪರ್ಯಾಯ ವ್ಯವಸ್ಥೆಯನ್ನು ತತ್‌ಕ್ಷಣ ಕೈಗೊಳ್ಳಲು ಸೂಚಿಸಿದರು.
ಶಾಂತಿಮೂಲೆಯಲ್ಲೂ ಬಹಿಷ್ಕಾರದ ಮಾಹಿತಿ ಪಡೆದು, ಅಲ್ಲಿಗೆ ಭೇಟಿ ನೀಡಿದರು. ಸ್ಥಳೀಯ ನಿವಾಸಿಗಳು ರಸ್ತೆ ಇಲ್ಲದೆ ಗುಡ್ಡ ಪ್ರದೇಶ ದಲ್ಲಿ ನಡೆದು ಸಂಚರಿಸುವ ಸ್ಥಳ ಪರಿಶೀಲಿಸಿದರು. ಅರಣ್ಯ, ಸಮಾಜ ಕಲ್ಯಾಣ, ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ರಸ್ತೆ ವ್ಯವಸ್ಥೆ ಮಾಡುವ ಬಗ್ಗೆ ಸ್ಥಳೀಯರಿಗೆ ಭರವಸೆ ನೀಡಿದರು.
ಕಾಲನಿಗೆ ಕುಡಿಯುವ ನೀರಿನ ಪೂರೈಕೆಗೆ ಕೆಎಫ್‌ಡಿಸಿ ಸ್ಥಳದಲ್ಲಿ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಸಂಬಂಧಪಟ್ಟವರನ್ನು ಸ್ಥಳಕ್ಕೆ ಕರೆಯಿಸಿ, ನೀರು ಪೂರೈಕೆಗೆ ಅಡ್ಡಿ ಮಾಡದಂತೆ ಎಚ್ಚರಿಕೆ ನೀಡಿದರು. ಕೊಳವೆ ಬಾವಿ ಕೊರೆದು ನೀರಿನ ವ್ಯವಸ್ಥೆ ಕಲ್ಪಿಸಲು ಸ್ಥಳದಲ್ಲಿದ್ದ ಪಿಡಿಒಗೆ ಸೂಚಿಸಿದರು. ವಿದ್ಯುತ್ ಕಂಬ ಸ್ಥಳಾಂತರಿಸಬೇಕು ಎಂಬ ಬೇಡಿಕೆಗೆ ಅನುಗುಣವಾಗಿ, ಮೆಸ್ಕಾಂ ಅಧಿಕಾರಿಯನ್ನು ಕರೆಯಿಸಿ ಕ್ರಮ ಕೈಗೊಳ್ಳಲು ನಿರ್ದೇಶಿಸಿದರು.
ಮತದಾನಕ್ಕೆ ಮನವಿ: ಜನರ ಸ್ಪಂದನೆ
ನಾಗರಿಕರ ಮನವೊಲಿಸಿದ ತಹಶೀಲ್ದಾರ್ ಮತದಾನ ಅಮೂಲ್ಯ ಹಕ್ಕು ಎನ್ನುವ ಬಗ್ಗೆ ಮನ ವರಿಕೆ ಮಾಡಿದರು. ತಹಶೀಲ್ದಾರ್ ಭರವಸೆಗೆ ನಾಗರಿಕರು ಬಹಿಷ್ಕಾರದ ಬ್ಯಾನರ್ ತೆರವುಗೊಳಿಸಿ ಸಹಮತ ವ್ಯಕ್ತಪಡಿಸಿದರು. ಈ ಸಂದರ್ಭ ಕಂದಾಯ ನಿರೀಕ್ಷಕ ಆವಿನ್ ರಂಗತ್ತಮಲೆ, ಸ. ನಿರ್ದೇಶಕ ಭವಾನಿಶಂಕರ, ನ.ಪಂ. ಎಂಜಿನಿಯರ್ ಶಿವಕುಮಾರ್, ಪಿಡಿಒ ಯು.ಡಿ.ಶೇಖರ್, ವಿಎ ತಿಪ್ಪೇಶಪ್ಪ ಉಪಸ್ಥಿತರಿದ್ದರು.