Advertisement

ತಹಶೀಲ್ದಾರ್‌ ಹುದ್ದೆ ಖಾಲಿ..!

12:34 PM Dec 25, 2019 | Suhan S |

ಗಜೇಂದ್ರಗಡ: ಪಟ್ಟಣದಲ್ಲಿ ನೂತನ ತಾಲೂಕು ಕಚೇರಿ ಆರಂಭವಾಗಿ ಎರಡು ವರ್ಷ ಗತಿಸುತ್ತಾ ಬಂದರೂ ಕಾರ್ಯಾಲಯಕ್ಕೆ ಈವರೆಗೂ ಕಾಯಂ ತಹಶೀಲ್ದಾರರು ಇಲ್ಲ. ಕಾಟಾಚಾರಕ್ಕೆ ಮಾತ್ರ ತಹಶೀಲ್ದಾರ್‌ ಕಚೇರಿ ಎಂಬಂತಾಗಿದೆ.

Advertisement

ಸರ್ಕಾರಿ ಸೇವೆ ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ನೀಡಬೇಕೆನ್ನುವ ಉದ್ದೇಶದಿಂದ 2018ರಿಂದಕಾರ್ಯಾರಂಭಿಸಿರುವ ಗಜೇಂದ್ರಗಡ ತಹಶೀಲ್ದಾರ್‌ ಕಾರ್ಯಾಲಯದಲ್ಲಿ ಈವರೆಗೂ ತಹಶೀಲ್ದಾರರು ಬಂದಿಲ್ಲ. ಇದರಿಂದಾಗಿ ಸಾರ್ವಜನಿಕರಿಗೆ ಸರ್ಕಾರಿ ಸೇವೆ ದೊರೆಯುವುದರಲ್ಲಿ ಹಿನ್ನಡೆಯಾದಂತಾಗಿದೆ.

ಗಜೇಂದ್ರಗಡ ನೂತನ ತಾಲೂಕು ಕೇಂದ್ರವೆಂದು ಘೋಷಣೆಯಾಗುವುದಲ್ಲದೇ ಆಡಳಿತಾತ್ಮಕ ಚಾಲನೆ ದೊರೆತು ಎರಡನೇ ವರ್ಷದ ಹೊಸ್ತಲಿನಲ್ಲಿ ಇದ್ದರೂ ಕಾಯಂ ತಹಶೀಲ್ದಾರ್‌ ನೇಮಕದ ಗೋಳು ಇನ್ನೂ ತಪ್ಪಿಲ್ಲ. ಹೀಗಾಗಿ ಗಜೇಂದ್ರಗಡದ ತಹಶೀಲ್ದಾರ್‌ ಕಾರ್ಯಾಲಯದ ಸದ್ಬಳಕೆ ಸಮರ್ಪಕ ರೀತಿಯಲ್ಲಾಗದಿರುವುದರಿಂದ ಸಾರ್ವಜನಿಕರು ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುವಂತಾಗಿದೆ. ಸರ್ಕಾರವೇನೋ ಗಜೇಂದ್ರಗಡವನ್ನು ತಾಲೂಕನ್ನಾಗಿ ಘೋಷಣೆ ಮಾಡಿ ಕೈ ತೊಳೆದುಕೊಂಡಿದೆ. ಆದರೆ ಕಚೇರಿಗೆ ಬೇಕಾದ ಕನಿಷ್ಠ ಮೂಲ ಸೌಕರ್ಯ ನೀಡಿಲ್ಲ. ಹೀಗಾಗಿ ಜನ ತಮ್ಮ ಕೆಲಸ ಕಾರ್ಯಗಳಿಗೆಇನ್ನೂ ರೋಣ ಪಟ್ಟಣಕ್ಕೆ ಅಲೆಯುವುದು ತಪ್ಪಿಲ್ಲ. ಅತ್ತ ಪೂರ್ಣ ಅಧಿಕಾರವುಳ್ಳ ತಹಶೀಲ್ದಾರರೂ ಇಲ್ಲ. ಇತ್ತ ಸಮರ್ಪಕ ಸಿಬ್ಬಂದಿಯೂ ಇಲ್ಲವಾಗಿದ್ದಾರೆ.

ಗಜೇಂದ್ರಗಡದ ತಹಶೀಲ್ದಾರ್‌ ಕಚೇರಿ ಕಳೆದ 21 ತಿಂಗಳಿಂದ ಕುಂಟುತ್ತಾ, ತೆವಳುತ್ತಾ ಮಂದಗತಿಯಲ್ಲಿ ಜನರಿಗೆ ಸೇವೆ ನೀಡುತ್ತಿದೆ. ಇಲ್ಲಿಯವರೆಗೆ ಐದು ತಹಶೀಲ್ದಾರರು ಬದಲಾವಣೆಯಾಗಿದ್ದಾರೆ. ಕರ್ತವ್ಯಕ್ಕೆ ಹಾಜರಾಗಿ ಕೆಲ ತಿಂಗಳು ಕಳೆಯುವಷ್ಟರಲ್ಲೇ ಮತ್ತೂಂದು ಕಡೆ ವರ್ಗಾವಣೆ ಆಗುತ್ತಿರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುವಂತಾಗಿದೆ.

ಗಜೇಂದ್ರಗಡದಲ್ಲಿ ತಹಶೀಲ್ದಾರ್‌ ಕಚೇರಿ ಆರಂಭದಲ್ಲಿ ಶಿವಕುಮಾರ ವಸ್ತ್ರದ ತಹಶೀಲ್ದಾರ್‌ ಆಗಿ ಸೇವೆ ಸಲ್ಲಿಸಿದ ಬಳಿಕ ಬೇರೆಡೆ ವರ್ಗಾವಣೆಯಾದರು. ಇದಾದ ಬಳಿಕ ಶ್ರೀಶೈಲ ತಳವಾರ, ಕೆ.ಬಿ. ಕೋರಿಶೆಟ್ಟರ ಸೇವೆ ಸಲ್ಲಿಸಿದರು. ಬಳಿಕ ಇವರೂ ವರ್ಗಾವಣೆಗೊಂಡರು. ಈ ಮೊದಲಿದ್ದ ಶ್ರೀಶೈಲ ತಳವಾರ, ಸೇವೆಗೆ ಹಾಜರಾಗುತ್ತಿದ್ದಂತೆ ಅವರು ಕೂಡಾ ಇಲಾಖೆ ವತಿಯಿಂದ ತರಬೇತಿಗಾಗಿ ತೆರಳಿದರು. ಮತ್ತೇ ತಹಶೀಲ್ದಾರ್‌ ಹುದ್ದೆ ಖಾಲಿಯಾಗಿಯೇ ಉಳಿಯಿತು. ಇದನ್ನು ಮನಗಂಡ ಮೇಲಾಧಿಕಾರಿಗಳು ರೋಣ ತಾಲೂಕು ತಹಶೀಲ್ದಾರ್‌ ಅಜೀತ ರೈ ಅವರನ್ನು ಪ್ರಭಾರಿಯನ್ನಾಗಿ ನೇಮಕ ಮಾಡಿದರು.

Advertisement

ನಂತರ ಆರ್‌.ಎಸ್‌. ಮದಗುಣಕಿ, ಗುರುಸಿದ್ದಯ್ಯ ಹಿರೇಮಠ ಸೇವೆ ಸಲ್ಲಿಸಿ ಇದೀಗ ಅವರೂ ಸಹ ಬೇರೆಡೆಗೆ ವರ್ಗಾವಣೆಗೊಂಡು ಎರಡು ತಿಂಗಳು ಕಳೆದರೂ ಈವರೆಗು ತಹಶೀಲ್ದಾರರಿಲ್ಲ. ಹೀಗಾಗಿ ಗಜೇಂದ್ರಗಡಕ್ಕೆ ಕಾಯಂ ತಹಶೀಲ್ದಾರ್‌ ಕನಸು ನನಸಾಗಿಯೇ ಇಲ್ಲ. ಗಜೇಂದ್ರಗಡ ತಹಶೀಲ್ದಾರ್‌ ಕಚೇರಿಯಲ್ಲಿ ಕಳೆದೆರೆಡು ವರ್ಷಗಳಿಂದ ತಹಶೀಲ್ದಾರರು ನೆಲೆ ನಿಲ್ಲದೇ ಸೇವೆ ಸಲ್ಲಿಸದಿರುವುದರಿಂದ ಇದೀಗ ತಹಶೀಲ್ದಾರರೊಂದಿಗೆ, ತಾಲೂಕು ದಂಡಾಧಿಕಾರಿಗಳ ಕರ್ತವ್ಯಕ್ಕೆ ಅಣಿಯಾಗಿದ್ದ ವಾಹನವೂ ಬೇರೆ ತಾಲೂಕು ಕೇಂದ್ರಕ್ಕೆ ಕೊಟ್ಟಿದ್ದಾರೆ. ಹೀಗಾಗಿ ಇತ್ತ ತಹಶೀಲ್ದಾರರೂ ಇಲ್ಲ. ಅತ್ತ ಅವರ ವಾಹನೂ ಇಲ್ಲದಂತಾಗಿದೆ.

ಸಿಬ್ಬಂದಿಯಿಲ್ಲದ ತಾಲೂಕು ಕಚೇರಿ: ತಹಶೀಲ್ದಾರ್‌ ಕಚೇರಿಯಲ್ಲಿ ಓರ್ವ ತಹಶೀಲ್ದಾರ್‌, 2 ಶಿರಸ್ತೇದಾರ, 2 ಪ್ರಥಮ ದರ್ಜೆ, 4 ದ್ವಿತೀಯ ದರ್ಜೆ ಸಹಾಯಕರ ಅಗತ್ಯವಿದೆ. ಆದರೆ ಗಜೇಂದ್ರಗಡ ತಹಶೀಲ್ದಾರ್‌ ಕಚೇರಿಯಲ್ಲಿ ಶಿರಸ್ತೇದಾರ, ಪ್ರಥಮ ದರ್ಜೆ ಸಹಾಯಕರನ್ನು ಹೊರತುಪಡಿಸಿ ಯಾವುದೇ ವರ್ಗದ ಅಧಿಕಾರಿಗಳು ಇಲ್ಲದ ಪರಿಣಾಮ ಸಿಬ್ಬಂದಿ ಕೊರತೆ ತಾಲೂಕು ಕಚೇರಿಗೆ ತೀವ್ರವಾಗಿ ಕಾಡುತ್ತಿದೆ. ಸರ್ಕಾರ ಮಾತ್ರ ಅಧಿಕಾರಿಗಳ ನೇಮಕಕ್ಕೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಗಜೇಂದ್ರಗಡ ತಾಲೂಕು ಕಚೇರಿಯಲ್ಲಿ ಕಳೆದೆರೆಡು ತಿಂಗಳಿಂದ ತಹಶೀಲ್ದಾರ್‌ ಇಲ್ಲದ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ರೋಣ ತಹಶೀಲ್ದಾರರಿಗೆ ವಾರದಲ್ಲಿ ಎರಡು ದಿನ ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ. ಅಲ್ಲದೇ ಕಾಯಂ ತಹಶೀಲ್ದಾರ್‌ ರನ್ನು ನೇಮಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ನೂತನ ತಾಲೂಕು ಕಚೇರಿ ನಿರ್ವಹಣೆಗೆ ಪ್ರತಿವರ್ಷ ಸರ್ಕಾರದಿಂದ 5 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next