ಮಧುಗಿರಿ: ವೈಯಕ್ತಿಕ ಸಮಸ್ಯೆಯನ್ನು ಮುಂದಿಟ್ಟುಕೊಂಡು ಪ್ರಾಮಾಣಿಕ ಅಧಿಕಾರಿಯಾದ ತಹಶೀಲ್ದಾರ್ ನಂದೀಶ್ ರವರನ್ನು ಬೇರೆಡೆ ವರ್ಗ ಮಾಡದಂತೆ ಹಾಗೂ ಇಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲು ಇಲ್ಲಿಯೇ ಉಳಿಸಿಕೊಳ್ಳುವಂತೆ ಸಾರ್ವಜನಿಕರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಧುಗಿರಿಯ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯನವರಿಗೆ ಮನವಿ ಸಲ್ಲಿಸಿ ಮಾತನಾಡಿದ ಯಾದವ ರೈತ ಮುಖಂಡ ರವಿಯಾದವ್, ನಮ್ಮ ಗೊಲ್ಲರಹಟ್ಟಿ ಹಾಗೂ ಪರಿಶಿಷ್ಟ ಸಮುದಾಯದ ಜನತೆಯ ದಶಕಗಳ ಸಮಸ್ಯೆಯಾದ ಪೌತಿ ಖಾತೆ, ಖಾತೆ ತಿದ್ದುಪಡಿಯನ್ನು ಗ್ರಾಮಕ್ಕೆ ಬಂದು ಪರಿಶೀಲಿಸಿ ಇತ್ಯರ್ಥಪಡಿಸಲು ತಹಶೀಲ್ದಾರ್ ಮುಂದಾಗಿದ್ದಾರೆ.
ಅಲ್ಲದೆ ರಾಜ್ಯದಲ್ಲಿಯೇ ಪ್ರಥಮ ಮೇವು ಬ್ಯಾಂಕ್ ತೆರೆದು, ರೈತಾಪಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಉಚ್ಛ ನ್ಯಾಯಾಲಯ ಆದೇಶ ಮಾಡಿದ ಮರು ದಿನವೇ ಕ್ಷೇತ್ರದಲ್ಲಿ ಗೋಶಾಲೆ ಆರಂಭಿಸಿ ಸಮರ್ಥವಾಗಿ ಜನಪರ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಂದ ಲಂಚ ಪಡೆಯುತ್ತಿದ್ದ ಕೆಲವರು ಇವರ ಮೇಲೆ ಪಿತೂರಿ ನಡೆಸಿದ್ದು, ಈಗ ಪ್ರತಿಭಟನೆಯಲ್ಲಿ ಮುಂದಾಳತ್ವ ವಹಿಸಿದ್ದಾರೆ. ಇದು ಸಮಂಜಸವಲ್ಲ. ಜನಪರವಾದ ಕಾರ್ಯಕ್ರಮ ನೀಡಿರುವ ತಹಶೀಲ್ದಾರ್ ನಂದೀಶ್ ರವರನ್ನು ಇಲ್ಲಿಯೇ ಉಳಿಸಬೇಕು ಎಂದು ಒತ್ತಾಯಿಸಿದರು. ಪುರಸಭೆ ಮಾಜಿ ಸದಸ್ಯ ಸುಬ್ರಮಣ್ಯ ಮಾತನಾಡಿ, ಲಂಚ ಪಡೆಯುವ ಮಧ್ಯವರ್ತಿಗಳಿಗೆ ಕಡಿವಾಣ ಹಾಕಿದ್ದೇ ತಹಶೀಲ್ದಾರ್ ರವರಿಗೆ ಮುಳುವಾಗಿದೆ. ಮಾನ್ಯ ಉಪವಿಭಾಗಾಧಿಕಾರಿಗಳು ಈ ಅಂಶವನ್ನು ಪರಿಗಣಿಸಿ ನಂದೀಶ್‌ರವರನ್ನು ಉಳಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮುಖಂಡ ನಾಸೀರ್ ಮಾತನಾಡಿ ನಮ್ಮ ಜಮೀನಿನ ಸಮಸ್ಯೆ ಬಗೆಹರಿಯಲು ವರ್ಷಗಳೇ ಕಳೆದವು. ಆದರೆ ನನ್ನನ್ನೂ ಸೇರಿದಂತೆ ಹಲವರ ದಶಕಗಳ ಸಮಸ್ಯೆಯಾದ ಪೌತಿ ಖಾತೆ, ಖಾತೆ ಬದಲಾವಣೆ, ವಿವಿಧ ಮಾಸಾಶನಗಳನ್ನು ತಹಶೀಲ್ದಾರರು 3 ದಿನದಲ್ಲೇ ಆದೇಶ ಮಾಡಿದರು. ಇದು ಮಧ್ಯವರ್ತಿಗಳಿಗೆ ನುಂಗಲಾರದ ತುತ್ತಾಗಿದೆ.
ಸಮಯದ ಮಿತಿಯಿಲ್ಲದೆ ಗ್ರಾಮಗಳಿಗೆ ನೇರವಾಗಿ ತೆರಳಿ ಜನರ ಕಷ್ಟಗಳಿಗೆ ನೆರವಾಗಿದ್ದಾರೆ. ಇದು ಕೆಲವರಿಗೆ ಅಪತ್ಯವಾಗಿದೆ. ಹೀಗಾಗಿ ಜನರ ಕಷ್ಟಗಳಿಗೆ ಸ್ಪಂದಿಸುವ ಇಂತಹ ಅಧಿಕಾರಿಯನ್ನು ವರ್ಗಾಯಿಸಬಾರದು ಎಂದು ಒತ್ತಾಯಿಸಿದರು.
ಆಡಳಿತವನ್ನು ಜನರ ಬಳಿಗೆ ತಂದ ಇಂತಹ ತಹಶೀಲ್ದಾರ್ ಸೇವೆ ಮಧುಗಿರಿಗೆ ಅಗತ್ಯವಾಗಿ ಬೇಕಿದ್ದು, ಯಾವ ಪಿತೂರಿಗೂ ಬಗ್ಗದೆ ಇವರ ಸೇವೆಯನ್ನು ಮಧುಗಿರಿಯಲ್ಲೇ ಮುಂದುವರಿಸಲು ಒತ್ತಾಯಿಸಿದರು. ಈ ವೇಳೆ ಅಪಾರ ನಾರಿಕರು ಹಾಜರಿದ್ದರು.