Advertisement

ಕೋವಿಡ್‌ ನಿಯಮ ಉಲ್ಲಂಘಿಸಿದ ತಹಶೀಲ್ದಾರ್ ಚಂದ್ರಶೇಖರ್

06:25 PM Aug 05, 2021 | Team Udayavani |

ಮಂಡ್ಯ: ಕೋವಿಡ್‌ ಸೋಂಕಿನ ಮೂರನೇ ಅಲೆ ಭೀತಿಯ ನಡುವೆಯೇ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಮಗುವಿನ ಹುಟ್ಟುಹಬ್ಬ ಆಚರಿಸಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಜಲಾಶಯದ ಹೋಟೆಲ್‌ನ ಆವರಣದಲ್ಲಿ ನಡೆದಿದೆ.

Advertisement

ಬುಧವಾರ ರಾತ್ರಿ ತಮ್ಮ ಮಗುವಿನ ಹುಟ್ಟುಹಬ್ಬ ಆಚರಿಸಿರುವ ತಹಶೀಲ್ದಾರ್ ಚಂದ್ರಶೇಖರ್ ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೂ ಕ್ಯಾರೆ ಎನ್ನದೇ ಹೆಚ್ಚು ಜನರನ್ನು ಸೇರಿಸಿ, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೆ ಕೋವಿಡ್‌ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ:
ಮದುವೆ, ಹುಟ್ಟುಹಬ್ಬ, ನಾಮಕರಣ, ಅಂತ್ಯಕ್ರಿಯೆ ಸೇರಿದಂತೆ ವಿವಿಧ ಸಭೆ, ಸಮಾರಂಭ, ಆಚರಣೆಗಳಲ್ಲಿ 30ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ಅಶ್ವಥಿ ಮಂಗಳವಾರ ಆದೇಶ ಹೊರಡಿಸಿದ್ದರು. ಆದರೆ ಮಂಡ್ಯ ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ ಅವರು ಬುಧವಾರ ಸಂಜೆ 6ಗಂಟೆಗೆ ಕೆಆರ್‌ಎಸ್ ಜಲಾಶಯದ ರಾಯಲ್ ಆರ್ಕಿಡ್ ಹೋಟೆಲ್‌ನ ಆವರಣಕ್ಕೆ ಕಾರುಗಳಲ್ಲಿ ಆಗಮಿಸಿದ ನೂರಾರು ಮಂದಿ ಅಧಿಕಾರಿ ವರ್ಗ ಹಾಗೂ ಸಂಬಅಧಿಕರು ಕೊರೊನಾ ಸೋಂಕಿನ ಭಯವಿಲ್ಲದೆ ಗುಂಪು ಗುಂಪಾಗಿ ಹುಟ್ಟುಹಬ್ಬ ಆಚರಣೆಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂದಿತು.

ಅನುಮತಿಯೂ ಪಡೆದಿಲ್ಲ:
ಸಭೆ, ಸಮಾರಂಭ, ಮದುವೆ, ಹುಟ್ಟುಹಬ್ಬ ಆಚರಣೆಗೆ ಆಯಾ ತಾಲೂಕಿನ ತಹಶೀಲ್ದಾರ್ ಅವರ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಆದರೆ ಚಂದ್ರಶೇಖರ್ ಶಂ.ಗಾಳಿ ಶ್ರೀರಂಗಪಟ್ಟಣ ತಹಶೀಲ್ದಾರ್ ಅವರ ಅನುಮತಿಯೇ ಪಡೆದಿಲ್ಲ. ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಿಗೆ ಮಾರ್ಗದರ್ಶನ ಅರಿವು ಮೂಡಿಸಬೇಕಾದ ತಹಶೀಲ್ದಾರ್ ಚಂದ್ರಶೇಖರ್ ತಾವೇ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಅಧಿಕಾರಿಗಳಿಗೊ ಅದು ನ್ಯಾಯವೇ?:
ಕೋವಿಡ್ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ತಹಶೀಲ್ದಾರ್ ಚಂದ್ರಶೇಖರ್, ಮಂಡ್ಯ ತಾಲೂಕಿನಲ್ಲಿ ನಡೆಯುತ್ತಿದ್ದ ಮದುವೆ, ಸಮಾರಂಭಗಳ ಮೇಲೆ ದಾಳಿ ನಡೆಸಿ ದಂಡ, ಪ್ರಕರಣ ದಾಖಲಿಸಿದ್ದರು. ಆದರೆ ಅವರೇ ತಮ್ಮ ಮಗುವಿನ ಹುಟ್ಟುಹಬ್ಬ ಆಚರಿಸಲು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿರುವುದರಿಅದ ಅಧಿಕಾರಿಗಳಿಗೊಂದು ನ್ಯಾಯ, ಸಾರ್ವಜನಿಕರಿಗೊಂದು ನ್ಯಾಯವೇ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ಯಾವುದೇ ಸಭೆ, ಸಮಾರಂಭ ನಡೆದರೂ ಕೂಡ 30 ಜನರನ್ನು ಮೀರುವಂತಿಲ್ಲ. ಆದರೆ ಕೆಆರ್‌ಎಸ್‌ನಲ್ಲಿ ಮಂಡ್ಯ ತಹಸೀಲ್ದಾರ್ ಅವರು ನಿಯಮ ಮೀರಿ ಹೆಚ್ಚು ಜನರಿಂದ ಹುಟ್ಟುಹಬ್ಬ ಆಚರಣೆ ಮಾಡಿರುವುದು ಕಾನೂನು ಪ್ರಕಾರ ತಪ್ಪು. ನಮ್ಮಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಈಗಾಗಲೇ ಹೋಟೆಲ್‌ನವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ತಹಶೀಲ್ದಾರ್ ಅವರ ಮೇಲೆ ಕ್ರಮ ಕೈಗೊಳ್ಳಲು ಉಪವಿಭಾಗಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಅವರ ಸೂಚನೆಯಂತೆ ಕ್ರಮ ವಹಿಸಲಾಗುವುದು ಎಂದು ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತಾರವೀಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next