Advertisement
ಮಗುವನ್ನು ಖರೀದಿಸಿದ ತಮಿಳುನಾಡಿನ ತೂತುಕುಡಿ ನಿವಾಸಿ ಟಿ.ಥಾಮಸ್ ಪಯಸ್ (55) ಹಾಗೂ ಈತನ ಪತ್ನಿ ಅರುಣ ಪಯಸ್ (45) ಹಾಗೂ ಅವರಿಗೆ ಮಗುವನ್ನು ಮಾರಾಟ ಮಾಡಿದ ಮೂವರು ಅಪಹರಣಕಾರರನ್ನೂ ಬಂಧಿಸಲಾಗಿದೆ. ಮಲತ್ತಹಳ್ಳಿ ನಿವಾಸಿ ಅನ್ಬುಕುಮಾರ್ ಅಲಿಯಾಸ್ ಕುಮಾರ್ (43), ಈತನ ಸಹಚರರಾದ ಕೆ.ಪಿ.ಅಗ್ರಹಾರ ನಿವಾಸಿ ಮಂಜುನಾಥ್ ಅಲಿಯಾಸ್ ಮಂಜ(19), ಯೋಗೇಶ್ ಕುಮಾರ್ (21) ಬಂಧಿತರು.
Related Articles
Advertisement
ಕುಮಾರನ ಸೂಚನೆ ಮೇರೆಗೆ ಸಹಚರರು ಮಗುವನ್ನು ಅಪಹರಿಸಿದ್ದಾರೆ. ಕೆಲ ಸಮಯದ ಬಳಿಕ ಮನೆಗೆ ಬಂದ ರಾಣಿ ಅವರಿಗೆ ಮಗು ಕಾಣೆಯಾಗಿರುವುದು ತಿಳಿದಿದೆ. ಕೂಡಲೇ ಅಕ್ಕಪಕ್ಕದ ಮನೆಯ ನಿವಾಸಿಗಳನ್ನು ವಿಚಾರಿಸಿದಾಗ, ಇಬ್ಬರು ಅಪರಿಚಿತ ಯುವಕರು ಬೈಕ್‌ನಲ್ಲಿ ಮಗು ಕರೆದೊಯ್ದ ಬಗ್ಗೆ ಮಾಹಿತಿ ನೀಡಿದ್ದರು. ಇದರಿಂದ ಆತಂಕಗೊಂಡ ರಾಣಿ, ಕೂಡಲೇ ಜ್ಞಾನಭಾರತಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಹೆಣ್ಣು ಮಗು ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಕೂಡಲೇ ರಾಣಿ ಅವರು ನೀಡಿದ ಪ್ರಾಥಮಿಕ ಮಾಹಿತಿ ಆಧರಿಸಿ ಅನ್ಬುಕುಮಾರ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಅಷ್ಟರಲ್ಲಿ ಯೋಗೇಶ್ ಮತ್ತು ಮಂಜುನಾಥ್ ಹಾಗೂ ಮಣಿ ನಾಯಂಡಹಳ್ಳಿ ಜಂಕ್ಷನ್ ಬಳಿ ತಮಿಳುನಾಡಿನ ಥಾಮಸ್ ಪಯಸ್ ದಂಪತಿಯಿಂದ 2 ಲಕ್ಷ ರೂ. ಪಡೆದು, ಮಗುವನ್ನು ಮಾರಾಟ ಮಾಡಿದ್ದರು. ಅಲ್ಲದೆ, ತಾವೇ ಬಾಡಿಗೆ ಕಾರು ಮಾಡಿ ತಮಿಳುನಾಡಿನ ತೂತುಕುಡಿಗೆ ಕಳುಹಿಸಿಕೊಟ್ಟಿದ್ದರು ಎಂದು ಪೊಲೀಸರು ಹೇಳಿದರು.
250 ಕಿ.ಮೀಟರ್ ಬೆನ್ನಟ್ಟಿದ್ದ ಪೊಲೀಸರು: ರಾತ್ರಿ 11ಗಂಟೆ ವೇಳೆಗಾಗಲೇ ಆರೋಪಿಗಳಾದ ಅನ್ಬುಕುಮಾರ್, ಯೋಗೇಶ್, ಮಂಜುನಾಥ್‌ನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದ ಪೊಲೀಸರು, ಮಗು ಖರೀದಿಸಿದ ತಮಿಳುನಾಡಿನ ದಂಪತಿ ಹೋಗುತ್ತಿರುವ ಮಾರ್ಗದ ಬಗ್ಗೆ ಆರೋಪಿಗಳಿಂದ ಮಾಹಿತಿ ಪಡೆದುಕೊಂಡರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರ ತಂಡ, ಥಾಮಸ್ ದಂಪತಿಯನ್ನು ಹಿಂಬಾಲಿಸಿದೆ. ಜ.17ರ ನಸುಕಿನ 5 ಗಂಟೆ ಸುಮಾರಿಗೆ ಸೇಲಂ ಬಳಿ ಥಾಮಸ್ ದಂಪತಿ ಹೋಗುತ್ತಿದ್ದ ಕಾರುನ್ನು ಅಡ್ಡಗಟ್ಟಿದ ಪೊಲೀಸರು, ಮಗುವನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಒಂದು ತಿಂಗಳ ಹಿಂದೆಯೇ ಸಂಚು: ಪ್ರಕರಣದ ಪ್ರಮುಖ ಆರೋಪಿ ಅನ್ಬುಕುಮಾರ್ ಹಾಗೂ ತಮಿಳುನಾಡಿನ ತೂತುಕುಡಿ ಮೂಲದ ಥಾಮಸ್ ದಂಪತಿ ನಡುವೆ ಒಂದು ತಿಂಗಳ ಹಿಂದೆಯೇ ಹೆಣ್ಣು ಮಗು ಅಪಹರಣದ ಕುರಿತು ಚರ್ಚೆ ನಡೆದಿತ್ತು. ಸಂಚು ಕೂಡ ರೂಪಿಸಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮಗು ಅಪಹರಣಕ್ಕೂ ಎರಡು ದಿನ ಮೊದಲೇ ಆರೋಪಿ ಅನ್ಬುಕುಮಾರ್, ತಮಿಳುನಾಡಿನಿಂದ ಥಾಮಸ್ ದಂಪತಿಯನ್ನು ಕರೆಸಿಕೊಂಡಿದ್ದ.
ಅಲ್ಲದೆ, ಇಬ್ಬರಿಗೂ ತನ್ನ ಮನೆಯಲ್ಲೇ ವಾಸ್ತವ್ಯ ಕಲ್ಪಿಸಿದ್ದ. ಹೀಗಾಗಿ ಮಗುವನ್ನು ಅಪಹರಣ ಮಾಡುತ್ತಿದ್ದಂತೆ ದಂಪತಿಗೆ ಮಗು ಒಪ್ಪಿಸಿ, ಹಣ ಪಡೆದು ಕಳುಹಿಸಿಕೊಟ್ಟಿದ್ದ ಎಂದು ಪೊಲೀಸರು ಹೇಳಿದರು. ಆದರೆ, ಮಗುವನ್ನು ಯಾವ ಕಾರಣಕ್ಕೆ ಅಪಹರಣ ಮಾಡಿದ್ದಾರೆ ಎಂಬುದು ತಿಳಿದಿಲ್ಲ. ದಂಪತಿಗೆ ಮಕ್ಕಳು ಇದ್ದಾರೋ? ಇಲ್ಲವೋ? ಅಥವಾ ದಂಪತಿ ಮಕ್ಕಳ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.