Advertisement

ತಬರನ ಕಥೆ ಹೇಳುತ್ತಿವೆ ಕಡತಗಳು!

03:26 PM Nov 17, 2018 | |

ವಿಜಯಪುರ: ರಾಜ್ಯದಾದ್ಯಂತ ಈ ತಿಂಗಳ 12ರಿಂದ ಕಂದಾಯ ಇಲಾಖೆ ಕಡತ ವಿಲೇವಾರಿ ಸಪ್ತಾಹ ಆರಂಭಗೊಂಡಿದೆ. ಜಿಲ್ಲೆಯ ಗಜಗರ್ಭದಂತಿರುವ ಅರ್ಜಿಗಳ ವಿಲೆ ಮಾಡಲು ಜಿಲ್ಲೆಯ ಕಂದಾಯ ಇಲಾಖೆಯ ಕಚೇರಿಗಳಲ್ಲಿ ಇದೀಗ ತ್ವರಿತ ವೇಗ ನೀಡಲಾಗಿದೆ. ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಕಡತ ವಿಲೇವಾರಿ ಪರಿಸ್ಥಿತಿ ಕಳೆದ 6 ತಿಂಗಳ ಹಿಂದೆ 64 ಸಾವಿರ ಮೀರಿದ್ದು, ಈಗಲೂ 11 ಸಾವಿರದಷ್ಟಿದ್ದು, ಪರಿಹಾರಕ್ಕೆ ಜನರು ತಬರನಂತೆ ಕಂದಾಯ ಕಚೇರಿಗಳಿಗೆ ಅಲೆಯುತ್ತಿದ್ದಾರೆ.

Advertisement

ಸಾಮಾನ್ಯವಾಗಿ ರೈತರು, ಸಾರ್ವಜನಿಕರು, ಭೂ ಹೀನರು ಹೀಗೆ ಯಾರೇ ಜಿಲ್ಲೆಯ ಜನರು ತಮ್ಮ ಸಮಸ್ಯೆ ಪರಿಹಾರಕ್ಕೆ ಕಂದಾಯ ಇಲಾಖೆ ಬಾಗಿಲು ಬಡಿಯುತ್ತಾರೆ. ಕಂದಾಯ ಇಲಾಖೆಯಿಂದ ಸಂಬಂಧಿಸಿದ ಇಲಾಖೆಗೆ ರವಾನೆ ಆಗುವ ಅರ್ಜಿಗಳ ವಿಷಯದಲ್ಲಿ ಆಯಾ ಇಲಾಖೆ ಅಧಿಕಾರಿಗಳು ಅವುಗಳ ವಿಲೇವಾರಿ ಮಾಡುವಲ್ಲಿ ಆಮೆ ಗತಿ ಅನುಸರಿಸುತ್ತಿವೆ. ಕಾರಣ ಪರಿಹಾರ ಕಾಣಬೇಕಾದ ಸಾರ್ವಜನಿಕರ ಅರ್ಜಿಗಳು ಹನುಮನ ಬಾಲದಂತೆ ಬೆಳೆಯುತ್ತಲೇ ಇರುತ್ತವೆ. ಹೀಗಾಗಿ ಇದೀಗ ಕಂದಾಯ ಇಲಾಖೆ ಕಡತ ವಿಲೇವಾರಿ ಸಪ್ತಾಹ ಮೂಲಕ ಸಾರ್ವಜನಿಕರ ಸಮಸ್ಯೆ ನೀಗಿಸಲು ಮುಂದಾಗಿರುವುದು ಜಿಲ್ಲೆಯ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಡುತ್ತಿದೆ.

ಅಚ್ಚರಿ ವಿಷಯ ಎಂದರೆ ಜಿಲ್ಲಾಧಿಕಾರಿ ಕಚೇರಿಗಿಂತ ತಾಲೂಕು ಕೇಂದ್ರಗಳ ತಹಶೀಲ್ದಾರ್‌ ಕಚೇರಿಗಳಲ್ಲೇ ಅಧಿಕ ಸಂಖ್ಯೆಯಲ್ಲಿ ಅರ್ಜಿಗಳು ಪರಿಹಾರ ಸಿಗದೇ ಕೊಳೆಯುತ್ತಿವೆ. ಇದು ಕಂದಾಯ ಇಲಾಖೆಯ ಕೆಳ ಹಂತದ ಆಡಳಿತದ ಕಾರ್ಯವೈಖರಿ ಹೇಗಿದೆ ಎಂಬುದನ್ನು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿ ನೀಡುತ್ತಿದೆ. 

ಕಳೆದ ಮೇ 22ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ 537 ಅರ್ಜಿ ಬಾಕಿ ಇದ್ದರೆ, ನವೆಂಬರ್‌ 9ರಂದು 4387 ಅರ್ಜಿ ಬಾಕಿ ಇದ್ದರೆ, ಈಗ 811 ಅರ್ಜಿಗಳು ವಿಕೇವಾರಿಗೆ ಕಾಯುತ್ತಿವೆ. ಇನ್ನು ವಿಜಯಪುರ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕಳೆದ ನವೆಂಬರ್‌ ಮೊದಲ ವಾರದ ಹಂತದಲ್ಲಿ 5109 ಅರ್ಜಿ ಇತ್ಯರ್ಥಕ್ಕೆ ಕಾಯುತ್ತಿವೆ. ಇನ್ನು ಇಂಡಿ ಸಹಾಯಕ ಆಯುಕ್ತರ ಕಚೇರಿ ಕಥೆ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಇಲ್ಲಿ ನವೆಂಬರ್‌ 9ಕ್ಕೆ ಮುನ್ನ 4,458 ಅರ್ಜಿಗಳು ವಿಲೇವಾರಿಗೆ ಕಾಯುತ್ತಿದ್ದವು. 

ಇನ್ನು ತಹಶೀಲ್ದಾರ್‌ ಕಚೇರಿಗಳ ಅರ್ಜಿ ವಿಲೇವಾರಿ ಕಾರ್ಯವೈಖರಿ ಹೇಗಿದೆ ಎಂದರೆ ವಿಜಯಪುರ ತಹಶೀಲ್ದಾರ್‌ ಕಚೇರಿಯಲ್ಲಿ ವಾರದ ಹಿಂದೆ 6,419ರಷ್ಟಿದ್ದದ್ದು ಈಗಲೂ 2395 ಅರ್ಜಿ ಮೋಕ್ಷಕ್ಕೆ ಕಾಯುತ್ತಿವೆ. ಬಸವನಬಾಗೇವಾಡಿ ಕಚೇರಿಯಲ್ಲಿ ವಾರದ ಹಿಂದೆ 6,651 ಅರ್ಜಿಗಳು ಬಾಕಿ ಇದ್ದರೆ, ಮುದ್ದೇಬಿಹಾಳ ತಹಸೀಲ್‌ನಲ್ಲಿ 5,408 ಅರ್ಜಿಗಳು ಇದೇ ಸ್ಥಿತಿಯಲ್ಲಿವೆ. 

Advertisement

ನವೆಂಬರ್‌ 9ಕ್ಕೆ ಇಂಡಿ ಕಂದಾಯ ತಾಲೂಕು ಕಚೇರಿಯಲ್ಲಿ ಬರೋಬ್ಬರಿ 19008 ಅರ್ಜಿ ಕಾಯುತ್ತಿದ್ದರೆ, ಸಿಂದಗಿ ತಾಲೂಕಿನ ಕಚೇರಿಯಲ್ಲಿ 13,349 ವಿಲೇವಾರಿಗೆ ಕಾಯುತ್ತಿದ್ದವು. ಈಗಲೂ ಈ ಕಚೇರಿಯಲ್ಲಿ 4,875 ಅರ್ಜಿಗಳು ಧೂಳು ಕೊಡವಿಕೊಳ್ಳಲು ಹೆಣಗುತ್ತಿರುವುದೇ ಜಿಲ್ಲೆಯ ಕಂದಾಯ ಇಲಾಖೆಯ ಆಡಳಿತ ದುಸ್ಥಿತಿಗೆ ಸಾಕ್ಷಿ.

ಜಿಲ್ಲೆಯಲ್ಲಿ ಕಳೆದ ಮೇ ತಿಂಗಳಲ್ಲಿ 6,754 ಅರ್ಜಿಗಳು ವಿಲೇವಾರಿ ಆಗದೇ ಇದ್ದದ್ದು, ನವೆಂಬರ್‌ ಮೊದಲ ವಾರದಲ್ಲಿ 65 ಸಾವಿರ ಗಡಿಯಲ್ಲಿ ಬಂದು ನಿಂತಿದ್ದವು. ಕಂದಾಯ ಇಲಾಖೆ ಕಡತ ವಿಲೇವಾರಿ ಸಪ್ತಾಹದ ಈ ಹಂತದಲ್ಲಿ ಇನ್ನೂ 11 ಸಾವಿರ ಅರ್ಜಿಗಳು ತಬರನ ಕಥೆಯನ್ನೇ ಹೇಳುತ್ತಿವೆ.

ಜಿಲ್ಲಾಧಿಕಾರಿ ಎಸ್‌.ಬಿ. ಶೆಟ್ಟೆಣ್ಣವರ ಅವರು ಕಂದಾಯ ಇಲಾಖೆ ಕಡತ ವಿಲೇವಾರಿ ಸಪ್ತಾಹ ಮುಕ್ತಾಯ ಕಾಣಲಿರುವ
ನವೆಂಬರ್‌ 18ರೊಳಗೆ ಕಡತ ವಿಲೆಯನ್ನು ಶೂನ್ಯಕ್ಕೆ ತರುವಂತೆ ಸೂಚನೆ ನೀಡಿದ್ದಾರೆ. ಆದರೆ ಕೆಳ ಹಂತದ ಅಧಿಕಾರಿಗಳ ಸ್ಪಂದನೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next