ಮೆಲ್ಬರ್ನ್: ಇಂಗ್ಲೆಂಡ್ನ 5 ವಿಕೆಟ್ ಜಯಭೇರಿಯೊಂದಿಗೆ 2022ನೇ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ತೆರೆ ಬಿದ್ದಿದೆ.
ಸಂಪ್ರದಾಯದಂತೆ ಇಲ್ಲಿನ ಸಾಧಕ ಆಟಗಾರರನ್ನೊಳಗೊಂಡ ಹನ್ನೊಂದು ಸದಸ್ಯರ “ಬಹುಮೂಲ್ಯ ತಂಡ’ವೊಂದನ್ನು ಐಸಿಸಿ ಪ್ರಕಟಿಸಿದೆ. ಭಾರತದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಇದರಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ 12ನೇ ಆಟಗಾರನ ಗೌರವ ಲಭಿಸಿದೆ.
ಒಟ್ಟು 6 ರಾಷ್ಟ್ರಗಳ ಆಟಗಾರರು ಈ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ನಾಯಕ ಹಾಗೂ ವಿಕೆಟ್ ಕೀಪರ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಆದರೆ ಈ ಎರಡೂ ಗೌರವಕ್ಕೆ ಜಾಸ್ ಬಟ್ಲರ್ ಅರ್ಹ ಆಯ್ಕೆ ಎಂಬುದರಲ್ಲಿ ಅನುಮಾನವಿಲ್ಲ.
ಚಾಂಪಿಯನ್ ಇಂಗ್ಲೆಂಡ್ ತಂಡದ ಗರಿಷ್ಠ ನಾಲ್ವರು ಕ್ರಿಕೆಟಿಗರು ಇದರಲ್ಲಿದ್ದಾರೆ. ಇವರೆಂದರೆ ಆರಂಭಿಕ ಜೋಡಿ ಜಾಸ್ ಬಟ್ಲರ್, ಅಲೆಕ್ಸ್ ಹೇಲ್ಸ್, ಪಂದ್ಯಶ್ರೇಷ್ಠ-ಸರಣಿಶ್ರೇಷ್ಠ ಪ್ರಶಸ್ತಿಗಳೆರಡನ್ನೂ ಎತ್ತಿದ ಆಲ್ರೌಂಡರ್ ಸ್ಯಾಮ್ ಕರನ್ ಮತ್ತು ವೇಗಿ ಮಾರ್ಕ್ ವುಡ್.
Related Articles
ಕೊಹ್ಲಿ ಸರ್ವಾಧಿಕ ರನ್
ಮಧ್ಯಮ ಕ್ರಮಾಂಕದ ಎರಡು ಸ್ಥಾನ ಭಾರತಕ್ಕೆ ಮೀಸಲಾಗಿದೆ. ಇವರಲ್ಲಿ ವಿರಾಟ್ ಕೊಹ್ಲಿ ಕೂಟದಲ್ಲೇ ಸರ್ವಾಧಿಕ 296 ರನ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸರಾಸರಿ 98.66. ಪಾಕ್ ಎದುರಿನ ಆರಂಭಿಕ ಪಂದ್ಯದಲ್ಲಿ ಅಜೇಯ 82 ರನ್ ಬಾರಿಸುವ ಮೂಲಕ ಕೊಹ್ಲಿ ಅಭಿಯಾನ ಮೊದಲ್ಗೊಂಡಿತ್ತು. ಬಳಿಕ ಬಾಂಗ್ಲಾದೇಶ ವಿರುದ್ಧ ಅಜೇಯ 64, ನೆದರ್ಲೆಂಡ್ಸ್ ವಿರುದ್ಧ ಅಜೇಯ 62 ಹಾಗೂ ಇಂಗ್ಲೆಂಡ್ ಎದುರಿನ ಸೆಮಿಫೈನಲ್ನಲ್ಲಿ 50 ರನ್ ಹೊಡೆದಿದ್ದರು.
ಸೂರ್ಯಕುಮಾರ್ ಯಾದವ್ ಗರಿಷ್ಠ ರನ್ ಸಾಧಕರ ಯಾದಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ (239 ರನ್). 3 ಅರ್ಧ ಶತಕಗಳು ಇದರಲ್ಲಿ ಸೇರಿವೆ. ನೆದರ್ಲೆಂಡ್ಸ್ ಎದುರು ಔಟಾಗದೆ 51, ದಕ್ಷಿಣ ಆಫ್ರಿಕಾ ವಿರುದ್ಧ 68 ಹಾಗೂ ಜಿಂಬಾಬ್ವೆ ವಿರುದ್ಧ ಕೇವಲ 25 ಎಸೆತಗಳಲ್ಲಿ ಅಜೇಯ 61 ರನ್ ಸಿಡಿಸಿದ ಸಾಹಸ ಸೂರ್ಯಕುಮಾರ್ ಅವರದು.
ರಝ ಆಲ್ರಂಡ್ ಸಾಧನೆ
5ನೇ ಹಾಗೂ 6ನೇ ಸ್ಥಾನ ಜಿಂಬಾಬ್ವೆಯ ಸಿಕಂದರ್ ರಝ ಮತ್ತು ನ್ಯೂಜಿಲ್ಯಾಂಡ್ನ ಗ್ಲೆನ್ ಫಿಲಿಪ್ಸ್ ಪಾಲಾಗಿದೆ. ಇವರಲ್ಲಿ ಫಿಲಿಪ್ಸ್ ಲಂಕಾ ವಿರುದ್ಧ ಶತಕ ಬಾರಿಸಿ ಮೆರೆದಿದ್ದರು. ಇಂಗ್ಲೆಂಡ್ ಎದುರು 62 ರನ್ ಬಾರಿಸಿದ್ದರು.
ಸಿಕಂದರ್ ರಝ ಅವರದು ಆಲ್ರೌಂಡ್ ಸಾಧನೆ. 219 ರನ್ ಜತೆಗೆ 10 ವಿಕೆಟ್ ಹಾರಿಸಿದ್ದರು. ಈ ತಂಡದ ಮತ್ತೋರ್ವ ಸವ್ಯಸಾಚಿ ಪಾಕಿಸ್ಥಾನದ ಶಾದಾಬ್ ಖಾನ್. 92 ರನ್ ಹಾಗೂ 11 ವಿಕೆಟ್ ಕೆಡವಿದ ಸಾಧನೆ ಶಾದಾಬ್ ಅವರದು. ಈ ತಂಡದ ಏಕೈಕ ಸ್ಪಿನ್ನರ್ ಕೂಡ ಹೌದು.
ಎಡಗೈ ಸೀಮರ್ ಸ್ಯಾಮ್ ಕರನ್ ಫೈನಲ್ ಪಂದ್ಯದ ಹೀರೋ. ಕೇವಲ 12 ರನ್ ವೆಚ್ಚದಲ್ಲಿ 3 ವಿಕೆಟ್ ಉಡಾಯಿಸಿದ ಸಾಹಸಿ. ಮತ್ತೋರ್ವ ವೇಗಿ ಆ್ಯನ್ರಿಚ್ ನೋರ್ಜೆ.
ವಿಶ್ವಕಪ್ ಸಾಧಕರ ತಂಡ
1 ಅಲೆಕ್ಸ್ ಹೇಲ್ಸ್
2 ಜಾಸ್ ಬಟ್ಲರ್
3 ವಿರಾಟ್ ಕೊಹ್ಲಿ
4 ಸೂರ್ಯಕುಮಾರ್ ಯಾದವ್
5 ಗ್ಲೆನ್ ಫಿಲಿಪ್ಸ್
6 ಸಿಕಂದರ್ ರಝ
7 ಶಾದಾಬ್ ಖಾನ್
8 ಸ್ಯಾಮ್ ಕರನ್
9 ಆ್ಯನ್ರಿಚ್ ನೋರ್ಜೆ
10 ಮಾರ್ಕ್ ವುಡ್
11 ಶಾಹೀನ್ ಶಾ ಅಫ್ರಿದಿ
12 ಹಾರ್ದಿಕ್ ಪಾಂಡ್ಯ