ನಾರ್ತ್ ಸೌಂಡ್ (ಆ್ಯಂಟಿಗುವಾ): ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ದ್ವಿತೀಯ ಸುತ್ತಿನ ಸ್ಪರ್ಧೆಗೆ ಕ್ಷಣಗಣನೆ ಮೊದಲ್ಗೊಂಡಿದೆ. ಲೀಗ್ ಹಂತದಿಂದ ಮೇಲೇರಿ ಬಂದ 8 ತಂಡಗಳ ನಡುವಿನ “ಸೂಪರ್-8′ ಸಮರ ಬುಧವಾರದಿಂದ ವೆಸ್ಟ್ ಇಂಡೀಸ್‌ನಲ್ಲಿ ಆರಂಭಗೊಳ್ಳಲಿದೆ. ಇದೇ ಮೊದಲ ಸಲ ವಿಶ್ವಕಪ್‌ನಲ್ಲಿ ಪಾಲ್ಗೊಂಡು ದ್ವಿತೀಯ ಸುತ್ತಿಗೇರಿದ ಖುಷಿಯಲ್ಲಿರುವ ಅಮೆರಿಕ ಮತ್ತು ಬ್ಯಾಟಿಂಗ್ ಚಿಂತೆಯಲ್ಲಿರುವ ದಕ್ಷಿಣ ಆಫ್ರಿಕಾ ತಂಡಗಳು ಮೊದಲ ಪಂದ್ಯದಲ್ಲಿ ಎದುರಾಗಲಿವೆ.
ಬೇರೆ ಬೇರೆ ರಾಷ್ಟ್ರಗಳ ಪ್ರತಿಭಾ ನ್ವಿತ ಆಟಗಾರರನ್ನು ಹೊಂದಿರುವ ಅಮೆರಿಕ “ಎ’ ವಿಭಾಗದಲ್ಲಿ ದ್ವಿತೀಯ ಸ್ಥಾನಿಯಾಗಿ ಮೂಡಿಬಂದ ತಂಡ. ಉದ್ಘಾಟನ ಪಂದ್ಯದಲ್ಲಿ ಕೆನಡಾವನ್ನು 7 ವಿಕೆಟ್‌ಗಳಿಂದ ಮಣಿಸಿದ ಬಳಿಕ, ನೆಚ್ಚಿನ ಪಾಕಿಸ್ಥಾನವನ್ನು ಸೂಪರ್ ಓವರ್‌ನಲ್ಲಿ ಮಣ್ಣು ಮುಕ್ಕಿಸಿದ್ದು ಅಮೆರಿಕದ ಪರಾಕ್ರಮಕ್ಕೆ ಸಾಕ್ಷಿ.
ಲೀಗ್‌ನಲ್ಲಿ ಯುಎಸ್‌ಎಯ “ಅಗ್ರೆಸ್ಸೀವ್ ಬ್ರ್ಯಾಂಡ್ ಆಫ್ ಕ್ರಿಕೆಟ್’ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು. ಆದರಿನ್ನು ತವರಿನಾಚೆ ಹೇಗೆ ಪ್ರದರ್ಶನ ನೀಡಲಿದೆ ಎಂಬುದು ಮುಖ್ಯ. ಲೀಗ್ ಪಂದ್ಯಗಳನ್ನು ಅಮೆರಿಕದಲ್ಲೇ ಆಡಿದ ಮೊನಾಂಕ್ ಪಟೇಲ್ ಪಡೆಯಿನ್ನು ವೆಸ್ಟ್ ಇಂಡೀಸ್ ಪಿಚ್‌ಗಳಿಗೆ ಹೊಂದಿಕೊಳ್ಳಬೇಕಿದೆ.
“ಸೂಪರ್-8 ಸವಾಲನ್ನು ನಾವು ಕಾತರದಿಂದ ಎದುರು ನೋಡು ತ್ತಿದ್ದೇವೆ. ಕಳೆದ ಎರಡು ವಾರಗಳಿಂದ ನಮ್ಮ ಆಟ ಎಲ್ಲರ ಗಮನ ಸೆಳೆದಿತ್ತು. ಐಸಿಸಿಯ ಫುಲ್ ಮೆಂಬರ್ ತಂಡಗಳನ್ನು ಸೋಲಿ ಸಲು ಇದು ಸ್ಫೂರ್ತಿ ಆಗಲಿದೆ’ ಎಂಬುದಾಗಿ ಯುಎಸ್‌ಎ ಉಪನಾಯಕ, ಬಿಗ್ ಹಿಟ್ಟರ್ ಆರನ್ ಜೋನ್ಸ್ ಹೇಳಿದ್ದಾರೆ.
ನಾಯಕ ಮೊನಾಂಕ್ ಪಟೇಲ್ ಗಾಯಾಳಾದ ಕಾರಣ ಭಾರತ ಹಾಗೂ ಐರ್ಲೆಂಡ್ ವಿರುದ್ಧ ಆಡಿರಲಿಲ್ಲ. ಸೂಪರ್-8ನಲ್ಲಿ ಮರಳಿ ತಂಡವನ್ನು ಮುನ್ನಡೆಸಲಿದ್ದಾರೆ. ಅಮೆರಿಕದ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸಿದ ಸೌರಭ್ ನೇತ್ರಾವಲ್ಕರ್, ನೋಸ್ತುಶ್ ಕೆಂಜಿಗೆ, ಹರ್ಮೀತ್ ಸಿಂಗ್, ಕೋರಿ ಆ್ಯಂಡರ್ಸನ್, ಸ್ಟೀವನ್ ಟೇಲರ್ ಅವರೆಲ್ಲ ಇದೇ ಲಯದಲ್ಲಿ ಸಾಗಿದರೆ ಸ್ಪರ್ಧೆ ರೋಚಕಗೊಳ್ಳಲಿದೆ.
ಇನ್ನೂ 120ರ ಗಡಿ ದಾಟಿಲ್ಲ
ದಕ್ಷಿಣ ಆಫ್ರಿಕಾ ಬೌಲಿಂಗ್‌ನಲ್ಲಿ ಮಿಂಚಿದರೂ ಬ್ಯಾಟಿಂಗ್‌ನಲ್ಲಿ ಪರದಾಡುತ್ತ ಬಂದಿದೆ. ಕ್ವಿಂಟನ್ ಡಿ ಕಾಕ್, ರೀಝ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಟ್ರಿಸ್ಟನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಐಡನ್ ಮಾರ್ಕ್‌ರಮ್ ಇನ್ನೂ ಫುಲ್ ಜೋಶ್ ತೋರಿಲ್ಲ. ಲೀಗ್‌ನಲ್ಲಿ 120ರ ಗಡಿಯನ್ನೇ ದಾಟಿಲ್ಲ ಎಂಬುದು ಹರಿಣಗಳ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿ. ನೇಪಾಲ ವಿರುದ್ಧ ಸೋಲಿನ ದವಡೆಯಿಂದ ಬಚಾವಾಗಿ ಬಂದ ತಂಡವಿದು. ಗೆಲುವಿನ ಅಂತರ ಒಂದೇ ರನ್! ವಿಂಡೀಸ್ ಟ್ರ್ಯಾಕ್‌ಗಳಲ್ಲಿ ರನ್ ಹರಿವು ಇರುವುದರಿಂದ ಹರಿಣಗಳ ಪಡೆಯ ಬ್ಯಾಟಿಂಗ್ ಕ್ಲಿಕ್ ಆದೀತೆಂಬ ನಿರೀಕ್ಷೆ ಇರಿಸಿ ಕೊಳ್ಳಬಹುದು.
ದಕ್ಷಿಣ ಆಫ್ರಿಕಾ ಬೌಲಿಂಗ್ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಕೂಟಕ್ಕೂ ಮುನ್ನ ವೇಗಿ ಆ್ಯನ್ರಿಚ್ ನೋರ್ಜೆ ಅವರ ಫಾರ್ಮ್ ಬಗ್ಗೆ ಅನುಮಾನವಿತ್ತು. ಆದರೆ ಅವರೀಗ ಘಾತಕವಾಗಿ ಪರಿಣಮಿಸಿದ್ದಾರೆ. ರಬಾಡ, ಶಮಿÕ, ಮಹಾರಾಜ್, ಜಾನ್ಸೆನ್ ಅವರೆಲ್ಲರ ಆಕ್ರಮಣ ಮುಂದುವರಿದರೆ ಅಮೆರಿಕದ ಹಾದಿ ಕಠಿನವಾದೀತು.