Advertisement
ತವರಲ್ಲೇ ನಡೆದ ಕಳೆದ ಏಕದಿನ ವಿಶ್ವಕಪ್ ವೇಳೆ ನೆಚ್ಚಿನ ತಂಡವಾಗಿದ್ದ ಭಾರತ, ಅಜೇಯವಾಗಿ ಫೈನಲ್ ತನಕ ಅಭಿಯಾನ ನಡೆಸಿತ್ತು. ಟಿ20 ವಿಶ್ವಕಪ್‌ನಲ್ಲೂ ಭಾರತ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ. ಆದರೆ ರೋಹಿತ್ ಪಡೆಯನ್ನು “ಫೇವರಿಟ್’ ಎಂದು ಗುರುತಿಸಲಾಗದು. “ಎ’ ವಿಭಾಗದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನದ ಸವಾಲು ಎದುರಾಗಲಿದೆ. ಆತಿಥೇಯ ಅಮೆರಿಕ ಕೂಡ ಅಪಾಯಕಾರಿ. ಕೆನಡಾವನ್ನು ಲೆಕ್ಕದ ಭರ್ತಿಯ ತಂಡ ಎನ್ನಬಹುದು.
Related Articles
Advertisement
ಇದು ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಆಡುತ್ತಿರುವ ಕೊನೆಯ ವಿಶ್ವಕಪ್ ಆಗಿರುವ ಎಲ್ಲ ಸಾಧ್ಯತೆ ಇದೆ. ಈ ಸಲವೂ ಇವರಿಬ್ಬರು ಆಡುವ ಸಾಧ್ಯತೆ ಇಲ್ಲ ಎಂಬುದು ಕೆಲವು ತಿಂಗಳ ಹಿಂದೆ ಸುದ್ದಿಯಾಗಿತ್ತು. ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿಸುವ ಕುರಿತೂ ಮಾತುಕತೆ ನಡೆದಿತ್ತು. ಅಂತಿಮವಾಗಿ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಆಯ್ಕೆಯಾದರು.
ಈಗ ಇವರಿಬ್ಬರೇ ಟೀಮ್ ಇಂಡಿಯಾ ಇನ್ನಿಂಗ್ಸ್ ಆರಂಭಿಸಬಹುದೇ ಎಂಬುದೊಂದು ಪ್ರಶ್ನೆ. ಯಶಸ್ವಿ ಜೈಸ್ವಾಲ್ ಓಪನಿಂಗ್ ರೇಸ್‌ನಲ್ಲಿರುವ ಮತ್ತೋರ್ವ ಆಟಗಾರ. ಒಂದು ವೇಳೆ ಕೊಹ್ಲಿ ಓಪನಿಂಗ್ ಬಂದರೆ ಜೈಸ್ವಾಲ್ ವನ್‌ಡೌನ್‌ನಲ್ಲಿ ಬರಬಹುದು. ಅನಂತರದ ಬ್ಯಾಟಿಂಗ್ ಲೈನ್‌ಅಪ್ ನಿರೀಕ್ಷಿತ. ಸೂರ್ಯ, ಪಂತ್, ಪಾಂಡ್ಯ, ಜಡೇಜ… ಹೀಗೆ ಮುಂದುವರಿಯುತ್ತದೆ. ಕಳೆದ ಐಪಿಎಲ್ ಸಾಧನೆಯನ್ನೇ ಮಾನದಂಡವಾಗಿ ಇರಿಸಿಕೊಂಡರೆ ಕೊಹ್ಲಿ ಹೊರತುಪಡಿಸಿ ಉಳಿದವರ್ಯಾರೂ ರನ್ ಪ್ರವಾಹ ಹರಿಸಿಲ್ಲ. ಆದರೆ ನ್ಯೂಯಾರ್ಕ್‌ನಲ್ಲಿ ರನ್ ಪ್ರವಾಹ ಹರಿದು ಬರುವುದು ಕೂಡ ಅನುಮಾನವೇ.
ನಿಧಾನ ಗತಿಯ ಟ್ರ್ಯಾಕ್ ಮೇಲೆ ಭಾರತದ ಬೌಲಿಂಗ್ ಹೆಚ್ಚಿನ ಯಶಸ್ಸು ಕಾಣುವ ಎಲ್ಲ ಸಾಧ್ಯತೆ ಇದೆ. ಬುಮ್ರಾ, ಚಹಲ್, ಅಕ್ಷರ್, ಕುಲದೀಪ್ ಘಾತಕವಾಗಿ ಪರಿಗಣಿಸಬಹುದು. ಇತ್ತ ಭಾರತದ ಬ್ಯಾಟರ್ ಜಾರ್ಜ್ ಡಾಕ್ರೆಲ್ ಅವರ ಎಡಗೈ ಸ್ಪಿನ್ ದಾಳಿಯನ್ನು ಹೇಗೆ ನಿಭಾಯಿಸಿಯಾರು ಎಂಬ ಕುತೂಹಲವಿದೆ.
ಐರ್ಲೆಂಡ್ ಈ ಕೂಟದ ಅಪಾಯಕಾರಿ ತಂಡಗಳಲ್ಲೊಂದು. ನಾಯಕ ಸ್ಟರ್ಲಿಂಗ್, ಬಾಲ್ಬಿರ್ನಿ, ಕ್ಯಾಂಫರ್, ಲಿಟ್ಲ, ಟ್ಯುಕರ್ ಅವರೆಲ್ಲ ಅಂತಾರಾಷ್ಟ್ರೀಯ ಕ್ರಿಕೆಟಿನ ಧಾರಾಳ ಅನುಭವಿಗಳು.
ಒಮ್ಮೆಯಷ್ಟೇ ಮುಖಾಮುಖಿ
ಭಾರತ-ಐರ್ಲೆಂಡ್ ಟಿ20 ವಿಶ್ವಕಪ್‌ನಲ್ಲಿ ಒಮ್ಮೆ ಯಷ್ಟೇ ಎದುರಾಗಿವೆ. ಅದು 2009ರ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ 18 ಓವರ್‌ಗಳ ಪಂದ್ಯವಾಗಿತ್ತು. ಐರ್ಲೆಂಡ್ 8ಕ್ಕೆ 112 ರನ್ನಿಗೆ ಕುಸಿದಿತ್ತು. ಭಾರತ 15 ಎಸೆತ ಉಳಿದಿರುವಾಗಲೇ 8 ವಿಕೆಟ್‌ಗಳ ಜಯ ಸಾಧಿಸಿತ್ತು. ಜಹೀರ್ ಖಾನ್ 4 ವಿಕೆಟ್ ಉರುಳಿಸಿದರೆ, ರೋಹಿತ್ ಅಜೇಯ 52, ಗಂಭೀರ್ 37 ರನ್ ಮಾಡಿದ್ದರು.