Advertisement

ಭಾರತದಿಂದ ಟಿ20 ವಿಶ್ವಕಪ್‌ ಸ್ಥಳಾಂತರ ಖಚಿತ? UAEಗೆ ಸ್ಥಳಾಂತರಿಸಲು ಐಸಿಸಿಗೆ ಆಂತರಿಕ ಮಾಹಿತಿ

03:44 AM Jun 06, 2021 | Team Udayavani |

ಹೊಸದಿಲ್ಲಿ: ಪ್ರತಿಷ್ಠಿತ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಾ ವಳಿ ಭಾರತದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದು ವರ್ಷಾಂತ್ಯ ಯುಎಇಯಲ್ಲಿ ನಡೆಯುವುದು ಬಹುತೇಕ ಖಚಿತಗೊಂಡಿದೆ. ಹೆಸರು ಹೇಳಬಯಸದ ಬಿಸಿಸಿಐ ಉನ್ನತ ಅಧಿಕಾರಿಯೊಬ್ಬರು ಪಿಟಿಐಗೆ ಈ ಮಾಹಿತಿ ಒದಗಿಸಿದ್ದಾರೆ.

Advertisement

ಕಳೆದ ಐಸಿಸಿ ಸಭೆಯಲ್ಲಿ, ಟಿ20 ವಿಶ್ವಕಪ್‌ ಆತಿಥ್ಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಐಸಿಸಿ ಬಳಿ ಒಂದು ತಿಂಗಳ ಕಾಲಾವಕಾಶ ಕೇಳಿತ್ತು. ಆದರೆ ಅಂದೇ ಈ ಪಂದ್ಯಾವಳಿಯನ್ನು ಯುಎಇಯಲ್ಲಿ ನಡೆಸಲು ಸಿದ್ಧತೆ ಆರಂಭಿಸುವಂತೆ ಬಿಸಿಸಿಐ ಐಸಿಸಿಗೆ ಆಂತರಿಕ ಮಾಹಿತಿ ನೀಡಿದೆ ಎಂಬುದಾಗಿ ಅಧಿಕಾರಿ ತಿಳಿಸಿದರು.

ಯುಎಇ ಈ ಕೂಟದ ಮೀಸಲು ತಾಣವಾಗಿದೆ. ಇಲ್ಲಿನ ಶಾರ್ಜಾ, ದುಬಾೖ, ಅಬುಧಾಬಿ ಜತೆಯಲ್ಲೇ ಒಮಾನ್‌ ರಾಜಧಾನಿ ಮಸ್ಕತ್‌ನಲ್ಲೂ ಪಂದ್ಯಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂಬುದು ಮತ್ತೂಂದು ಬ್ರೇಕಿಂಗ್‌ ನ್ಯೂಸ್‌. ಅಕ್ಟೋಬರ್‌ ಕೊನೆಯ ವಾರ ಪಂದ್ಯಾವಳಿ ಆರಂಭಗೊಳ್ಳಲಿದೆ.

ಮಸ್ಕತ್‌ ನಾಲ್ಕನೇ ತಾಣ
“ಹೌದು, ಕಳೆದ ಐಸಿಸಿ ಮಂಡಳಿ ಸಭೆಯಲ್ಲಿ ಟಿ20 ವಿಶ್ವಕಪ್‌ ಆತಿಥ್ಯದ ನಿರ್ಧಾರವನ್ನು ಪ್ರಕಟಿಸಲು ಬಿಸಿಸಿಐ ಕಾಲಾವಕಾಶ ಕೇಳಿತ್ತು. ಆದರೆ ಆಯೋಜನೆಯ ಹಕ್ಕನ್ನಷ್ಟೇ ಉಳಿಸಿಕೊಂಡು ಯುಎಇ ಮತ್ತು ಒಮಾನ್‌ನಲ್ಲಿ ಕೂಟವನ್ನು ಆಯೋಜಿಸಲು ಅಭ್ಯಂತರವಿಲ್ಲ ಎಂದು ಆಂತರಿಕವಾಗಿ ಸೂಚಿಸಿದೆ’ ಎಂದು ಅಧಿಕಾರಿ ಹೇಳಿದ್ದಾರೆ.

“ಯುಎಇ ಆವೃತ್ತಿಯ ಐಪಿಎಲ್‌ ಅಕ್ಟೋಬರ್‌ 10ಕ್ಕೆ ಮುಗಿಯಲಿದೆ. ಟಿ20 ವಿಶ್ವಕಪ್‌ ನವೆಂಬರ್‌ನಲ್ಲಿ ಮೊದಲ್ಗೊಳ್ಳುತ್ತದೆ. ನಡುವೆ 3 ವಾರಗಳ ಅವಧಿಯಷ್ಟೇ ಉಳಿಯುತ್ತದೆ. ವಿಶ್ವ ಮಟ್ಟದ ಕ್ರಿಕೆಟ್‌ ಕೂಟಕ್ಕೆ ಪಿಚ್‌ ನಿರ್ಮಿಸಲು, ಇನ್ನಿತರ ಸಿದ್ಧತೆ ಮಾಡಿಕೊಳ್ಳಲು ಸಾಕಷ್ಟು ಸಮಯ ತಗಲುತ್ತದೆ. ಹೀಗಾಗಿ ಮಸ್ಕತ್‌ನಲ್ಲಿ ಮೊದಲ ವಾರದ ಪಂದ್ಯಗಳನ್ನು ಆಯೋಜಿಸುವ ಯೋಜನೆ ಇದೆ’ ಎಂದು ಅವರು ಹೇಳಿದರು.

Advertisement

ಕಾಡುತಿದೆ ಕೊರೊನಾ ಭೀತಿ
“ಕೊರೊನಾದಿಂದಾಗಿ ಭಾರತದಲ್ಲಿ ಈ ಪಂದ್ಯಾವಳಿ ನಡೆ ಸುವ ಬಗ್ಗೆ ಗ್ಯಾರಂಟಿ ನೀಡಲು ಬಿಸಿಸಿಐಗೆ ಖಂಡಿತ ಸಾಧ್ಯವಿಲ್ಲ. ಈಗಲೇ ನಮ್ಮಲ್ಲಿ 1,20,000ದಷ್ಟು ಪಾಸಿಟಿವ್‌ ಕೇಸ್‌ಗಳಿವೆ. ಹೀಗಿರುವಾಗ ಜೂನ್‌ 28ಕ್ಕೆ “ಯಸ್‌’ ಎಂದು ಹೇಳಲಾಗದು. ವರ್ಷಾಂತ್ಯ ಕೊರೊನಾ ಪರಿಸ್ಥಿತಿ ಹೇಗೆ ನಿಂತೀತು, 3ನೇ ಅಲೆ ಹುಟ್ಟಿಕೊಂಡೀತೇ ಎಂಬೆಲ್ಲ ಪ್ರಶ್ನೆಗಳಿರುವಾಗ ವಿಶ್ವಕಪ್‌ ಆತಿಥ್ಯದ ಬಗ್ಗೆ ಖಚಿತ ನಿರ್ಧಾರ ತೆಗೆದುಕೊಳ್ಳುವುದಾದರೂ ಹೇಗೆ?’ ಎಂದು ಅಧಿಕಾರಿ ಪ್ರಶ್ನಿಸಿದರು.

ವಿಶ್ವಕಪ್‌ ಐಪಿಎಲ್‌ನಂತಲ್ಲ…
“ಇಲ್ಲಿ ಇನ್ನೊಂದು ಮುಖ್ಯ ಸಂಗತಿ ಇದೆ. ಸೆಪ್ಟಂಬರ್‌ನಲ್ಲಿ 8 ತಂಡಗಳ ನಡುವಿನ ಐಪಿಎಲ್‌ ಕೂಟವನ್ನು ಭಾರತದಲ್ಲಿ ಮುಂದುವರಿಸಲು ಬಿಸಿಸಿಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಒಂದೇ ತಿಂಗಳ ಅವಧಿಯಲ್ಲಿ 16 ತಂಡಗಳ ವಿಶ್ವ ಮಟ್ಟದ ಕೂಟವನ್ನು ಆಯೋಜಿಸಲು ಸಾಧ್ಯವೇ?’ ಎಂದು ಅಧಿಕಾರಿ ಪ್ರಶ್ನಿಸಿದರು.

“ವಿಶ್ವಕಪ್‌ ಎನ್ನುವುದು ಐಪಿಎಲ್‌ನಂತಲ್ಲ. ಅಕಸ್ಮಾತ್‌ ತಂಡವೊಂದಕ್ಕೆ ಬಯೋಬಬಲ್‌ನಲ್ಲೂ ಕೊರೊನಾ ಕಂಟಕ ಎದುರಾದರೆ ಸುಲಭದಲ್ಲಿ ಬದಲಿ ಆಟಗಾರರ ವ್ಯವಸ್ಥೆ ಮಾಡಲಾಗದು. ದುರ್ಬಲ ತಂಡ ಇದರಿಂದ ತೀವ್ರ ಸಂಕಟಕ್ಕೆ ಸಿಲುಕಲಿದೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next