Advertisement
ಎಲ್ಲವೂ ಅಂದುಕೊಂಡಂತೆ ನಡೆದರೆ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯದಲ್ಲಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಬೇಕಿತ್ತು ಆದರೆ ಇದೀಗ ಬಂದಿರುವ ಮಾಹಿತಿಗಳ ಪ್ರಕಾರ ಟಿ20 ವಿಶ್ವಕಪ್ ಮುಂದೂಡಲಾಗುತ್ತಿದ್ದು, ಈ ಬಗ್ಗೆ ಅಧಿಕೃತ ಪ್ರಕಟನೆಯು ಮುಂದಿನ ವಾರ ಹೊರಬೀಳಲಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸಭೆಯು ಮೇ 26ರಿಂದ 28ರ ವರೆಗೆ ನಡೆಯುತ್ತದೆ. ಈ ವೇಳೆ ವಿಶ್ವಕಪ್ ಬಗ್ಗೆ ಅಂತಿಮ ನಿರ್ಧಾರವನ್ನು ನಿರೀಕ್ಷಿಸಬಹುದಾಗಿದೆ.
ಈ ವಿಶ್ವಕಪ್ ಕೂಟ 2021ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಅವಧಿಯಲ್ಲಿ ಆಯೋಜನೆಯಾಗುವ ಸಾಧ್ಯತೆಯಿದೆ. ಆದರೆ ಮೂಲಗಳ ಪ್ರಕಾರ ಖಚಿತವಾಗಿ ಇಂತಹದ್ದೇ ತಿಂಗಳಿನಲ್ಲಿ ನಡೆಯತ್ತದೆ ಎನ್ನುವುದನ್ನು ಹೇಳಲು ಈಗ ಸಾಧ್ಯವಿಲ್ಲ. ಏಕೆಂದರೆ ಈ ವೇಳೆಯಲ್ಲಿ ಇಂಗ್ಲೆಂಡ್ ತಂಡದ ಭಾರತ ಪ್ರವಾಸದ ಮೇಲೂ ಪರಿಣಾಮ ಬೀಳಲಿದೆ ಮತ್ತು ಈ ಪ್ರಸ್ತಾವಕ್ಕೆ ಜಾಹೀರಾತು ಹಕ್ಕುದಾರರು ಒಪ್ಪಿಗೆ ಸೂಚಿಸುವ ಸಾಧ್ಯತೆ ಕಡಿಮೆಯಾಗಿದೆ ಎನ್ನಲಾಗಿದೆ. ಬಿಸಿಸಿಐ ಮನಸ್ಸು ಮಾಡಬೇಕು
ಐಸಿಸಿ ಫ್ಯೂಚರ್ ಟೂರ್ ಪ್ರೋಗ್ರಾಂನಂತೆ ಮುಂದಿನ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯಬೇಕು. ಹಾಗಾಗಿ ಮುಂದಿನ ವರ್ಷ ಚುಟುಕು ವಿಶ್ವಕಪ್ ಆಯೋಜಿಸಲು ಆಸೀಸ್‌ಗೆ ಅವಕಾಶ ನೀಡಲು ಬಿಸಿಸಿಐ ದೊಡ್ಡ ಮನಸ್ಸು ಮಾಡಬೇಕಿದೆ. ಹಾಗೆಯೇ ಭಾರತ ಇನ್ನೂ ಒಂದು ವರ್ಷ ಬಿಟ್ಟು 2022ನೇ ಇಸವಿಯಲ್ಲಿ ಟಿ20 ವಿಶ್ವಕಪ್ ಆಯೋಜಿಸಬಹುದಾಗಿದೆ. ಆದರೆ ಇದಕ್ಕೂ ಸಾಧ್ಯತೆ ಕಡಿಮೆ ಎನ್ನಲಾಗಿದೆ.
Related Articles
ಅಂತಿಮವಾಗಿ ಆಸ್ಟ್ರೇಲಿಯ ಎರಡು ವರ್ಷ ಬಿಟ್ಟು 2022ರಲ್ಲಿ ಟಿ20 ವಿಶ್ವಕಪ್ ಆಯೋಜಿಸುವ ಸಾಧ್ಯತೆಯಿದೆ. ಬೇರೆ ಯಾವುದೇ ಐಸಿಸಿ ಪ್ರಮುಖ ಟೂರ್ನಿಗಳು ಆಯೋಜನೆಯಾಗದಿದ್ದರೆ ಇದಕ್ಕೆ ಅವಕಾಶವಿರುತ್ತದೆ. ಒಟ್ಟಿನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಗೆ ಆಸ್ಟ್ರೇಲಿಯ ಸರಕಾರದ ನಿರ್ಧಾರ ಅಂತಿಮವೆನಿಸಲಿದೆ. 16 ತಂಡಗಳು ಭಾಗವಹಿಸುವ ಟೂರ್ನಿಯನ್ನು ಆಯೋಜಿಸುವಾಗ ದೊಡ್ಡ ಸವಾಲೇ ಎದುರಾಗಲಿದೆ. ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜಿಸುವ ಸಾಧ್ಯತೆ ಕಡಿಮೆಯಾಗಿದೆ. ಯಾಕೆಂದರೆ ಇದು ಆದಾಯದ ಮೇಲೆ ಪರಿಣಾಮ ಬೀರಲಿದೆ. ಒಟ್ಟಿನಲ್ಲಿ ಅಂತಿಮ ನಿರ್ಧಾರ ಇದೇ 28ರಂದು ಹೊರಬೀಳಲಿದೆ.
Advertisement