ಅಬುಧಾಬಿ: ಟಿ20 ವಿಶ್ವಕಪ್ ಕೂಟದಲ್ಲಿ ಸತತ 4ನೇ ಜಯದೊಂದಿಗೆ ಅಜೇಯ ಅಭಿಯಾನ ಮುಂದುವರಿಸಿದ ಪಾಕಿಸ್ಥಾನ ಸೆಮಿಫೈನಲ್ ಪ್ರವೇಶಿಸಿದೆ. ಮಂಗಳವಾರದ ಪಂದ್ಯದಲ್ಲಿ ಅದು ನಮೀಬಿಯಾವನ್ನು 45 ರನ್ನುಗಳಿಂದ ಮಣಿಸಿತು.
ಆರಂಭಿಕರಾದ ಬಾಬರ್ ಮತ್ತು ರಿಜ್ವಾನ್ ಅವರ ಶತಕದ ಜತೆಯಾಟದ ನೆರವಿನಿಂದ ಪಾಕ್ 2 ವಿಕೆಟಿಗೆ 189 ರನ್ ಬಾರಿಸಿದರೆ, ನಮೀಬಿಯಾ 5 ವಿಕೆಟಿಗೆ 144 ರನ್ ಮಾಡಿತು. ಡೇವಿಡ್ ವೀಸ್ ಅಜೇಯ 45, ಕ್ರೆಗ್ ವಿಲಿಯಮ್ಸ್ 40 ರನ್ ಹೊಡೆದರು.
ಬಾಬರ್-ರಿಜ್ವಾನ್ ನಮೀಬಿಯಾ ಬೌಲರ್‌ಗಳಿಗೆ ಸವಾಲಾಗುತ್ತಲೇ ಹೋಗಿ 13 ಓವರ್‌ಗಳಲ್ಲಿ 100 ರನ್ ಒಟ್ಟುಗೂಡಿಸಿದರು. 14.2 ಓವರ್‌ಗಳಿಂದ 113 ರನ್ ಪೇರಿಸಿದ ಬಳಿಕ ಈ ಜೋಡಿ ಬೇರ್ಪಟ್ಟಿತು. ಆಗ 70 ರನ್ ಮಾಡಿದ ನಾಯಕ ಬಾಬರ್ ಆಜಂ (49 ಎಸೆತ, 7 ಬೌಂಡರಿ) ವಿಕೆಟ್ ಬಿತ್ತು. ವೀಸ್ ಮೊದಲ ಬ್ರೇಕ್ ಒದಗಿಸಿದರು. ಭಾರತದ ವಿರುದ್ಧ ಇವರು 152 ರನ್ ರಾಶಿ ಹಾಕಿದ್ದರು.
ಇದನ್ನೂ ಓದಿ:ದ್ವೀಪರಾಷ್ಟ್ರಗಳಿಗೆ ಮೋದಿ ಗಿಫ್ಟ್ : ಪ್ರಾಕೃತಿಕ ವಿಕೋಪ ತಡೆಯಲು ಇಸ್ರೋದಿಂದ ವಿಶೇಷ ವ್ಯವಸ್ಥೆ
ಫಕರ್ ಜಮಾನ್ (5) ಹೆಚ್ಚು ಹೊತ್ತು ನಿಲ್ಲಲಿಲ್ಲ. ಇನ್ನೊಂದು ತುದಿಯಲ್ಲಿ ತುಸು ನಿಧಾನ ಗತಿಯಲ್ಲಿ ಆಡುತ್ತಿದ್ದ ರಿಜ್ವಾನ್ ಅವರನ್ನು ಮೊಹಮ್ಮದ್ ಹಫೀಜ್ ಕೂಡಿಕೊಂಡ ಬಳಿಕ ಪಾಕ್ ರನ್‌ಗತಿಯಲ್ಲಿ ಭರ್ಜರಿ ಏರಿಕೆ ಕಂಡುಬಂತು. ಇವರು ಮುರಿಯದ 3ನೇ ವಿಕೆಟಿಗೆ ಕೇವಲ 26 ಎಸೆತಗಳಿಂದ 67 ರನ್ ಜತೆಯಾಟ ನಡೆಸಿ ಆರ್ಭಟಿಸಿದರು. ರಿಜ್ವಾನ್ 50 ಎಸೆತಗಳಿಂದ 79 ರನ್ (8 ಬೌಂಡರಿ, 4 ಸಿಕ್ಸರ್).
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-2 ವಿಕೆಟಿಗೆ 189 (ರಿಜ್ವಾನ್ ಔಟಾಗದೆ 79, ಬಾಬರ್ 70, ಹಫೀಜ್ ಔಟಾಗದೆ 32, ವೀಸ್ 30ಕ್ಕೆ 1, ಫ್ರೈಲಿಂಕ್ 31ಕ್ಕೆ 1). ನಮೀಬಿಯಾ- 5 ವಿಕೆಟಿಗೆ 144 (ವೀಸ್ ಔಟಾಗದೆ 43, ವಿಲಿಯಮ್ಸ್ 40, ಬಾರ್ಡ್ 29, ಇಮಾದ್ 13ಕ್ಕೆ 1, ಹಸನ್ ಅಲಿ 22ಕ್ಕೆ 1). ಪಂದ್ಯಶ್ರೇಷ್ಠ: ಮೊಹಮ್ಮದ್ ರಿಜ್ವಾನ್.