Advertisement

ಟಿ20 ವಿಶ್ವಕಪ್‌ : ಇಂಗ್ಲೆಂಡ್‌ ಸೆಮಿಫೈನಲ್‌ ಸಂಭ್ರಮ

11:27 PM Nov 01, 2021 | Team Udayavani |

ಶಾರ್ಜಾ: ನಿರಂತರ 4ನೇ ಜಯ ಸಾಧಿಸಿದ ಇಂಗ್ಲೆಂಡ್‌ ಟಿ20 ವಿಶ್ವಕಪ್‌ ಸೆಮಿಫೈನಲ್‌ಗೆ ಲಗ್ಗೆ ಹಾಕಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

ಆರಂಭಕಾರ ಜಾಸ್‌ ಬಟ್ಲರ್‌ ಅವರ ಬೊಂಬಾಟ್‌ ಶತಕ ಸಾಹಸದಿಂದ ಶ್ರೀಲಂಕಾ ಎದುರಿನ ಗ್ರೂಪ್‌ ಒಂದರ ಮುಖಾಮುಖೀಯನ್ನು 26 ರನ್ನುಗಳಿಂದ ಗೆಲ್ಲುವ ಮೂಲಕ ಇಂಗ್ಲೆಂಡ್‌ ಈ ಗೌರವ ಸಂಪಾದಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ 4 ವಿಕೆಟಿಗೆ 163 ರನ್‌ ಪೇರಿಸಿತು. ಇದರಲ್ಲಿ ಬಟ್ಲರ್‌ ಕೊಡುಗೆ ಅಜೇಯ 101. ಶ್ರೀಲಂಕಾ 19 ಓವರ್‌ಗಳಲ್ಲಿ 137ಕ್ಕೆ ಕುಸಿಯಿತು. ಈ ಸೋಲಿನಿಂದ ಲಂಕಾ ನಾಕೌಟ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.

ಹಸರಂಗ ಕ್ರೀಸಿನಲ್ಲಿ ಇರುವಷ್ಟು ಹೊತ್ತು ಶ್ರೀಲಂಕಾ ಗೆಲುವಿನ ನಿರೀಕ್ಷೆಯಲ್ಲಿತ್ತು (21 ಎಸೆತ, 34 ರನ್‌). ನಾಯಕ ದಸುನ್‌ ಶಣಕ (26) ಅವರೊಂದಿಗೆ 6ನೇ ವಿಕೆಟಿಗೆ 53 ರನ್‌ ಒಟ್ಟುಗೂಡಿಸಿ ಇಂಗ್ಲೆಂಡಿಗೆ ಬೆದರಿಕೆಯೊಡ್ಡಿದರು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಇಂಗ್ಲೆಂಡ್‌ ಕೈ ಮೇಲಾಯಿತು.

ಬಟ್ಲರ್‌ ಸೂಪರ್‌ ಆಟ
ಚಮೀರ ಅವರ ಇನ್ನಿಂಗ್ಸಿನ ಅಂತಿಮ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಬಟ್ಲರ್‌ ತಮ್ಮ ಚೊಚ್ಚಲ ಟಿ20 ಸೆಂಚುರಿ ಸಂಭ್ರಮ ಆಚರಿಸಿದರು. ಇದು ಈ ವಿಶ್ವಕಪ್‌ ಕೂಟದ ಮೊದಲ ಶತಕವೂ ಆಗಿತ್ತು.

Advertisement

20ನೇ ಓವರ್‌ ಆರಂಭವಾಗುವಾಗ ಬಟ್ಲರ್‌ 87ರಲ್ಲಿದ್ದರು. ಅಂತಿಮ ಎಸೆತ ಎದುರಿಸುವಾಗ 95ಕ್ಕೆ ಬಂದು ನಿಂತಿದ್ದರು. ಆ ಓವರಿನ ಎಲ್ಲ 14 ರನ್‌ ಬಟ್ಲರ್‌ ಬ್ಯಾಟಿನಿಂದಲೇ ಬಂತು. 67 ಎಸೆತ ಎದುರಿಸಿದ ಬಟ್ಲರ್‌ 6 ಫೋರ್‌, 6 ಸಿಕ್ಸರ್‌ ಸಿಡಿಸಿದರು. ಇವರ ಪ್ರಚಂಡ ಪರಾಕ್ರಮದಿಂದಾಗಿ ಅಂತಿಮ 10 ಓವರ್‌ಗಳಲ್ಲಿ 116 ರನ್‌ ಹರಿದು ಬಂತು. ಮೊದಲ 10 ಓವರ್‌ಗಳಲ್ಲಿ ಇಂಗ್ಲೆಂಡ್‌ 3ಕ್ಕೆ 47 ರನ್‌ ಗಳಿಸಿ ಸಂಕಟದ ಸ್ಥಿತಿಯಲ್ಲಿತ್ತು.

ಇದನ್ನೂ ಓದಿ:ದಿಟ್ಟತನದ ಕೊರತೆ ಕಾಡಿತು: ವಿರಾಟ್‌ ಕೊಹ್ಲಿ

ಬಟ್ಲರ್‌ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡಿದ್ದರಿಂದ ಇಂಗ್ಲೆಂಡ್‌ ಕುಸಿತದಿಂದ ಪಾರಾಯಿತು. ಅವರಿಗೆ ನಾಯಕ ಮಾರ್ಗನ್‌ ಉತ್ತಮ ಬೆಂಬಲವಿತ್ತರು. 12 ಓವರ್‌ ಮುಕ್ತಾಯಕ್ಕೆ 61 ರನ್‌ ಮಾಡಿದ್ದ ಇಂಗ್ಲೆಂಡ್‌, 15 ಓವರ್‌ಗಳ ಅಂತ್ಯಕ್ಕೆ ಈ ಮೊತ್ತವನ್ನು ನೂರಕ್ಕೇರಿಸಿತು. 4ನೇ ವಿಕೆಟ್‌ ಜತೆಯಾಟ ಮುರಿಯುವಲ್ಲಿ ಶ್ರೀಲಂಕಾ ವಿಫ‌ಲವಾಗಿತ್ತು. 73 ಎಸೆತಗಳಲ್ಲಿ ಈ ಜೋಡಿಯಿಂದ ಶತಕದ ಜತೆಯಾಟ ಪೂರ್ತಿಗೊಂಡಿತು. 78 ಎಸೆತಗಳಿಂದ 112 ರನ್‌ ಪೇರಿಸಿದರು. ಮಾರ್ಗನ್‌ ಕೊಡುಗೆ 36 ಎಸೆತಗಳಿಂದ 40 ರನ್‌ (1 ಬೌಂಡರಿ, 3 ಸಿಕ್ಸರ್‌). 19ನೇ ಓವರ್‌ನಲ್ಲಿ ಹಸರಂಗ ಇಂಗ್ಲೆಂಡ್‌ ಕಪ್ತಾನನನ್ನು ಕ್ಲೀನ್‌ಬೌಲ್ಡ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-4 ವಿಕೆಟಿಗೆ 163 (ಬಟ್ಲರ್‌ ಔಟಾಗದೆ 101, ಮಾರ್ಗನ್‌ 40, ಹಸರಂಗ 21ಕ್ಕೆ 3). ಶ್ರೀಲಂಕಾ-19 ಓವರ್‌ಗಳಲ್ಲಿ 137 (ಹಸರಂಗ 34, ರಾಜಪಕ್ಷ 26, ಶಣಕ 26, ರಶೀದ್‌ 19ಕ್ಕೆ 2, ಜೋರ್ಡನ್‌ 24ಕ್ಕೆ 2). ಪಂದ್ಯಶ್ರೇಷ್ಠ: ಜಾಸ್‌ ಬಟ್ಲರ್‌

Advertisement

Udayavani is now on Telegram. Click here to join our channel and stay updated with the latest news.

Next